
ಕಠ್ಮಂಡು, 28 ಆಗಸ್ಟ್ (ಹಿ.ಸ.):
ಆ್ಯಂಕರ್:ನೇಪಾಳದ ರಸುವಾ ಜಿಲ್ಲೆಯಲ್ಲಿ ಭೋಟೇಕೋಶಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಅಪಾರ ಪ್ರಮಾಣದ ಜೀವಹಾನಿ ಸಂಭವಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಇದುವರೆಗೆ 389 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 977 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಹಾಗೂ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ನಾಪತ್ತೆಯಾದವರಲ್ಲಿ 28 ಮಂದಿ ನೇಪಾಳ ಪೊಲೀಸ್ ಸಿಬ್ಬಂದಿ, 45 ಮಂದಿ ನೇಪಾಳ ಸೇನಾ ಸಿಬ್ಬಂದಿ, 13 ಮಂದಿ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ, 15 ಮಂದಿ ಕಸ್ಟಮ್ಸ್ ಇಲಾಖೆ ನೌಕರರು ಹಾಗೂ ನಾಲ್ವರು ವಲಸೆ ಕಚೇರಿ ಸಿಬ್ಬಂದಿ ಸೇರಿದ್ದಾರೆ. 517 ಮಂದಿ ವಿದೇಶಿ ಪ್ರಜೆಗಳು ಮತ್ತು ವಿದೇಶದಲ್ಲಿ ನೆಲೆಸಿರುವ 127 ಮಂದಿ ನೇಪಾಳಿ ನಾಗರಿಕರೂ ನಾಪತ್ತೆಯಾಗಿದ್ದಾರೆ. ಪ್ರವಾಹದಲ್ಲಿ 73 ಮಂದಿ ಗಾಯಗೊಂಡಿದ್ದಾರೆ.
ವಿವಿಧ ಆಸ್ಪತ್ರೆಗಳಲ್ಲಿ 52 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಒಟ್ಟು 13,295 ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು, 15 ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಹೆಲಿಕಾಪ್ಟರ್‌ಗಳ ಮೂಲಕ ಇದುವರೆಗೆ 1,976 ಮಂದಿಯನ್ನು ರಕ್ಷಿಸಲಾಗಿದೆ.
ಪ್ರಧಾನಮಂತ್ರಿ ಬಾಲೇಂದ್ರ ಶಾ ಅವರು ನುವಾಕೋಟ್ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಸವಾಲಿನದ್ದಾಗಿದ್ದು, ನಾಪತ್ತೆಯಾದವರ ಶೋಧ, ರಕ್ಷಣೆ, ಗಾಯಾಳುಗಳ ಚಿಕಿತ್ಸೆ ಹಾಗೂ ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಸುವಾಗಢಿ ಗಡಿ ಪ್ರದೇಶದ ಬಳಿ ಲೆಂಡೆ ನದಿಯ ಹರಿವು ಸ್ಥಗಿತಗೊಂಡು ಸುಮಾರು 0.11 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರೋವರ ನಿರ್ಮಾಣವಾಗಿದ್ದು, ಮತ್ತೆ ಪ್ರವಾಹ ಉಂಟಾಗುವ ಆತಂಕ ಎದುರಾಗಿದೆ. ನದಿ ತೀರದ ತಗ್ಗು ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರುವಂತೆ ನೇಪಾಳ ಸರ್ಕಾರ ಸೂಚಿಸಿದೆ.
63 ಭಾರತೀಯರ ರಕ್ಷಣೆ
ಪ್ರವಾಹದ ನಡುವೆ ನೇಪಾಳದ ತ್ರಿಶೂಲಿ-1 ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 63 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದೇ ವೇಳೆ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ತಮಿಳುನಾಡಿನ 21 ಮಂದಿಯನ್ನೂ ರಕ್ಷಿಸಲಾಗಿದೆ. ಸಂಪರ್ಕಕ್ಕೆ ಸಿಗದಿರುವ ಭಾರತೀಯರ ಸ್ಥಳ ಪತ್ತೆಹಚ್ಚಿ ಅವರ ಸುರಕ್ಷತೆ ಖಚಿತಪಡಿಸಲು ಪ್ರಯತ್ನಗಳು ಮುಂದುವರಿದಿವೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.