
ಕನ್ಯಾಕುಮಾರಿ (ತಮಿಳುನಾಡು), 27 ಆಗಸ್ಟ್(ಹಿ.ಸ.):
ಆ್ಯಂಕರ್:ವಿವೇಕಾನಂದ ಶಿಲಾ ಸ್ಮಾರಕ ಹಾಗೂ ವಿವೇಕಾನಂದ ಕೇಂದ್ರದ ಅಧ್ಯಕ್ಷ, ಹಿರಿಯ ಜೀವನವ್ರತಿ ಕಾರ್ಯಕರ್ತ ಎ. ಬಾಲಕೃಷ್ಣ ಅವರು ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ರಾತ್ರಿ 12.05ಕ್ಕೆ ಕೊನೆಯುಸಿರೆಳೆದಿದ್ದಾರೆ.
1938ರ ಮೇ 3ರಂದು ಕೇರಳದಲ್ಲಿ ಜನಿಸಿದ ಎ. ಬಾಲಕೃಷ್ಣ ಅವರು ಕೆಲಕಾಲ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ 1973ರಲ್ಲಿ ವಿವೇಕಾನಂದ ಕೇಂದ್ರದ ಜೀವನವ್ರತಿ ಕಾರ್ಯಕರ್ತರ ಮೊದಲ ತಂಡಕ್ಕೆ ಸೇರ್ಪಡೆಯಾದರು.
ವಿವೇಕಾನಂದ ಶಿಲಾ ಸ್ಮಾರಕ ಹಾಗೂ ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ ಬಿಡುಗಡೆ ಮಾಡಿರುವ ಶೋಕ ಸಂದೇಶದಲ್ಲಿ ಬಾಲಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದ್ದು, ಅವರ ಜೀವನವು ಕರ್ಮಯೋಗಿಯ ಆದರ್ಶಕ್ಕೆ ಉದಾಹರಣೆಯಾಗಿತ್ತು ಎಂದು ತಿಳಿಸಲಾಗಿದೆ. ಏಕನಾಥ ರಾನಡೆ ಅವರ ಕನಸಿನಂತೆ ವಿವೇಕಾನಂದ ಕೇಂದ್ರವನ್ನು ‘ಜೀವಂತ ಸ್ಮಾರಕ’ವನ್ನಾಗಿ ರೂಪಿಸುವ ಹಾಗೂ ಭಾರತಮಾತೆಯ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು.
ಏಕನಾಥ ರಾನಡೆ ಅವರ ಕರೆ ಹಾಗೂ ಪ್ರೇರಣೆಯಿಂದ ಬಾಲಕೃಷ್ಣ ಅವರು ವಿವೇಕಾನಂದ ಕೇಂದ್ರದ ಜೀವನವ್ರತಿ ಕಾರ್ಯಕರ್ತರ ತರಬೇತಿಯನ್ನು ಪೂರ್ಣಗೊಳಿಸಿದ್ದರು. ನಂತರ ಅವರನ್ನು ‘ಉದಯಿಸುವ ಸೂರ್ಯನ ನಾಡು’ ಎಂದೇ ಕರೆಯಲಾಗುವ ಅರುಣಾಚಲ ಪ್ರದೇಶಕ್ಕೆ ಕಳುಹಿಸಲಾಯಿತು.
ಆ ಸಮಯದಲ್ಲಿ ಅರುಣಾಚಲ ಪ್ರದೇಶವು 1962ರ ಭಾರತ-ಚೀನಾ ಯುದ್ಧದ ಪರಿಣಾಮಗಳಿಂದ ಚೇತರಿಸಿಕೊಳ್ಳುತ್ತಿದ್ದ ಹಂತದಲ್ಲಿತ್ತು. ಈ ಸಂದರ್ಭದಲ್ಲಿ ಬಾಲಕೃಷ್ಣ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದರು. ಶಿಕ್ಷಣದ ಮೂಲಕ ಜ್ಞಾನವನ್ನು ಹರಡುವುದರ ಜತೆಗೆ, ವಿವೇಕಾನಂದ ಕೇಂದ್ರದ ‘ಮಾನವ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣ’ ಎಂಬ ಧ್ಯೇಯವನ್ನು ಮುನ್ನಡೆಸಿದರು.
ಅರುಣಾಚಲ ಪ್ರದೇಶದ ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಮುಂಚೂಣಿ ಹಾಗೂ ಗಣನೀಯ ಕಾರ್ಯವನ್ನು ಗುರುತಿಸಿದ ರಾಜ್ಯ ಸರ್ಕಾರವು 2014ರಲ್ಲಿ ಅವರ ಅತ್ಯುತ್ತಮ ಸೇವೆಗಾಗಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.
ಬಾಲಕೃಷ್ಣ ಅವರ ನಿಧನವು ವಿವೇಕಾನಂದ ಕೇಂದ್ರ ಹಾಗೂ ಅದರ ಕಾರ್ಯಕರ್ತರಿಗೆ ಮಾತ್ರವಲ್ಲದೆ, ದೇಶ ಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಕೇಂದ್ರದ ಶೋಕ ಸಂದೇಶದಲ್ಲಿ ತಿಳಿಸಲಾಗಿದೆ. ಅವರ ಸೇವಾ ಜೀವನವು ಕರ್ಮ, ಶಿಸ್ತು, ಸಮರ್ಪಣೆ ಹಾಗೂ ರಾಷ್ಟ್ರಭಕ್ತಿಯ ಆದರ್ಶಕ್ಕೆ ಮಾದರಿಯಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.