ಬರ ನಿರ್ವಹಣಾ ಕಾರ್ಯತಂತ್ರ ಬದಲಿಸಿ, ಪರಿಹಾರಕ್ಕಿಂತ ಸ್ಥಿತಿಸ್ಥಾಪಕತೆಗೆ ಒತ್ತು: ಭೂಪೇಂದ್ರ ಯಾದವ್
ನವದೆಹಲಿ, 25 ಆಗಸ್ಟ್ (ಹಿ.ಸ.): ಆ್ಯಂಕರ್: ಬರವನ್ನು ಪದೇಪದೆ ಎದುರಾಗುವ ವಿಪತ್ತು ಎಂದು ಪರಿಗಣಿಸಿ ಕೇವಲ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ಮುನ್ಸೂಚನೆ ಆಧರಿಸಿ ತಡೆಗಟ್ಟಬಹುದಾದ ಅಪಾಯವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್
उलानबातार, मंगोलिया में आयोजित ‘सूखे से निपटने के लिए उपायों को तेज़ करने ’ के विषय पर मंत्रिस्तरीय संवाद में भाग लेते हुए केंद्रीय मंत्री भूपेंद्र यादव


ನವದೆಹಲಿ, 25 ಆಗಸ್ಟ್ (ಹಿ.ಸ.):

ಆ್ಯಂಕರ್:

ಬರವನ್ನು ಪದೇಪದೆ ಎದುರಾಗುವ ವಿಪತ್ತು ಎಂದು ಪರಿಗಣಿಸಿ ಕೇವಲ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ಮುನ್ಸೂಚನೆ ಆಧರಿಸಿ ತಡೆಗಟ್ಟಬಹುದಾದ ಅಪಾಯವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.

ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಮರುಭೂಮೀಕರಣ ತಡೆ ಸಮಾವೇಶದ (ಯುಎನ್‌ಸಿಸಿಡಿ) 17ನೇ ಸಮ್ಮೇಳನದಲ್ಲಿ ‘ಬರ ಎದುರಿಸಲು ಕ್ರಮಗಳನ್ನು ತ್ವರಿತಗೊಳಿಸುವುದು’ ಕುರಿತ ಸಚಿವರ ಸಂವಾದವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬರವು ಕೇವಲ ಋತುಮಾನಕ್ಕೆ ಸೀಮಿತವಾದ ವಿದ್ಯಮಾನವಾಗಿಲ್ಲ. ಇದು ಜಲ ಭದ್ರತೆ, ಆಹಾರ ವ್ಯವಸ್ಥೆ, ಜೀವವೈವಿಧ್ಯ ಹಾಗೂ ಆರ್ಥಿಕ ಸ್ಥಿರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಾಗತಿಕ ಮಟ್ಟದಲ್ಲಿ ‘ಪ್ರತಿಕ್ರಿಯೆಗಿಂತ ಮೊದಲು ಸಿದ್ಧತೆ, ಬಿಕ್ಕಟ್ಟು ನಿರ್ವಹಣೆಗಿಂತ ಮೊದಲು ತಡೆಗಟ್ಟುವಿಕೆ ಹಾಗೂ ಪುನಶ್ಚೇತನಕ್ಕಿಂತ ಮೊದಲು ಸ್ಥಿತಿಸ್ಥಾಪಕತೆ’ ಎಂಬ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಭಾರತವು ಮಳೆ ಮೇಲ್ವಿಚಾರಣೆ, ಉಪಗ್ರಹ ಆಧಾರಿತ ಬರ ಮೌಲ್ಯಮಾಪನ, ಮುನ್ನೆಚ್ಚರಿಕೆ ವ್ಯವಸ್ಥೆ ಹಾಗೂ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸಮನ್ವಯಿತ ಸಿದ್ಧತಾ ಕ್ರಮಗಳ ಮೂಲಕ ಬರ ನಿರ್ವಹಣೆಗೆ ಒತ್ತು ನೀಡುತ್ತಿದೆ. ಬರ ಪರಿಸ್ಥಿತಿ ಬಿಕ್ಕಟ್ಟಾಗಿ ಪರಿವರ್ತನೆಯಾಗುವ ಮುನ್ನವೇ ಅಗತ್ಯ ಕ್ರಮ ಕೈಗೊಳ್ಳುವುದು ಇದರ ಉದ್ದೇಶವಾಗಿದೆ ಎಂದು ಯಾದವ್ ತಿಳಿಸಿದರು.

ನೀರು ಮತ್ತು ಭೂಮಿಯ ನಡುವಿನ ಪರಸ್ಪರ ಸಂಬಂಧದ ಮಹತ್ವವನ್ನು ಒತ್ತಿಹೇಳಿದ ಅವರು, ಅರಣ್ಯ ಹಾಗೂ ಜಲಾನಯನ ಪ್ರದೇಶಗಳ ಸಂರಕ್ಷಣೆಯಿಂದ ನೀರಿನ ಲಭ್ಯತೆ ಹೆಚ್ಚಿಸುವುದು, ಮಣ್ಣಿನ ಸವಕಳಿ ತಡೆಯುವುದು ಮತ್ತು ಅಂತರ್ಜಲ ಮರುಪೂರಣಕ್ಕೆ ನೆರವಾಗುತ್ತದೆ ಎಂದರು. ನದಿ ಪುನಶ್ಚೇತನ, ಸಾಂಪ್ರದಾಯಿಕ ಜಲಮೂಲಗಳ ಸಂರಕ್ಷಣೆ ಹಾಗೂ ಜಲ ಸಂರಕ್ಷಣೆಯಲ್ಲಿಯೂ ಭಾರತ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ದೇಶದ ವಿವಿಧ ಭಾಗಗಳಲ್ಲಿ ಸಮುದಾಯಗಳ ಸಹಭಾಗಿತ್ವದೊಂದಿಗೆ ಜಲಪಾತಗಳು ಮತ್ತು ಜಲಮರುಪೂರಣ ಪ್ರದೇಶಗಳ ಸಂರಕ್ಷಣೆ ಕೈಗೊಳ್ಳಲಾಗುತ್ತಿದೆ. ಮಳೆ ಆಧಾರಿತ ಹಾಗೂ ಹದಗೆಟ್ಟ ಕೃಷಿ ಭೂಮಿಗಾಗಿ ದೇಶಾದ್ಯಂತ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ರೈತರನ್ನು ಬರ ಸೇರಿದಂತೆ ವಿವಿಧ ಅಪಾಯಗಳಿಂದ ರಕ್ಷಿಸಲು ಬೆಳೆ ವಿಮೆ ಪ್ರಮುಖ ಕ್ರಮವಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಕುಡಿಯುವ ನೀರು, ಉದ್ಯೋಗ, ಮೇವು ಹಾಗೂ ತುರ್ತು ನೀರು ಪೂರೈಕೆಯಂತಹ ಕ್ರಮಗಳ ಮೂಲಕ ದುರ್ಬಲ ವರ್ಗಗಳಿಗೆ ನೆರವು ನೀಡಲಾಗುತ್ತಿದೆ ಎಂದರು.

ಪರಿಸರ ವ್ಯವಸ್ಥೆಯ ಪುನಶ್ಚೇತನ, ಬಲಿಷ್ಠ ಮುನ್ನೆಚ್ಚರಿಕೆ ವ್ಯವಸ್ಥೆಗಳು ಹಾಗೂ ಸಮನ್ವಯಿತ ಕ್ರಮಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುವಂತೆ ಭಾರತ ಜಾಗತಿಕ ಸಮುದಾಯಕ್ಕೆ ಕರೆ ನೀಡಿದೆ. ವಿಶ್ವದ ಅತ್ಯಂತ ದುರ್ಬಲ ವರ್ಗಗಳಿಗೆ ಬರ ಸ್ಥಿತಿಸ್ಥಾಪಕತೆ ನಿರ್ಮಿಸುವುದು ಆಯ್ಕೆಯಲ್ಲ, ಬದುಕುಳಿಯಲು ಅಗತ್ಯವಾದ ಕ್ರಮವಾಗಿದೆ ಎಂದು ಭೂಪೇಂದ್ರ ಯಾದವ್ ಹೇಳಿದರು.

ಬರ ನಿರ್ವಹಣೆಯಲ್ಲಿ, ವಿಶೇಷವಾಗಿ ಮುನ್ನೆಚ್ಚರಿಕೆ ವ್ಯವಸ್ಥೆಗಳ ಕ್ಷೇತ್ರದಲ್ಲಿ ಭಾರತದ ಅನುಭವ ಮತ್ತು ಸಾಮರ್ಥ್ಯಗಳನ್ನು ಜಾಗತಿಕ ಸಮುದಾಯದೊಂದಿಗೆ ಹಂಚಿಕೊಳ್ಳಲು ಭಾರತ ಬದ್ಧವಾಗಿದೆ ಎಂದು ಅವರು ತಿಳಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande