
ನವದೆಹಲಿ, 26 ಆಗಸ್ಟ್ (ಹಿ.ಸ.):
ಆ್ಯಂಕರ್:
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಲಡಾಕದ ವಿಶ್ವದ ಅತ್ಯಂತ ಎತ್ತರದ ಡ್ರಾಪ್ ವಲಯಗಳಲ್ಲಿ ಒಂದರಲ್ಲಿ ತನ್ನ ಅತ್ಯಾಧುನಿಕ ಸ್ವದೇಶಿ ಮಿಲಿಟರಿ ಕಾಂಬ್ಯಾಟ್ ಪ್ಯಾರಾಚೂಟ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ದಕ್ಷಿಣ-ಪೂರ್ವ ಲಡಾಕ್ ದ ನೋಮ-ಮುಧ ಡ್ರಾಪ್ ವಲಯದಲ್ಲಿ ನಡೆದ ಈ ಪರೀಕ್ಷೆಯ ವೇಳೆ ತಾಪಮಾನವು ಮೈನಸ್ 15 ಡಿಗ್ರಿ ಸೆಲ್ಸಿಯಸ್ ವರೆಗೆ ಕುಸಿದಿತ್ತು. ಮೂವರು ಅನುಭವಿ ಟೆಸ್ಟ್ ಜಂಪರ್ಗಳು 22,000 ಅಡಿ ಎತ್ತರದಿಂದ ಹಾರಿ, 13,700 ಅಡಿ ಎತ್ತರದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸ್ವದೇಶಿ ತಂತ್ರಜ್ಞಾನದಿಂದ ಭಾರತೀಯ ಸಶಸ್ತ್ರ ಪಡೆಗಳಿಗೆ 25,000 ಅಡಿಗಳಿಗಿಂತ ಹೆಚ್ಚಿನ ಎತ್ತರದಲ್ಲೂ ಕಾರ್ಯಾಚರಣೆ ನಡೆಸುವ ಬಲ ಬಂದಿದ್ದು, ವಿದೇಶಗಳ ಮೇಲಿನ ಅವಲಂಬನೆ ಗಣನೀಯವಾಗಿ ತಗ್ಗಿದೆ.
ರಕ್ಷಣಾ ಸಚಿವಾಲಯದ ಮಾಹಿತಿಯ ಪ್ರಕಾರ, ಈ ಸ್ವದೇಶಿ ಮಿಲಿಟರಿ ಕಾಂಬ್ಯಾಟ್ ಪ್ಯಾರಾಚೂಟ್ ಸಿಸ್ಟಮ್ ಅನ್ನು ಡಿಆರ್ಡಿಒದ ಆಗ್ರಾದಲ್ಲಿರುವ 'ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್' ಮತ್ತು ಬೆಂಗಳೂರಿನ ಬಿಇಎಂಎಲ್ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದು ಭಾರತೀಯ ಸಶಸ್ತ್ರ ಪಡೆಗಳ ಬಳಕೆಯಲ್ಲಿರುವ ಏಕೈಕ ಪ್ಯಾರಾಚೂಟ್ ವ್ಯವಸ್ಥೆಯಾಗಿದ್ದು, 25,000 ಅಡಿಗಿಂತ ಅಧಿಕ ಎತ್ತರದಿಂದ ಕಾರ್ಯಾಚರಣೆ ನಡೆಸಲು ಸಮರ್ಥವಾಗಿದೆ. ಈಗಾಗಲೇ ಇದನ್ನು 32,000 ಅಡಿ ಎತ್ತರದಿಂದಲೂ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ದಕ್ಷಿಣ-ಪೂರ್ವ ಲಡಾಕ್ ದಲ್ಲಿ ಈ ವ್ಯವಸ್ಥೆಯ ಪರೀಕ್ಷೆಯನ್ನು ನಡೆಸುವ ಮೂಲಕ ದೇಶವು ಅತಿ ಎತ್ತರದ ಪ್ರದೇಶಗಳಲ್ಲಿನ ಸೇನಾ ಕಾರ್ಯಾಚರಣೆಗಾಗಿ ಸ್ವದೇಶಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಸಾಹಸಯಾತ್ರೆಯನ್ನು ಎಡಿಆರ್ಡಿಇಯ ವಿಂಗ್ ಕಮಾಂಡರ್ ರಾಹುಲ್ ಝಾ, ಮುಖ್ಯ ಟೆಸ್ಟ್ ಜಂಪರ್ ಆರ್.ಜೆ. ಸಿಂಗ್ ಮತ್ತು ಎಂ.ಡಬ್ಲ್ಯೂ.ಒ. ವಿವೇಕ್ ತಿವಾರಿ ಯಶಸ್ವಿಗೊಳಿಸಿದರು. ಸವಾಲಿನ ವಾತಾವರಣದಲ್ಲೂ ಜಂಪರ್ಗಳು ಪ್ಯಾರಾಚೂಟ್ ಅನ್ನು ಸಮರ್ಥವಾಗಿ ನಿಯಂತ್ರಿಸಿ ನಿಗದಿತ ಸ್ಥಳದಲ್ಲಿ ಸುರಕ್ಷಿತವಾಗಿ ಇಳಿದರು.
ಅತಿ ಹೆಚ್ಚು ಎತ್ತರ ಮತ್ತು ತೀವ್ರ ಶೈತ್ಯದ ವಾತಾವರಣದಲ್ಲೂ ಈ ಪ್ಯಾರಾಚೂಟ್ ವ್ಯವಸ್ಥೆ ಹಾಗೂ ಅದಕ್ಕೆ ಸಂಬಂಧಿಸಿದ ಉಪ-ವ್ಯವಸ್ಥೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಡಿಆರ್ಡಿಒ ತಿಳಿಸಿದೆ. ಈ ಸಂಪೂರ್ಣ ವ್ಯವಸ್ಥೆಯು ಭಾರತದ ಸ್ವದೇಶಿ ಉಪಗ್ರಹ ನ್ಯಾವಿಗೇಷನ್ ಸಿಸ್ಟಮ್ ಅನ್ನು ಹೊಂದಿದ್ದು, ಬಾಹ್ಯ ಹಸ್ತಕ್ಷೇಪ ಅಥವಾ ಜ್ಯಾಮಿಂಗ್ನಿಂದ ಸುರಕ್ಷಿತವಾಗಿ ನಿಖರ ಮಾರ್ಗದರ್ಶನ ನೀಡುತ್ತದೆ. ಇದರಲ್ಲಿ ನಿಧಾನಗತಿಯಲ್ಲಿ ಕೆಳಗೆಳಿಯುವ ಸಾಮರ್ಥ್ಯ, ಅತ್ಯುತ್ತಮ ಸ್ಟೀರಿಂಗ್ ನಿಯಂತ್ರಣ, ವಿಶೇಷ ಆಮ್ಲಜನಕ ವ್ಯವಸ್ಥೆ ಮತ್ತು ಪ್ಯಾರಾ-ಕಂಪ್ಯೂಟರ್ನಂತಹ ಸ್ವದೇಶಿ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.
ಪರೀಕ್ಷೆಯ ಸಂದರ್ಭದಲ್ಲಿ ಜಂಪ್ಸೂಟ್ ಸೇರಿದಂತೆ ಎಲ್ಲಾ ಸಂಬಂಧಿತ ಉಪಕರಣಗಳನ್ನು ಬಳಸಲಾಗಿದ್ದು, ಕಠಿಣ ಪರಿಸ್ಥಿತಿಯಲ್ಲಿ ಇವುಗಳ ಜಂಟಿ ಕಾರ್ಯಕ್ಷಮತೆ ಹಾಗೂ ವಿಶ್ವಾಸಾರ್ಹತೆಯನ್ನು ಯಶಸ್ವಿಯಾಗಿ ಮೌಲ್ಯಮಾಪನ ಮಾಡಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R