
ಬೆಂಗಳೂರು, 31 ಆಗಸ್ಟ್ (ಹಿ.ಸ.):
ಆ್ಯಂಕರ್:ರೈತರು ತಮ್ಮ ಆಸ್ತಿ ಕಳೆದುಕೊಳ್ಳುವಾಗ ಅನುಭವಿಸುವ ನೋವಿನ ಅರಿವು ನನಗಿದೆ. ನಾನೂ ರೈತನ ಮಗನಾಗಿದ್ದು, ಆ ನೋವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಡಾ. ಕೆ. ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ ಭೂ ಮಾಲೀಕರು ಹಾಗೂ ರೈತರಿಗೆ ನೆಹರು ತಾರಾಲಯದಲ್ಲಿ ಸೋಮವಾರ ಭೂ ಪರಿಹಾರ ವಿತರಿಸಿ ಅವರು ಮಾತನಾಡಿದರು.
ಶಿವರಾಮ ಕಾರಂತ ಬಡಾವಣೆಯ ಭೂ ಮಾಲೀಕರಿಗೆ ಕಳೆದ ಮೂರು ವರ್ಷಗಳಿಂದಲೇ ಪರಿಹಾರ ನೀಡಲು ಪ್ರಯತ್ನಿಸಲಾಗಿತ್ತು. ಅರ್ಜಿಗಳನ್ನು ಆಹ್ವಾನಿಸಿದ್ದರೂ ನ್ಯಾಯಾಲಯದ ತಡೆಯಾಜ್ಞೆಯಿಂದ ಪರಿಹಾರ ವಿತರಣೆ ವಿಳಂಬವಾಯಿತು. ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸುವ ಸಂದರ್ಭದಲ್ಲಿ ತಡೆಯಾಜ್ಞೆ ಬಂದಿದ್ದರಿಂದ ಸರ್ಕಾರಕ್ಕೆ ಪ್ರತಿ ವರ್ಷ ಸುಮಾರು ₹1,000 ಕೋಟಿ ನಷ್ಟವಾಗಿದೆ ಎಂದು ಹೇಳಿದರು.
3,200 ರೈತರ ಹೆಸರು ದಾಖಲಿಸಲು ನಿರ್ಧಾರ
ಶಿವರಾಮ ಕಾರಂತ ಬಡಾವಣೆಗೆ ಜಮೀನು ನೀಡಿದ 3,200 ರೈತರ ಹೆಸರುಗಳನ್ನು ‘ವಾಲ್ ಆಫ್ ಗ್ರಾಟಿಟ್ಯೂಡ್’ನಲ್ಲಿ ದಾಖಲಿಸಲಾಗುವುದು. ಬಡಾವಣೆ ನಿರ್ಮಾಣಕ್ಕೆ ಸುಮಾರು ₹16 ಸಾವಿರ ಕೋಟಿ ಹೂಡಿಕೆ ಮಾಡಲಾಗಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳು ಹೈಕೋರ್ಟ್‌ನ ಏಕಸದಸ್ಯ ಹಾಗೂ ವಿಭಾಗೀಯ ಪೀಠಗಳನ್ನು ದಾಟಿ ಸುಪ್ರೀಂ ಕೋರ್ಟ್‌ವರೆಗೂ ಸಾಗಿದ್ದವು. ನ್ಯಾಯಾಲಯಗಳ ನಿರ್ದೇಶನ ಮತ್ತು ಸರ್ಕಾರದ ಆದೇಶಗಳ ಹಿನ್ನೆಲೆಯಲ್ಲಿ ಬಿಡಿಎ ಭೂಸ್ವಾಧೀನ ಹಾಗೂ ಬಡಾವಣೆ ಅಭಿವೃದ್ಧಿ ಪ್ರಕ್ರಿಯೆ ಮುಂದುವರಿಸಿದೆ ಎಂದರು.
ಖಾಸಗಿ ಬಡಾವಣೆಗಳಲ್ಲಿ ಶೇ.55ರಷ್ಟು ನಿವೇಶನಗಳನ್ನು ನೀಡಲು ಸಾಧ್ಯವಾಗುತ್ತದೆ. ಆದರೆ ಉತ್ತಮ ರಸ್ತೆಗಳು ಹಾಗೂ ಸಾರ್ವಜನಿಕ ಸೌಲಭ್ಯಗಳನ್ನು ಕಲ್ಪಿಸಿರುವ ಕಾರಣ ಶಿವರಾಮ ಕಾರಂತ ಬಡಾವಣೆಯಲ್ಲಿ ಶೇ.42ರಷ್ಟು ಮಾತ್ರ ನಿವೇಶನಗಳನ್ನು ನೀಡಲು ಸಾಧ್ಯವಾಗಿದೆ. ಭೂ ಮಾಲೀಕರಿಗೆ ಎಕರೆಗೆ ಶೇ.40ರಷ್ಟು ಅಭಿವೃದ್ಧಿಪಡಿಸಿದ ಭೂಮಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಲ್ಲ ಸರ್ಕಾರಗಳ ಕೊಡುಗೆ
ಬೆಂಗಳೂರು ಸುತ್ತಮುತ್ತ ನಿರ್ಮಾಣಗೊಂಡಿರುವ ಅರ್ಕಾವತಿ, ಕೆಂಪೇಗೌಡ ಹಾಗೂ ಶಿವರಾಮ ಕಾರಂತ ಬಡಾವಣೆಗಳ ಅಭಿವೃದ್ಧಿಗೆ ವಿವಿಧ ಸರ್ಕಾರಗಳು ಕೊಡುಗೆ ನೀಡಿವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರು ಬಿಡದಿಯಲ್ಲಿ ಕೈಗಾರಿಕಾ ಪಟ್ಟಣ ನಿರ್ಮಿಸಲು ಮುಂದಾದಾಗ ರೈತರೊಂದಿಗೆ ಚರ್ಚಿಸಿ ಎಕರೆಗೆ ₹5–6 ಲಕ್ಷದಂತೆ ಜಮೀನು ಪಡೆಯಲಾಗಿತ್ತು. ಬಳಿಕ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಜಪಾನ್ ಟೌನ್‌ಶಿಪ್ ನಿರ್ಮಾಣದ ಪ್ರಸ್ತಾವವೂ ಬಂದಿತ್ತು ಎಂದು ಶಿವಕುಮಾರ್ ಹೇಳಿದರು.
‘ರೈತರ ಮಕ್ಕಳು’ ಎಂದು ಹೇಳಿಕೊಂಡವರ ಕಾಲದಲ್ಲೇ ಅಧಿಸೂಚನೆ
ಶಿವರಾಮ ಕಾರಂತ ಬಡಾವಣೆಗೆ 2008ರಲ್ಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ‘ರೈತರ ಮಕ್ಕಳು’ ಎಂದು ಹೇಳಿಕೊಳ್ಳುವವರ ಆಡಳಿತದ ಅವಧಿಯಲ್ಲೇ ಈ ಪ್ರಕ್ರಿಯೆ ಆರಂಭವಾಗಿತ್ತು ಎಂದು ಪರೋಕ್ಷವಾಗಿ ವಿರೋಧ ಪಕ್ಷದ ನಾಯಕರನ್ನು ಟೀಕಿಸಿದರು.
ರೈತರು ಭೂಮಿ ಕಳೆದುಕೊಳ್ಳುವ ಸಂದರ್ಭದಲ್ಲಿ ಲಂಚ ನೀಡಬೇಕಾದ ಪರಿಸ್ಥಿತಿ ಇತ್ತು. ಇದೀಗ ರೈತರು ಅಲೆಯಬಾರದು, ಲಂಚ ಕೊಡಬಾರದು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ನಿವೇಶನ ಮಾರಿಕೊಳ್ಳದಂತೆ ಮನವಿ
ತಮ್ಮ ಭೂಮಿಗೆ ಬದಲಾಗಿ ನಿವೇಶನ ಕೋರಿದವರಿಗೆ ಅವರ ಭೂಮಿಯಲ್ಲಿಯೇ ನಿವೇಶನ ನೀಡಲಾಗುತ್ತಿದೆ. ಆದರೆ ಪಡೆದ ನಿವೇಶನಗಳನ್ನು ಮಾರಿಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ಅವುಗಳ ಬೆಲೆ ಎಷ್ಟಾಗಲಿದೆ ಎಂಬುದನ್ನು ಈಗ ಊಹಿಸಲು ಸಾಧ್ಯವಿಲ್ಲ ಎಂದು ರೈತರಿಗೆ ಶಿವಕುಮಾರ್ ಕಿವಿಮಾತು ಹೇಳಿದರು.
ಬೆಂಗಳೂರಿನ ಬೆಳವಣಿಗೆಗೆ ಹೊಸ ಯೋಜನೆ
ಶಿವರಾಮ ಕಾರಂತ ಬಡಾವಣೆ ಸುಮಾರು 3,700 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಸುಮಾರು ಮೂರು ಕೋಟಿ ಚದರ ಅಡಿ ನಿವೇಶನಗಳನ್ನು ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ. 2008ರಿಂದ ವಿಳಂಬವಾಗಿರುವ ಕಾರಣ ಕಾಮಗಾರಿಯ ವೆಚ್ಚ ಹಾಗೂ ಭೂಮಿಯ ಮೌಲ್ಯ ಹೆಚ್ಚಾಗಿದೆ. ಹೀಗಾಗಿ ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆಗೆ ಸಮಯ ಬೇಕಾಗಿದೆ ಎಂದರು.
ಸಂಚಾರ ದಟ್ಟಣೆ ಕಡಿಮೆ ಮಾಡಲು ₹26 ಸಾವಿರ ಕೋಟಿ ಸಾಲ ಪಡೆದು ಬೆಂಗಳೂರು ವ್ಯವಹಾರ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಪೆರಿಫೆರಲ್ ರಸ್ತೆಯ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಕೋಗಿಲುವರೆಗೆ ಕಾಮಗಾರಿ ನಡೆಯುತ್ತಿದೆ. ಶೇ.80ರಷ್ಟು ಭೂಸ್ವಾಧೀನಕ್ಕೆ ಒಪ್ಪಿಗೆ ದೊರೆತಿದ್ದು, ರಸ್ತೆ ಪೂರ್ಣಗೊಂಡ ಬಳಿಕ ಸುತ್ತಮುತ್ತಲಿನ ಆಸ್ತಿಗಳ ಮೌಲ್ಯ ಹೆಚ್ಚಲಿದೆ ಎಂದು ಹೇಳಿದರು.
ಬಿಡಿಎ ಯೋಜನೆಗಳಿಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಹಳೆಯ ದರ ನೀಡುವ ಬದಲು ನ್ಯಾಯಯುತ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಿದೆ. ಮಾರ್ಗಸೂಚಿ ಮೌಲ್ಯದ ದುಪ್ಪಟ್ಟು ಪರಿಹಾರ, ದುಪ್ಪಟ್ಟು ವರ್ಗಾವಣೆ ಅಭಿವೃದ್ಧಿ ಹಕ್ಕು, ಶೇ.35ರಷ್ಟು ವಾಣಿಜ್ಯ ನಿವೇಶನ, ಹೆಚ್ಚುವರಿ ನಿರ್ಮಾಣ ಪ್ರಮಾಣ ಅಥವಾ ಶೇ.40ರಷ್ಟು ಅಭಿವೃದ್ಧಿಪಡಿಸಿದ ಭೂಮಿ ನೀಡುವ ಆಯ್ಕೆಗಳನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗಿದೆ ಎಂದು ತಿಳಿಸಿದರು.
‘ತೇಗದ ಸಿರಿ’ ಯೋಜನೆ
ಪ್ರತಿ ವರ್ಷ ಕನಿಷ್ಠ ಒಂದು ಕೋಟಿ ತೇಗದ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಸರ್ಕಾರವೇ ಸಸಿಗಳನ್ನು ಒದಗಿಸಲಿದ್ದು, ರೈತರು ಅವುಗಳನ್ನು ಸಂರಕ್ಷಿಸಬೇಕು. 25 ವರ್ಷಗಳನ್ನು ಗುರಿಯಾಗಿಸಿಕೊಂಡಿರುವ ಯೋಜನೆಯಲ್ಲಿ ತೇಗದ ಮರದಿಂದ ಬರುವ ಆದಾಯದಲ್ಲಿ ಶೇ.70ರಷ್ಟು ರೈತರಿಗೆ ಹಾಗೂ ಶೇ.30ರಷ್ಟು ಸರ್ಕಾರಕ್ಕೆ ಹಂಚಿಕೆಯಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಭೂ ಮಾಲೀಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ದಾಖಲೆಗಳನ್ನು ಒದಗಿಸಲಾಗುವುದು. ಶಿವರಾಮ ಕಾರಂತ ಬಡಾವಣೆ ಉತ್ತಮ ಗುಣಮಟ್ಟದ ಬಡಾವಣೆಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಬಡಾವಣೆ ನಿರ್ಮಿಸುವುದು ಕಷ್ಟ ಎಂದು ಅವರು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.