
ಬೆಂಗಳೂರು, 31 ಆಗಸ್ಟ್ (ಹಿ.ಸ.):
ಆ್ಯಂಕರ್:ಹಾಸನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣದ ಕಾಮಗಾರಿಯನ್ನು ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಪಡಿಸುವಂತೆ ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿಕಾಸಸೌಧದಲ್ಲಿ ಸೋಮವಾರ ನಡೆದ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಕಾಮಗಾರಿಯ ಪ್ರಗತಿ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ಶೀಘ್ರ ಉದ್ಘಾಟಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವುದಾಗಿ ಭರವಸೆ ನೀಡಿದ್ದೇನೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಿದ್ದು, ಇದು ಸರ್ಕಾರದ ಪ್ರತಿಷ್ಠೆಯ ವಿಚಾರವಾಗಿದೆ. ಹೀಗಾಗಿ ಅಧಿಕಾರಿಗಳು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಶಿವಲಿಂಗೇಗೌಡ ಸೂಚಿಸಿದರು.
ಹೆಚ್ಚುವರಿ ವೆಚ್ಚಕ್ಕೆ ಶೇ.50ರಷ್ಟು ಹೊಣೆ
ಮಂಜೂರಾದ ಅನುದಾನಕ್ಕಿಂತ ಹೆಚ್ಚುವರಿಯಾಗಿ ಕಾಮಗಾರಿಗೆ ಹಣ ಖರ್ಚಾಗಿರುವ ಕುರಿತು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಈ ಹೆಚ್ಚುವರಿ ಮೊತ್ತವನ್ನು ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆಗಳು ತಲಾ ಶೇ.50ರಷ್ಟು ಭರಿಸುವಂತೆ ಸಚಿವರು ಸೂಚಿಸಿದರು. ಇದಕ್ಕೆ ಎರಡೂ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲೇ ಒಪ್ಪಿಗೆ ಸೂಚಿಸಿದರು.
ಹೆಚ್ಚುವರಿಯಾಗಿ ಖರ್ಚಾಗಿರುವ ಮೊತ್ತದ ಸಂಪೂರ್ಣ ವಿವರವನ್ನು ಅಧಿಕಾರಿಗಳು ಒದಗಿಸಬೇಕು ಎಂದು ಸಚಿವರು ನಿರ್ದೇಶಿಸಿದರು.
ಪ್ರಸ್ತುತ ಎರಡು ಮಹಡಿಗಳ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮೂರನೇ ಮಹಡಿ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದರು. ಕಟ್ಟಡದ ಮೂರನೇ ಮಹಡಿಯ ಅಗತ್ಯತೆ ಹಾಗೂ ಮೂಲಸೌಕರ್ಯಗಳ ಗುಣಮಟ್ಟವನ್ನು ಖುದ್ದಾಗಿ ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡುವುದಾಗಿ ಸಚಿವರು ಹೇಳಿದರು.
ಅದ್ಧೂರಿ ಹಾಸನಾಂಬ ಉತ್ಸವ
ಈ ಬಾರಿ ಹಾಸನಾಂಬ ಉತ್ಸವವನ್ನು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶಿವಲಿಂಗೇಗೌಡ ತಿಳಿಸಿದರು.
ಸಭೆಯಲ್ಲಿ ಹಿರಿಯ ಅಧಿಕಾರಿಗಳು, ಹಿರಿಯ ಎಂಜಿನಿಯರ್‌ಗಳು, ಗುತ್ತಿಗೆದಾರರು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.