ಬೆಂಗಳೂರಿನಲ್ಲಿ ಮತ್ತೊಂದು ಕಾನೂನು ವಿವಿ ಸ್ಥಾಪನೆಗೆ ಉತ್ತರ ಕರ್ನಾಟಕ ಶಾಸಕರ ತೀವ್ರ ವಿರೋಧ
ಬೆಂಗಳೂರಿನಲ್ಲಿ ಹೊಸ ಕಾನೂನು ವಿವಿ ಸ್ಥಾಪನೆಗೆ
NK MLAs Oppose New Law University in Bengaluru, Urge Govt to Strengthen Hubballi KSLU


ಬೆಂಗಳೂರು, 28 ಆಗಸ್ಟ್ (ಹಿ.ಸ.)

ಆ್ಯಂಕರ್:

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಹೊಸ ಕಾನೂನು ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಹೊರಟಿರುವ ಸರ್ಕಾರದ ಪ್ರಸ್ತಾವನೆಗೆ ಉತ್ತರ ಕರ್ನಾಟಕದ ಶಾಸಕರು ಹಾಗೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಅಧಿಕೃತ ಮನವಿ ಸಲ್ಲಿಸಿರುವ ಅವರು, ಬೆಂಗಳೂರು ಕೇಂದ್ರಿತ ಧೋರಣೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.

ಅಸ್ತಿತ್ವದಲ್ಲಿರುವ ವಿವಿ ಕಡೆಗಣನೆ: ಈಗಾಗಲೇ ಹುಬ್ಬಳ್ಳಿಯ ನವನಗರದಲ್ಲಿ 'ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ' ಕಾರ್ಯಾನಿರ್ವಹಿಸುತ್ತಿದ್ದು, ಸಮರ್ಪಕ ಅನುದಾನ, ಕಾಯಂ ಬೋಧಕ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಇರುವ ವಿವಿಯನ್ನೇ ಅಭಿವೃದ್ಧಿಪಡಿಸುವುದು ಬಿಟ್ಟು ಹೊಸ ವಿವಿ ಸ್ಥಾಪಿಸುವುದು ಅಪ್ರಯೋಜಕ.

ಪ್ರಾದೇಶಿಕ ಅಸಮತೋಲನ ಹೆಚ್ಚಳ: ಬೆಂಗಳೂರಿನಲ್ಲಿ ಈಗಾಗಲೇ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸೇರಿದಂತೆ ಪ್ರತಿಷ್ಠಿತ ಕಾಲೇಜುಗಳಿವೆ. ಮತ್ತೆ ಬೆಂಗಳೂರಿನಲ್ಲೇ ಮತ್ತೊಂದು ಕಾನೂನು ವಿವಿ ಆರಂಭಿಸುವುದರಿಂದ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಮತ್ತು ಈ ಭಾಗಕ್ಕೆ ಮತ್ತೊಮ್ಮೆ ಪ್ರಾದೇಶಿಕ ತಾರತಮ್ಯ ಎಸಗಿದಂತಾಗುತ್ತದೆ.

ಹೋರಾಟದ ಫಲಕ್ಕೆ ಧಕ್ಕೆ: ದಶಕಗಳ ಕಾಲ ನಡೆದ ತೀವ್ರ ಹೋರಾಟದ ಫಲವಾಗಿ ಹುಬ್ಬಳ್ಳಿಯಲ್ಲಿ ಕಾನೂನು ವಿವಿ ಸ್ಥಾಪನೆಯಾಗಿತ್ತು. ಈ ಸಂಸ್ಥೆಯ ಮಹತ್ವವನ್ನು ಕುಂಠಿತಗೊಳಿಸುವ ಯಾವುದೇ ನಿರ್ಧಾರವನ್ನು ಸಹಿಸುವುದಿಲ್ಲ ಎಂದು ಶಾಸಕರು ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ ವಿವಿಯನ್ನು ಬಲಪಡಿಸುವ ಬದಲು ಬೆಂಗಳೂರಿನಲ್ಲಿ ಪ್ರತ್ಯೇಕ ವಿವಿ ಸ್ಥಾಪಿಸುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಮತ್ತು ಉತ್ತರ ಕರ್ನಾಟಕದ ಶೈಕ್ಷಣಿಕ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವು ಶಾಸಕರು ಮನವಿಯಲ್ಲಿ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande