
ಬಾಗಲಕೋಟೆ, 26 ಆಗಸ್ಟ್ (ಹಿ.ಸ.)
ಆ್ಯಂಕರ್ : ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 1ರಂದು ನಡೆಯಲಿರುವ “ಬಳ್ಳಾರಿ ಚಲೋ” ಬೃಹತ್ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಜನಾಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಕರೆ ನೀಡಿದ್ದಾರೆ.
ಈ ಕುರಿತು ಬಾಗಲಕೋಟೆ ನಗರದಲ್ಲಿ
ಮಾತನಾಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನಸಾಮಾನ್ಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದ ಆಡಳಿತ ವೈಖರಿ ಹಾಗೂ ಭ್ರಷ್ಟಾಚಾರದ ವಿರುದ್ಧ ಜನರ ಧ್ವನಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ಬಳ್ಳಾರಿ ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 1ರಂದು ನಡೆಯಲಿರುವ ಈ ಬೃಹತ್ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಬಳ್ಳಾರಿ ಚಲೋ ಕೇವಲ ಪಕ್ಷದ ಕಾರ್ಯಕ್ರಮವಲ್ಲ, ಜನರ ಹಕ್ಕು ಹಾಗೂ ಜನರ ಧ್ವನಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದು ವೀರಣ್ಣ ಚರಂತಿಮಠ ಹೇಳಿದ್ದಾರೆ.
ರಾಜ್ಯ ಸರ್ಕಾರದ ಆಡಳಿತದಲ್ಲಿನ ಲೋಪಗಳು, ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ನಿರಂತರವಾಗಿ ಧ್ವನಿ ಎತ್ತುತ್ತಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರೂ ಉತ್ಸಾಹದಿಂದ ಪಾಲ್ಗೊಂಡು ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಅವರು ಮನವಿ ಮಾಡಿದ್ದಾರೆ.
“ಜನರ ಧ್ವನಿಗಾಗಿ, ಜನರ ಹಕ್ಕಿಗಾಗಿ ಬಿಜೆಪಿ ಜೊತೆ ಹೆಜ್ಜೆ ಹಾಕೋಣ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಜನಾಂದೋಲನಕ್ಕೆ ಕೈಜೋಡಿಸಿ ಬಳ್ಳಾರಿ ಚಲೋ ಪಾದಯಾತ್ರೆಯನ್ನು ಯಶಸ್ವಿಗೊಳಿಸೋಣ” ಎಂದು ವೀರಣ್ಣ ಚರಂತಿಮಠ ಕರೆ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು. ರಾಜ್ಯದಲ್ಲಿ ಉತ್ತಮ ಆಡಳಿತ ಹಾಗೂ ಜನಪರ ವ್ಯವಸ್ಥೆ ನಿರ್ಮಾಣಕ್ಕಾಗಿ ಬಿಜೆಪಿ ಹೋರಾಟವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande