
ನವದೆಹಲಿ, 05 ಆಗಸ್ಟ್ (ಹಿ.ಸ.):
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋವನ್ನು ಫೇಸ್‌ಬುಕ್‌ನಿಂದ ತಾತ್ಕಾಲಿಕವಾಗಿ ತೆಗೆದುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸತ್ತಿನ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಮೂರು ದಿನಗಳೊಳಗೆ ಬೇಷರತ್ ಕ್ಷಮೆಯಾಚಿಸುವಂತೆ ಸೂಚಿಸಿದೆ.
ನಿಗದಿತ ಅವಧಿಯಲ್ಲಿ ಕ್ಷಮೆಯಾಚಿಸದಿದ್ದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(3) ಅಡಿಯಲ್ಲಿ ಮೆಟಾಗೆ ದೊರೆಯುತ್ತಿರುವ ಕಾನೂನು ರಕ್ಷಣೆ ಹಾಗೂ ವಿನಾಯಿತಿಯನ್ನು ಹಿಂಪಡೆಯುವ ಬಗ್ಗೆ ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಜುಲೈ 23ರಂದು ಪ್ರಧಾನಿ ಮೋದಿ ಅವರು ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿದ್ಯಾರ್ಥಿಗಳು ಮತ್ತು ಯುವಕರನ್ನು ಉದ್ದೇಶಿಸಿ ಮಾಡಿದ್ದ ಭಾಷಣದ ವಿಡಿಯೋ ಸುಮಾರು 5–6 ಗಂಟೆಗಳ ಕಾಲ ಫೇಸ್‌ಬುಕ್‌ನಿಂದ ಕಾಣೆಯಾಗಿದ್ದ ಘಟನೆಗೆ ಸಮಿತಿ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಮೆಟಾ ಅಧಿಕಾರಿಗಳ ನಡುವೆ ಎರಡು ದಿನಗಳ ಸಭೆ ನವದೆಹಲಿಯಲ್ಲಿ ಆರಂಭವಾಗಿದ್ದು, ಮೆಟಾದ ಜಾಗತಿಕ ತಂಡವನ್ನೂ ಭಾರತಕ್ಕೆ ಕರೆಸಲಾಗಿದೆ.
ಸಭೆಯಲ್ಲಿ ಬಾಲ ಲೈಂಗಿಕ ದೌರ್ಜನ್ಯ ಹಾಗೂ ಮಹಿಳೆಯರ ವಿರುದ್ಧ ಅವಹೇಳನಕಾರಿ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಿಂದ ತ್ವರಿತವಾಗಿ ತೆಗೆದುಹಾಕದಿರುವ ಕುರಿತು ಸಹ ಆತಂಕ ವ್ಯಕ್ತಪಡಿಸಲಾಯಿತು. ಜೊತೆಗೆ ಹೂಡಿಕೆ ವಂಚನೆ ಪ್ರಕರಣದಲ್ಲಿ ಗೂಗಲ್ ಇಂಡಿಯಾ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವ ವಿಷಯ ಚರ್ಚೆಗೆ ಬಂದಿತು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.