
ಬೆಂಗಳೂರು, 28 ಆಗಸ್ಟ್ (ಹಿ.ಸ.):
ಆ್ಯಂಕರ್:
ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಅಭಯಾರಣ್ಯದ ಹನೂರು ವನ್ಯಜೀವಿ ವಲಯದಲ್ಲಿ ಆ.15ರಂದು ನಡೆದ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ, ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ಸಿಬ್ಬಂದಿಯ ಹಿತಾಸಕ್ತಿ ಹಾಗೂ ಆತ್ಮಸ್ಥೈರ್ಯ ಕಾಪಾಡಲು ಸರ್ಕಾರ ಸೂಕ್ತ ಕಾನೂನು ರಕ್ಷಣೆ ನೀಡಬೇಕು ಎಂದು ಯುನೈಟೆಡ್ ಕನ್ಸರ್ವೇಷನ್ ಮೂವ್‌ಮೆಂಟ್ ಹಾಗೂ ಕರ್ನಾಟಕ ನಿವೃತ್ತ ಅರಣ್ಯ ಅಧಿಕಾರಿಗಳ ಸಂಘ ಮನವಿ ಮಾಡಿವೆ.
ಮುಖ್ಯಮಂತ್ರಿ, ಅರಣ್ಯ ಸಚಿವರು, ಗೃಹ ಸಚಿವರು, ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಕರ್ತವ್ಯದಲ್ಲಿದ್ದ ಅರಣ್ಯ ಸಿಬ್ಬಂದಿಯನ್ನು ಪೂರ್ವಾಗ್ರಹದಿಂದ ತಪ್ಪಿತಸ್ಥರೆಂದು ಬಿಂಬಿಸಬಾರದು ಎಂದು ಸಂಘಟನೆಗಳು ಕೋರಿವೆ.
ನಿಷ್ಪಕ್ಷಪಾತ ತನಿಖೆಗೆ ಒತ್ತಾಯ
ಘಟನೆಯ ಕುರಿತು ಲಭ್ಯವಿರುವ ಎಲ್ಲ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಿಷ್ಪಕ್ಷಪಾತ ಹಾಗೂ ವಸ್ತುನಿಷ್ಠ ತನಿಖೆ ನಡೆಸಬೇಕು. ಅರಣ್ಯ ಸಿಬ್ಬಂದಿ ತಮ್ಮ ಅಧಿಕೃತ ಕರ್ತವ್ಯವನ್ನು ಸದುದ್ದೇಶದಿಂದ ಹಾಗೂ ಕಾನೂನುಬದ್ಧವಾಗಿ ನಿರ್ವಹಿಸಿದ್ದಾರೆಯೇ, ತಮ್ಮ ಜೀವ ರಕ್ಷಣೆ, ಸರ್ಕಾರಿ ಅರಣ್ಯ ಆಸ್ತಿ ಮತ್ತು ವನ್ಯಜೀವಿ ಸಂಪನ್ಮೂಲಗಳ ರಕ್ಷಣೆಯ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದಾರೆಯೇ ಎಂಬುದನ್ನು ತನಿಖೆಯಲ್ಲಿ ಪರಿಶೀಲಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಾನೂನು ಉಲ್ಲಂಘಿಸಿದವರ ವಿರುದ್ಧ ಕಾನೂನು ತನ್ನದೇ ಕ್ರಮ ಕೈಗೊಳ್ಳಬೇಕು. ಅದೇ ವೇಳೆ ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ನ್ಯಾಯದ ರಕ್ಷಣೆ ದೊರೆಯಬೇಕು ಎಂಬುದು ಸಂಘಟನೆಗಳ ನಿಲುವಾಗಿದೆ.
ಕಠಿಣ ಪರಿಸ್ಥಿತಿಯಲ್ಲಿ ಅರಣ್ಯ ಸಿಬ್ಬಂದಿ ಕರ್ತವ್ಯ
ಹನೂರು ವನ್ಯಜೀವಿ ವಲಯವು ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಗುಡ್ಡಗಾಡು ಹಾಗೂ ದುರ್ಗಮ ಪ್ರದೇಶವಾಗಿದ್ದು, ಸುಮಾರು ಶೇ.60ರಷ್ಟು ದಟ್ಟ ಅರಣ್ಯ ಪ್ರದೇಶ ಹೊಂದಿದೆ ಎಂದು ಸಂಘಟನೆಗಳು ಮನವಿಯಲ್ಲಿ ವಿವರಿಸಿವೆ.
ಇಂತಹ ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿ ಹಗಲು-ರಾತ್ರಿ ಗಸ್ತು ತಿರುಗುವುದು, ವನ್ಯಜೀವಿ ಅಪರಾಧಗಳನ್ನು ತಡೆಯುವುದು, ಬೇಟೆಗಾರರನ್ನು ಪತ್ತೆಹಚ್ಚಿ ಬಂಧಿಸುವುದು, ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವುದು ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವವರನ್ನು ಎದುರಿಸುವಂತಹ ಅಪಾಯಕಾರಿ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಎಂದು ತಿಳಿಸಲಾಗಿದೆ.
ಆ.14ರ ರಾತ್ರಿ ಹಾಗೂ ಆ.15ರ ಮುಂಜಾನೆ ನಡೆದ ಘಟನೆಗೂ ಈ ಕಾರ್ಯಾಚರಣೆಯ ಹಿನ್ನೆಲೆಯನ್ನು ಪರಿಗಣಿಸಬೇಕು ಎಂದು ಸಂಘಟನೆಗಳು ಮನವಿ ಮಾಡಿವೆ.
ಜಿಂಕೆ ಬೇಟೆ ಪ್ರಕರಣ
ಈ ಪ್ರಕರಣದಲ್ಲಿ ಬೇಟೆಯಾಡಲಾದ ಪ್ರಾಣಿ ಚುಕ್ಕೆ ಜಿಂಕೆ ಅಥವಾ ಚಿತಲ್ ಆಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಸ್ತುತ ಅನುಸೂಚಿ-2ರಲ್ಲಿ ‘ಆಕ್ಸಿಸ್ ಆಕ್ಸಿಸ್’ ಎಂಬ ವೈಜ್ಞಾನಿಕ ಹೆಸರಿನೊಂದಿಗೆ ಚುಕ್ಕೆ ಜಿಂಕೆಯನ್ನು ಸೇರಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲದೆ, ಸಂವಿಧಾನದ 48ಎ ವಿಧಿ ಹಾಗೂ 51ಎ(ಜಿ) ಅಡಿಯಲ್ಲಿ ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗೆ ಸಂಬಂಧಿಸಿದ ಕರ್ತವ್ಯಗಳಿಗೂ ಮಹತ್ವವಿದೆ ಎಂದು ಸಂಘಟನೆಗಳು ಗಮನ ಸೆಳೆದಿವೆ.
ಆಧುನಿಕ ಸುರಕ್ಷತಾ ಉಪಕರಣ ಒದಗಿಸಲು ಆಗ್ರಹ
ಮುಂಚೂಣಿ ಅರಣ್ಯ ಸಿಬ್ಬಂದಿಗೆ ಆಧುನಿಕ ಹಾಗೂ ಅಗತ್ಯ ಸುರಕ್ಷತಾ ಉಪಕರಣಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ದೇಹಕ್ಕೆ ಅಳವಡಿಸುವ ಕ್ಯಾಮೆರಾಗಳು, ಅಧಿಕೃತ ಕಾರ್ಯಾಚರಣಾ ಶಸ್ತ್ರಾಸ್ತ್ರಗಳು, ಗುಂಡು ನಿರೋಧಕ ಜಾಕೆಟ್‌ಗಳು, ರಕ್ಷಣಾತ್ಮಕ ಹೆಲ್ಮೆಟ್‌ಗಳು, ರಾತ್ರಿ ದೃಷ್ಟಿ ಸಾಧನಗಳು, ಜಿಪಿಎಸ್ ಆಧಾರಿತ ಉಪಕರಣಗಳು, ನಿಗಾ ಡ್ರೋನ್‌ಗಳು, ಆಧುನಿಕ ವೈರ್‌ಲೆಸ್ ಸಂಪರ್ಕ ಸಾಧನಗಳು ಹಾಗೂ ತುರ್ತು ವೈದ್ಯಕೀಯ ಕಿಟ್‌ಗಳನ್ನು ಒದಗಿಸಬೇಕು ಎಂದು ಕೋರಲಾಗಿದೆ.
ಇದರಿಂದ ಸಿಬ್ಬಂದಿಯ ಸುರಕ್ಷತೆ ಮಾತ್ರವಲ್ಲದೆ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ, ಸಂವಹನ ಮತ್ತು ಪರಿಣಾಮಕಾರಿತ್ವವೂ ಹೆಚ್ಚಲಿದೆ ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ನಿರಂತರ ತರಬೇತಿಗೆ ಒತ್ತು
ಅರಣ್ಯ ಸಿಬ್ಬಂದಿಗೆ ಶಸ್ತ್ರಾಸ್ತ್ರಗಳ ಕಾನೂನುಬದ್ಧ ಹಾಗೂ ಸುರಕ್ಷಿತ ಬಳಕೆ, ಆತ್ಮರಕ್ಷಣೆ, ಮಾನವ ಹಕ್ಕುಗಳು ಮತ್ತು ಕಾನೂನು ರಕ್ಷಣೆ, ಸಾಕ್ಷ್ಯ ಸಂರಕ್ಷಣೆ, ಅಪರಾಧ ಸ್ಥಳ ನಿರ್ವಹಣೆ, ವನ್ಯಜೀವಿ ಅಪರಾಧ ತನಿಖೆ ಹಾಗೂ ಸಶಸ್ತ್ರ ಘಟನೆಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ ಕುರಿತು ನಿರಂತರ ತರಬೇತಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಇತರ ಜಾರಿ ಸಂಸ್ಥೆಗಳ ನಡುವೆ ಸಮನ್ವಯವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಅರಣ್ಯ ಆಸ್ತಿ, ಸಿಬ್ಬಂದಿ ರಕ್ಷಣೆಗೆ ಕಠಿಣ ಕ್ರಮ
ಬೇಟೆ ತಡೆ ಶಿಬಿರಗಳು, ಅರಣ್ಯ ಕಚೇರಿಗಳು, ಅರಣ್ಯ ಇಲಾಖೆಯ ವಾಹನಗಳು, ಸರ್ಕಾರಿ ಅರಣ್ಯ ಆಸ್ತಿಗಳು ಹಾಗೂ ಅರಣ್ಯ ಸಿಬ್ಬಂದಿ ಮತ್ತು ಅವರ ವಸತಿ ಪ್ರದೇಶಗಳ ಮೇಲೆ ದಾಳಿ ಅಥವಾ ಬೆದರಿಕೆ ಹಾಕುವವರ ವಿರುದ್ಧ ಕಾನೂನುಬದ್ಧ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ಗಡಿ ರಾಜ್ಯಗಳ ನಡುವೆ ಸಮನ್ವಯ
ಸೂಕ್ಷ್ಮ ಗಡಿ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಗುಪ್ತಚರ ಮಾಹಿತಿ ಹಂಚಿಕೆ, ಬೇಟೆ ತಡೆ ಕಾರ್ಯಾಚರಣೆ, ಗಡಿ ಪ್ರದೇಶದ ಅಪರಾಧಿಗಳು ಹಾಗೂ ಅಕ್ರಮ ಶಸ್ತ್ರಾಸ್ತ್ರಗಳ ಕುರಿತು ಮಾಹಿತಿ ವಿನಿಮಯ ಮತ್ತು ಅಗತ್ಯವಿದ್ದಲ್ಲಿ ಜಂಟಿ ಗಸ್ತು ಸೇರಿದಂತೆ ಸಮನ್ವಯವನ್ನು ಬಲಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಭಯಾರಣ್ಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೇಟೆ, ಅಕ್ರಮವಾಗಿ ಸಂರಕ್ಷಿತ ಪ್ರದೇಶ ಪ್ರವೇಶ, ಶಸ್ತ್ರಾಸ್ತ್ರಗಳ ಅಕ್ರಮ ಬಳಕೆ, ನಿಷೇಧಿತ ಚಟುವಟಿಕೆಗಳು ಹಾಗೂ ವನ್ಯಜೀವಿ ಸಂರಕ್ಷಣಾ ಕಾನೂನುಗಳ ಕುರಿತು ಜನಜಾಗೃತಿ ಮೂಡಿಸಬೇಕು. ವನ್ಯಜೀವಿ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸಬೇಕು ಎಂದು ಕೋರಲಾಗಿದೆ.
ತನಿಖೆಗೆ ಅಡ್ಡಿಪಡಿಸುವ ಉದ್ದೇಶವಿಲ್ಲ
ಘಟನೆಯ ತನಿಖೆಗೆ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವ ಅಥವಾ ತನಿಖೆಯ ಫಲಿತಾಂಶವನ್ನು ಪೂರ್ವನಿರ್ಧರಿಸುವ ಉದ್ದೇಶ ಸಂಘಟನೆಗಳಿಗೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
“ನಿಷ್ಪಕ್ಷಪಾತ ತನಿಖೆ ನಡೆಯಲಿ, ಸತ್ಯ ಹೊರಬರಲಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಲಿ. ಆದರೆ ಸದುದ್ದೇಶದಿಂದ ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸಿದ ಅರಣ್ಯ ಸಿಬ್ಬಂದಿಗೆ ಸರ್ಕಾರ ಸಂಪೂರ್ಣ ಕಾನೂನು ರಕ್ಷಣೆ ನೀಡಬೇಕು” ಎಂಬುದು ತಮ್ಮ ಸ್ಪಷ್ಟ ನಿಲುವಾಗಿದೆ ಎಂದು ಸಂಘಟನೆಗಳು ತಿಳಿಸಿವೆ.
ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಆತ್ಮಸ್ಥೈರ್ಯ ಕುಗ್ಗದಂತೆ ಸರ್ಕಾರ ದೃಢವಾದ ಸಾಂಸ್ಥಿಕ ಬೆಂಬಲ ನೀಡಬೇಕು. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ದುರ್ಗಮ ಹಾಗೂ ಅಪಾಯಕಾರಿ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸುರಕ್ಷತೆ, ತರಬೇತಿ, ಉಪಕರಣಗಳು ಮತ್ತು ಕಾರ್ಯಾಚರಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಯುನೈಟೆಡ್ ಕನ್ಸರ್ವೇಷನ್ ಮೂವ್‌ಮೆಂಟ್‌ನ ಜೋಸೆಫ್ ಹೂವರ್ ಹಾಗೂ ಕರ್ನಾಟಕ ನಿವೃತ್ತ ಅರಣ್ಯ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಚಂದ್ರಶೇಖರ್ ಅವರು ಮನವಿಗೆ ಸಹಿ ಹಾಕಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.