
ವಿಜಯಪುರ, 26 ಆಗಸ್ಟ್ (ಹಿ.ಸ.)
ಆ್ಯಂಕರ್ :
ವಿಜಯಪುರ ನಗರದ ಆದರ್ಶನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮೃತರಲ್ಲಿ ತಾಯಿ ಹಾಗೂ ಆಕೆಯ ಐವರು ಮಕ್ಕಳು ಸೇರಿದ್ದಾರೆ.
ಮೃತರನ್ನು ತೊರವಿ ಶಾಂತಿನಗರ ನಿವಾಸಿ ಮಲ್ಲಿಕಾರ್ಜುನ ಜಾಲಗೇರಿ ಅವರ ಪತ್ನಿ ಶೋಭಾ (35), ಮಕ್ಕಳಾದ ವಿದ್ಯಾ (15), ಸುವರ್ಣಾ (13), ತಿಪ್ಪರಾಯ (12), ಸಾನಿಕಾ (10) ಹಾಗೂ ವಿಕಾಶ (6) ಎಂದು ಗುರುತಿಸಲಾಗಿದೆ.
ಆಗಸ್ಟ್ 24ರಂದು ತಾಯಿ ಹಾಗೂ ಮಕ್ಕಳು ಕಾಣೆಯಾಗಿರುವ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಮಲ್ಲಿಕಾರ್ಜುನ ಜಾಲಗೇರಿ ಅವರು ದೂರು ನೀಡಿದ್ದು, ಕೌಟುಂಬಿಕ ವಿಚಾರವಾಗಿ ಬುದ್ಧಿವಾದ ಹೇಳಿದ್ದರಿಂದ ಪತ್ನಿ ಶೋಭಾ ಅವರು ಮಕ್ಕಳನ್ನು ಕರೆದುಕೊಂಡು ಮನೆಯಿಂದ ತೆರಳಿದ್ದರು ಎಂದು ತಿಳಿಸಿದ್ದಾರೆ.
ಕಾಣೆಯಾಗಿದ್ದ ತಾಯಿ-ಮಕ್ಕಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದ ವೇಳೆ, ಅವರ ಮೃತದೇಹಗಳು ಭೂತನಾಳ ಕೆರೆಯಲ್ಲಿ ಪತ್ತೆಯಾಗಿವೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ರವಾನಿಸಲಾಗಿದೆ.
ಆರು ಮಂದಿ ಕೆರೆಗೆ ಹೇಗೆ ತೆರಳಿದರು, ಘಟನೆ ಯಾವ ರೀತಿಯಲ್ಲಿ ಸಂಭವಿಸಿತು ಹಾಗೂ ಸಾವಿಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿರುವುದಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande