
ನವದೆಹಲಿ, 29 ಆಗಸ್ಟ್ (ಹಿ.ಸ.):
ಆ್ಯಂಕರ್:ಅಲಿಪ್ತ ಚಳವಳಿಯ ಮೊದಲ ಶೃಂಗಸಭೆಯ 65ನೇ ವರ್ಷಾಚರಣೆ ಅಂಗವಾಗಿ ಸರ್ಬಿಯಾದ ರಾಜಧಾನಿ ಬೆಲ್ಗ್ರೇಡ್‌ನಲ್ಲಿ ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ನಡೆಯಲಿರುವ ಉನ್ನತ ಮಟ್ಟದ ಸ್ಮರಣಾ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ.
ವಿದೇಶಾಂಗ ಸಚಿವಾಲಯದ ಪ್ರಕಾರ, ‘ಅಲಿಪ್ತತೆಯ ಪರಂಪರೆ: ಇಂದಿನ ಜಗತ್ತಿಗೆ ಪಾಠಗಳು’ ಎಂಬ ವಿಷಯದಡಿ ಕಾರ್ಯಕ್ರಮ ನಡೆಯಲಿದೆ. ಭಾರತ ಅಲಿಪ್ತ ಚಳವಳಿಯ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, ಅದರ ತತ್ವಗಳು ಹಾಗೂ ಮೌಲ್ಯಗಳ ಬದ್ಧತೆಯನ್ನು ಮುಂದುವರಿಸಿಕೊಂಡು ಬಂದಿದೆ.
ಪ್ರಸ್ತುತ ಅಲಿಪ್ತ ಚಳವಳಿಯಲ್ಲಿ 121 ಅಭಿವೃದ್ಧಿಶೀಲ ರಾಷ್ಟ್ರಗಳು ಸದಸ್ಯರಾಗಿವೆ. ಅಭಿವೃದ್ಧಿಶೀಲ ದೇಶಗಳಿಗೆ ಸಾಮಾನ್ಯ ವೇದಿಕೆ ಒದಗಿಸುವಲ್ಲಿ ಚಳವಳಿ ಮಹತ್ವದ ಪಾತ್ರ ವಹಿಸಿದೆ. ಇದರ ಸ್ಥಾಪನೆ ಹಾಗೂ ಉದ್ದೇಶಗಳನ್ನು ಮುಂದುವರಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ.
ಬೆಲ್ಗ್ರೇಡ್‌ನಲ್ಲಿ ನಡೆಯುವ ಸಭೆಯಲ್ಲಿ ಅಲಿಪ್ತತೆಯ ಪರಂಪರೆ ಹಾಗೂ ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯಲ್ಲಿ ಅದರ ಪ್ರಸ್ತುತತೆ ಕುರಿತು ಚರ್ಚೆ ನಡೆಯಲಿದೆ. ಅಲಿಪ್ತ ಚಳವಳಿಯ ಮೂಲ ತತ್ವಗಳು ಮತ್ತು ಇಂದಿನ ಅಂತರರಾಷ್ಟ್ರೀಯ ಪರಿಸ್ಥಿತಿಯಲ್ಲಿ ಅವುಗಳ ಪಾತ್ರದ ಬಗ್ಗೆಯೂ ವಿಚಾರ ವಿನಿಮಯ ನಡೆಯಲಿದೆ.
ಅಲಿಪ್ತ ಚಳವಳಿಯ ಮೊದಲ ರಾಷ್ಟ್ರಾಧ್ಯಕ್ಷರು ಮತ್ತು ಸರ್ಕಾರದ ಮುಖ್ಯಸ್ಥರ ಶೃಂಗಸಭೆ 1961ರ ಸೆಪ್ಟೆಂಬರ್‌ನಲ್ಲಿ ಬೆಲ್ಗ್ರೇಡ್‌ನಲ್ಲಿ ನಡೆದಿತ್ತು. ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಚಳವಳಿಯ ಪ್ರಮುಖ ಸಂಸ್ಥಾಪಕ ನಾಯಕರಲ್ಲಿ ಒಬ್ಬರಾಗಿದ್ದರು. ಯಾವುದೇ ಸೇನಾ ಒಕ್ಕೂಟದ ಭಾಗವಾಗದೆ ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸಲು ರಾಷ್ಟ್ರಗಳಿಗೆ ಸಾಮಾನ್ಯ ವೇದಿಕೆ ಒದಗಿಸುವುದು ಚಳವಳಿಯ ಪ್ರಮುಖ ಉದ್ದೇಶವಾಗಿತ್ತು.
ಅಭಿವೃದ್ಧಿಶೀಲ ರಾಷ್ಟ್ರಗಳ ಸಾರ್ವಭೌಮತೆ, ಸ್ವತಂತ್ರ ವಿದೇಶಾಂಗ ನೀತಿ, ಶಾಂತಿಯುತ ಸಹಬಾಳ್ವೆ ಮತ್ತು ಅಂತರರಾಷ್ಟ್ರೀಯ ಸಹಕಾರದಂತಹ ವಿಷಯಗಳನ್ನು ಭಾರತ ಅಲಿಪ್ತ ಚಳವಳಿಯ ಮೂಲಕ ನಿರಂತರವಾಗಿ ಪ್ರತಿಪಾದಿಸುತ್ತ ಬಂದಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.