ಬೆಂಗಳೂರಿನ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯಕ್ಕೆ ಸಚಿವ ಕೃಷ್ಣ ಬೈರೇಗೌಡ ಚಾಲನೆ
ಖಾಲಿ ನಿವೇಶನಗಳ ಸ್ವಚ್ಛತೆಗೆ ಗಡುವು ಮುಕ್ತಾಯ
gbc-begins-cleaning-vacant-plots-impose-fines-bangalore


ಬೆಂಗಳೂರು, 27 ಆಗಸ್ಟ್ (ಹಿ.ಸ.):

ಆ್ಯಂಕರ್:

ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದಡಿ ನಗರದ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಆಸ್ತಿ ಮಾಲೀಕರಿಗೆ ನೀಡಲಾಗಿದ್ದ ಗಡುವು ಮುಕ್ತಾಯಗೊಂಡಿದ್ದು, ಎಚ್ಚರಿಕೆ ನೀಡಿದರೂ ಸ್ವಚ್ಛಗೊಳಿಸದ ಖಾಲಿ ನಿವೇಶನಗಳ ಮಾಲೀಕರಿಗೆ ದಂಡ ವಿಧಿಸುವ ಹಾಗೂ ಜಿಬಿಎ ವತಿಯಿಂದಲೇ ಸ್ವಚ್ಛಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ದೊಮ್ಮಲೂರು ಬಸ್ ನಿಲ್ದಾಣದ ಮುಂಭಾಗವಿರುವ ಖಾಲಿ ನಿವೇಶನದಲ್ಲಿ ಸ್ವತಃ ಗಿಡಗಂಟಿಗಳನ್ನು ತೆರವುಗೊಳಿಸುವ ಮೂಲಕ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷರು ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎನ್.ಎ. ಹ್ಯಾರೀಸ್, ಜಿಬಿಎ ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್ ಹಾಗೂ ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್ ಜಿ. ಉಪಸ್ಥಿತರಿದ್ದರು.

ಕಾರ್ಯಾಚರಣೆಯ ಬಳಿಕ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಜುಲೈ 15 ರಂದೇ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳು ಹಾಗೂ ಖಾಲಿ ಜಾಗಗಳನ್ನು ಸ್ವಚ್ಛಗೊಳಿಸುವಂತೆ ಮನವಿ ಮಾಡಲಾಗಿತ್ತು. ನೋಟಿಸ್ಗಳ ಮೂಲಕವೂ ಎಚ್ಚರಿಕೆ ನೀಡಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿ ಸಾವಿರಾರು ನಾಗರೀಕರು ಸ್ವಯಂಪ್ರೇರಿತರಾಗಿ ತಮ್ಮ ಸೈಟ್ಗಳನ್ನು ಸ್ವಚ್ಛ ಮಾಡಿಕೊಂಡಿದ್ದಾರೆ. ಅವರಿಗೆ ಧನ್ಯವಾದಗಳು. ಆದರೆ, ಪದೇ ಪದೇ ಸೂಚಿಸಿದರೂ ಶೇ. 70 ರಷ್ಟು ಜನರು ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿಲ್ಲ. ಸಾರ್ವಜನಿಕರ ಕೋರಿಕೆಯ ಮೇರೆಗೆ ಆಗಸ್ಟ್ 23 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಇಂದು ಒಂದೂವರೆ ತಿಂಗಳು ಪೂರ್ಣಗೊಂಡಿದ್ದು, ಮಾತು ಕೊಟ್ಟಂತೆ ನಾವೇ ನಿವೇಶನಗಳನ್ನು ಸ್ವಚ್ಛಗೊಳಿಸುವ ಕೆಲಸ ಆರಂಭಿಸಿದ್ದೇವೆ. ಇಂದಿನಿಂದ ಬೆಂಗಳೂರಿನ ಐದು ಪಾಲಿಕೆ ವ್ಯಾಪ್ತಿಯಲ್ಲಿ ಈ ಅಭಿಯಾನ ಚುರುಕುಗೊಂಡಿದೆ ಎಂದು ತಿಳಿಸಿದರು.

ನಗರದ ಖಾಲಿ ನಿವೇಶನಗಳಲ್ಲಿ ಕಸ ಹಾಗೂ ಗಿಡಗಂಟಿಗಳು ಬೆಳೆದಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಇಲಿ, ಹೆಗ್ಗಣ ಹಾಗೂ ಹಾವುಗಳ ಕಾಟ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜಿಬಿಎ ಕಠಿಣ ಕ್ರಮಕ್ಕೆ ಮುಂದಾಗಿದೆ.

ಗೇಟ್ ಬೀಗ ಮುರಿದು ಸ್ವಚ್ಛತೆ: ಕೆಲ ನಿವೇಶನ ಮಾಲೀಕರು ಅಧಿಕಾರಿಗಳ ನೋಟಿಸ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಗೇಟ್ಗಳಿಗೆ ಬೀಗ ಹಾಕಿ ನಿರ್ಲಕ್ಷ್ಯ ವಹಿಸಿದ್ದರು. ಅಂಥಹ ಜಾಗಗಳಲ್ಲಿ ಜಿಬಿಎ ಸಿಬ್ಬಂದಿ ಗೇಟ್ ಬೀಗ ಹೊಡೆದು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.

ಆಸ್ತಿ ತೆರಿಗೆಯಲ್ಲೇ ವೆಚ್ಚ ಅಳವಡಿಕೆ: ಜಿಬಿಎ ವತಿಯಿಂದ ಸ್ವಚ್ಛಗೊಳಿಸಲಾಗುವ ನಿವೇಶನಗಳ ಸ್ವಚ್ಛತೆಯ ಸಂಪೂರ್ಣ ವೆಚ್ಚವನ್ನು ಆಸ್ತಿ ಮಾಲೀಕರಿಂದ ಆಸ್ತಿ ತೆರಿಗೆಯ ಜೊತೆಗೆ ವಸೂಲಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ದೊಮ್ಮಲೂರು ಲೇಔಟ್ನಲ್ಲಿ ಇಂದಿನಿಂದ ಈ ಕಾರ್ಯಾಚರಣೆ ಅಧಿಕೃತವಾಗಿ ಆರಂಭವಾಗಿದ್ದು, ನಿರ್ಲಕ್ಷ್ಯ ತೋರುವ ಖಾಲಿ ನಿವೇಶನ ಮಾಲೀಕರಿಗೆ ಜಿಬಿಎ ಬಿಸಿ ಮುಟ್ಟಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande