
ಕೋಲಾರ, ಆಗಸ್ಟ್ ೩೧(ಹಿ.ಸ)
ಆ್ಯಂಕರ್ : ಸರ್ಕಾರದ ಸೌಲಭ್ಯಗಳನ್ನು ಬಡವರ ಹಾಗೂ ರೈತರ ಮನೆಬಾಗಿಲಿಗೆ ತಲುಪಿಸುವುದೇ ಸರ್ಕಾರದ ಉದ್ದೇಶವಾಗಿದೆ. ಅಧಿಕಾರಿಗಳು ಕೇವಲ ಕಾಲಹರಣ ಮಾಡದೆ ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕು ಎಂದು ಶಾಸಕ ಡಾ. ಕೊತ್ತೂರು ಜಿ. ಮಂಜುನಾಥ್ ಎಚ್ಚರಿಕೆ ನೀಡಿದರು.
ಕೋಲಾರ ಜಿಲ್ಲೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಸೆಪ್ಟೆಂಬರ್ ೫ರಂದು ಹಮ್ಮಿಕೊಂಡಿರುವ 'ಪ್ರಜಾಸೇವಾ ಆಂದೋಲನ'ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೆಪ್ಟೆಂಬರ್ ೫ರಂದು ಕೋಲಾರದ ಜೂನಿಯರ್ ಕಾಲೇಜು ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಅಂದು ಬೆಳಗ್ಗೆ ೯:೦೦ ರಿಂದ ೧೧:೦೦ ಗಂಟೆಯವರೆಗೆ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ನಡೆಯಲಿದ್ದು, ತಕ್ಷಣವೇ ಆಯಾ ಇಲಾಖೆಗಳ ಮಟ್ಟದಲ್ಲಿ ವಿಲೇವಾರಿ ಪ್ರಕ್ರಿಯೆ ಆರಂಭವಾಗಲಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ ಪ್ರತಿಯೊಂದು ಇಲಾಖೆಯು ಪ್ರತ್ಯೇಕ ಕೌಂಟರ್ ತೆರೆಯುವುದು ಕಡ್ಡಾಯವಾಗಿದ್ದು, ಕಂಪ್ಯೂಟರ್, ಪ್ರಿಂಟರ್, ಇಂಟರ್ನೆಟ್ ಸಂಪರ್ಕ ಹಾಗೂ ಡೇಟಾ ಎಂಟ್ರಿ ಆಪರೇಟರ್ಗಳನ್ನು ಕಡ್ಡಾಯವಾಗಿ ನಿಯೋಜಿಸಿಕೊಳ್ಳುವಂತೆ ಸೂಚಿಸಲಾಗಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರವಿರುವ ಸರ್ಕಾರದ ನಿಗದಿತ ಅರ್ಜಿ ನಮೂನೆಯಲ್ಲೇ ದೂರುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಪರಿಹಾರ ಒದಗಿಸಬೇಕು ಅಥವಾ ನಿರ್ದಿಷ್ಟ ಕಾಲಮಿತಿಯ ಹಿಂಬರಹವನ್ನು (ಎಂಡಾರ್ಸ್ಮೆಟ್) ನೀಡಲೇಬೇಕು ಎಂದು ತಿಳಿಸಿದರು.
ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸ್ಮಶಾನ, ರಸ್ತೆ, ಕೆರೆ, ಗುಂಡುತೋಪು ಹಾಗೂ ಗೋಮಾಳ ಒತ್ತುವರಿ ತೆರವಿಗೆ ವಿಶೇಷ ಆದ್ಯತೆ ನೀಡಬೇಕು ಮತ್ತು ತಾಂತ್ರಿಕ ಕಾರಣಗಳಿಂದ ರದ್ದಾಗಿರುವ ವೃದ್ಧಾಪ್ಯ, ವಿಧವಾ ಹಾಗೂ ವಿಕಲಚೇತನ ಪಿಂಚಣಿಗಳ ಮರುಪಾವತಿ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಶಾಸಕರು ನಿರ್ದೇಶನ ನೀಡಿದರು. ಪೊಲೀಸ್ ಇಲಾಖೆಯು ಆನ್ಲೈನ್ ಗೇಮ್ಸ್, ಇಸ್ಪೀಟ್, ಮಟ್ಕಾ, ಡ್ರಗ್ಸ್ ಮಾಫಿಯಾ ಹಾಗೂ ಅನಧಿಕೃತ ಕ್ಲಬ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅಬಕಾರಿ ಇಲಾಖೆಯು ಪೆಟ್ಟಿ ಅಂಗಡಿಗಳು ಹಾಗೂ ಡಾಬಾಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಸೂಚಿಸಲಾಯಿತು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಕ್ರಮವಾಗಿ ಇ-ಸ್ವತ್ತು ಮತ್ತು ಖಾತೆಗಳನ್ನು ಮಾಡಿಕೊಡುವ ಪಿಡಿಒಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಜಿ.ಪಂ. ಸಿಇಒ ಅವರಿಗೆ ಸೂಚನೆ ನೀಡಲಾಯಿತು.
ಪ್ರಜಾಸೇವಾ ಆಂದೋಲನದ ಕುರಿತು ಜನರಲ್ಲಿ ಅರಿವು ಮೂಡಿಸಲು ತಾಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಆಟೋ ಪ್ರಚಾರ, ಫ್ಲೆಕ್ಸ್, ಕರಪತ್ರ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದ ಸ್ಥಳದಲ್ಲಿ ಐದು ಸಾವಿರ ಜನರಿಗೆ ಆಸನ ವ್ಯವಸ್ಥೆ, ಕುಡಿಯುವ ನೀರು, ಮಹಿಳೆಯರು ಮತ್ತು ವಯೋವೃದ್ಧರಿಗೆ ಪ್ರತ್ಯೇಕ ನೆರವು ಹಾಗೂ ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸಾ ಘಟಕವನ್ನು ತೆರೆಯಲು ಸೂಚಿಸಲಾಯಿತು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ. ಎಲ್. ಅನಿಲ್ ಕುಮಾರ್, ಜಿಲ್ಲಾಧಿಕಾರಿ ಎಂ. ಆರ್. ರವಿಕುಮಾರ್, ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ. ಪ್ರವೀಣ್ ಪಿ ಬಾಗೇವಾಡಿ, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಕೆಜಿಎಫ್ ವರಿಷ್ಟಾಧಿಕಾರಿ ಶಿವಾಂಷು ರಜಪೂತ, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ,ಉಪವಿಭಗಾಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್,ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಸರಿನಾ ಸಿಕ್ಕಲಿಗರ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್