
ಬೆಂಗಳೂರು, 26 ಆಗಸ್ಟ್ (ಹಿ.ಸ.):
ಆ್ಯಂಕರ್:
ನಗರದ ಬೀದಿಬದಿ ಹಾಗೂ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ವರ್ಷಗಳಿಂದ ನಿಂತಿರುವ ಅನಾಥ ವಾಹನಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಠಿಣ ಕ್ರಮಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ ಈಗಾಗಲೇ ಸೀಜ್ ಮಾಡಿ ಡಂಪಿಂಗ್ ಯಾರ್ಡ್ಗೆ ಸ್ಥಳಾಂತರಿಸಿರುವ 50 ಅನಾಥ ವಾಹನಗಳನ್ನು ಹರಾಜು ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು ದಕ್ಷಿಣ ಮತ್ತು ಪಶ್ಚಿಮ ನಗರಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಹಳೆಯ ಹಾಗೂ ಮಾಲೀಕರಿಲ್ಲದ ವಾಹನಗಳನ್ನು ಕಳೆದ ಒಂದು ತಿಂಗಳಿನಿಂದ ಗುರುತಿಸಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ವಶಕ್ಕೆ ಪಡೆದ ವಾಹನಗಳನ್ನು ಜಿಬಿಎ ಡಂಪಿಂಗ್ ಯಾರ್ಡ್ಗೆ ಸ್ಥಳಾಂತರಿಸಲಾಗಿತ್ತು.
ಅನಾಥ ವಾಹನಗಳ ಮಾಲೀಕರಿಗೆ ತಮ್ಮ ವಾಹನಗಳನ್ನು ಮರಳಿ ಪಡೆಯಲು ಅವಕಾಶ ನೀಡುವ ಉದ್ದೇಶದಿಂದ ಜಿಬಿಎ ವತಿಯಿಂದ ವಾಹನಗಳ ಮೇಲೆ ನೋಟಿಸ್ಗಳನ್ನು ಅಂಟಿಸಿ, ಪತ್ರಿಕಾ ಪ್ರಕಟಣೆಗಳ ಮೂಲಕವೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಆದರೂ, ಗುರುತಿಸಲಾದ 50 ವಾಹನಗಳ ಮಾಲೀಕರಲ್ಲಿ ಯಾರೂ ಸಹ ವಾಹನಗಳನ್ನು ಬಿಡಿಸಿಕೊಳ್ಳಲು ಮುಂದೆ ಬಂದಿಲ್ಲ. ಹೀಗಾಗಿ ಈ ವಾಹನಗಳನ್ನು ಸಂಪೂರ್ಣ ಅನಾಥ ವಾಹನಗಳೆಂದು ಪರಿಗಣಿಸಿ ಕಾನೂನುಬದ್ಧವಾಗಿ ಹರಾಜು ಪ್ರಕ್ರಿಯೆ ಆರಂಭಿಸಲು ಜಿಬಿಎ ಸಜ್ಜಾಗಿದೆ.
ರಸ್ತೆಯಲ್ಲಿ ನಿಂತಿರುವ ಅನಾಥ ವಾಹನಗಳಿಗೆ ಜಿಬಿಎ ನೋಟಿಸ್ ಅಂಟಿಸಿದ ಬಳಿಕ, ಕೆಲ ಮಾಲೀಕರು ಆ ವಾಹನಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಿ ತೊಂದರೆ ನೀಡುತ್ತಿರುವುದು ಅಧಿಕಾರಿಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಇದರೊಂದಿಗೆ, ವಿವಿಧ ನಗರಪಾಲಿಕೆಗಳ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯೂ ವಾಹನ ತೆರವು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.ಪಾದಚಾರಿ ಮಾರ್ಗವನ್ನು ಅಕ್ರಮ ವಾಹನ ನಿಲುಗಡೆಗೆ ಬಳಸಿಕೊಂಡು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟುಮಾಡುವವರ ವಿರುದ್ಧ ಮುಂಬರುವ ದಿನಗಳಲ್ಲಿಯೂ ಕಾರ್ಯಾಚರಣೆ ಮುಂದುವರಿಯಲಿದೆ. ಮೊದಲ ಹಂತದ 50 ವಾಹನಗಳ ಹರಾಜಿನ ಮೂಲಕ ಅನಾಥ ವಾಹನಗಳ ತೆರವು ಅಭಿಯಾನಕ್ಕೆ ಜಿಬಿಎ ಮತ್ತಷ್ಟು ವೇಗ ನೀಡಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R