
ನವದೆಹಲಿ, 25 ಆಗಸ್ಟ್ (ಹಿ.ಸ.):
ಆ್ಯಂಕರ್:ದೇಶದಲ್ಲಿ ಸಾಮಾಜಿಕ ನ್ಯಾಯದ ನೀತಿಗಳನ್ನು ರೂಪಿಸಲು ನಿಖರವಾದ ಜಾತಿವಾರು ಅಂಕಿಅಂಶಗಳು ಅಗತ್ಯವಾಗಿದ್ದು, ಪ್ರಸ್ತುತ ಜಾತಿ ಗಣತಿಗೆ ಬಳಸಲಾಗುತ್ತಿರುವ ಪ್ರಶ್ನಾವಳಿ ಸೂಕ್ತವಾಗಿಲ್ಲ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಂಟಿ ಪತ್ರ ಬರೆದಿರುವ ಅವರು, ಜಾತಿಗಳ ನಿಖರ ಸಂಖ್ಯೆ ಹಾಗೂ ಅವುಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಸರಿಯಾದ ಮೌಲ್ಯಮಾಪನಕ್ಕೆ ಜಾತಿಗಳ ನಿಖರ ಗಣತಿ ಅಗತ್ಯ ಎಂದು ತಿಳಿಸಿದ್ದಾರೆ.
ಸರ್ಕಾರ ಜಾತಿ ಮಾಹಿತಿ ದಾಖಲಿಸಲು ಮುಕ್ತ ಪ್ರಶ್ನೆಯ ವಿಧಾನವನ್ನು ಅನುಸರಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಬಹುದು. ಪ್ರತಿಯೊಬ್ಬರೂ ತಮ್ಮ ಜಾತಿಯ ಹೆಸರನ್ನು ತಿಳಿಸುವಂತೆ ಕೇಳಿ, ಅದನ್ನೇ ದಾಖಲಿಸುವ ವಿಧಾನದಿಂದ ಒಂದೇ ಜಾತಿ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರು, ಉಪಜಾತಿ ಹಾಗೂ ಭಾಷಾ ರೂಪಗಳಲ್ಲಿ ದಾಖಲಾಗುವ ಸಾಧ್ಯತೆಯಿದೆ. ಇದರಿಂದ ಜಾತಿಗಳ ಸಂಖ್ಯೆ ಸಾವಿರಾರು ಹೆಸರುಗಳಿಗೆ ವಿಭಜನೆಯಾಗಿ, ಜಾತಿ ಗಣತಿಯಿಂದ ಲಭ್ಯವಾಗುವ ಅಂಕಿಅಂಶಗಳು ಅನರ್ಥಕವಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸರಿಯಾದ ಜಾತಿವಾರು ಅಂಕಿಅಂಶಗಳಿಲ್ಲದೆ ಹಿಂದುಳಿದ, ಅತಿ ಹಿಂದುಳಿದ ಹಾಗೂ ಇತರೆ ವಂಚಿತ ಸಮುದಾಯಗಳ ಸ್ಥಿತಿಗತಿಯನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ. ಇದರ ಪರಿಣಾಮ ಶಿಕ್ಷಣ, ಉದ್ಯೋಗ, ಸರ್ಕಾರಿ ಯೋಜನೆಗಳು ಹಾಗೂ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ನೀತಿಗಳ ಮೇಲೂ ಬೀಳಲಿದೆ. ಮುಖ್ಯವಾಗಿ, ದೇಶದಲ್ಲಿ ಇತರೆ ಹಿಂದುಳಿದ ವರ್ಗಗಳ ಒಟ್ಟು ಜನಸಂಖ್ಯೆ ಎಷ್ಟಿದೆ ಎಂಬುದೂ ಸ್ಪಷ್ಟವಾಗುವುದಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.
ಇದಕ್ಕೆ ಸರಳ ಪರಿಹಾರವಾಗಿ ಜಾತಿಗಳ ‘ಡ್ರಾಪ್‌ಡೌನ್’ ಪಟ್ಟಿಯನ್ನು ಸಿದ್ಧಪಡಿಸುವಂತೆ ಖರ್ಗೆ ಹಾಗೂ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗಣತಿಯಲ್ಲಿ ಈಗಾಗಲೇ ಅನುಸರಿಸುತ್ತಿರುವ ವಿಧಾನವನ್ನು ಬಳಸಬಹುದು. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಗಳು ಹಾಗೂ ಭಾರತೀಯ ಮಾನವಶಾಸ್ತ್ರೀಯ ಸಮೀಕ್ಷೆಯ ಆಧಾರವನ್ನು ಬಳಸಿಕೊಂಡು ಈ ಪಟ್ಟಿಯನ್ನು ಸಿದ್ಧಪಡಿಸಬಹುದು ಎಂದು ಅವರು ತಿಳಿಸಿದ್ದಾರೆ.
ತೆಲಂಗಾಣದ 2024ರ ಜಾತಿ ಸಮೀಕ್ಷೆ ಹಾಗೂ ಬಿಹಾರದ 2022ರ ಜಾತಿ ಸಮೀಕ್ಷೆಗಳಲ್ಲಿಯೂ ಇದೇ ರೀತಿಯ ವಿಧಾನ ಅನುಸರಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರಸ್ತುತ ಜಾತಿ ಗಣತಿಗೆ ಬಳಸುತ್ತಿರುವ ಪ್ರಶ್ನಾವಳಿಯನ್ನು ರದ್ದುಪಡಿಸಿ, ರಾಜಕೀಯ ಪಕ್ಷಗಳು, ತಜ್ಞರು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಹೊಸ ಪ್ರಶ್ನಾವಳಿ ರೂಪಿಸಬೇಕು. ಪ್ರತಿಯೊಂದು ಜಾತಿ ಹಾಗೂ ಸಮುದಾಯದ ನಿಖರ ಸಂಖ್ಯೆಯನ್ನು ದಾಖಲಿಸುವ ಮೂಲಕ ಜಾತಿ ಗಣತಿ ಹೆಚ್ಚು ನಿಖರ, ಅರ್ಥಪೂರ್ಣ ಹಾಗೂ ಜನಪರವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿಯನ್ನು ಖರ್ಗೆ ಹಾಗೂ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.