
ನವದೆಹಲಿ, 24 ಆಗಸ್ಟ್ (ಹಿ.ಸ.):
ಆ್ಯಂಕರ್:ಶಿಕ್ಷಣದಿಂದ ಉದ್ಯೋಗದವರೆಗಿನ ಯುವ ಭಾರತದ ಸಂಪೂರ್ಣ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಳುಗೆಡವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿರುವ ಖರ್ಗೆ, ನೀತಿ ಆಯೋಗದ ಅಂದಾಜಿನ ಪ್ರಕಾರ 15ರಿಂದ 29 ವರ್ಷದೊಳಗಿನ 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ತರಬೇತಿ—ಯಾವುದರಲ್ಲೂ ಇಲ್ಲ ಎಂದು ಹೇಳಿದ್ದಾರೆ. ಇವರಲ್ಲಿ ಶೇ.88ರಷ್ಟು ಮಂದಿ ಗೃಹಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಜುಲೈ 2026ರ ಪಿಎಲ್‌ಎಫ್‌ಎಸ್ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಖರ್ಗೆ, ಯುವ ನಿರುದ್ಯೋಗ ಪ್ರಮಾಣ ಶೇ.15.6ರಷ್ಟಿದ್ದು, ಯುವತಿಯರಲ್ಲಿ ಇದು ಶೇ.19.5ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆಗಳನ್ನು ಕೇಳಿರುವ ಖರ್ಗೆ, ಪದವಿ ಪಡೆದ ನಂತರ ಉದ್ಯೋಗಗಳು ಎಲ್ಲಿವೆ? ಎಂದು ಪ್ರಶ್ನಿಸಿದ್ದಾರೆ. 20ರಿಂದ 29 ವರ್ಷದ ನಿರುದ್ಯೋಗಿಗಳಲ್ಲಿ ಪದವೀಧರರ ಪ್ರಮಾಣ ಶೇ.67ರಷ್ಟಿದೆ. 15ರಿಂದ 25 ವರ್ಷದ ಪದವೀಧರರ ನಿರುದ್ಯೋಗ ಪ್ರಮಾಣ ಶೇ.40ರ ಸಮೀಪದಲ್ಲಿದೆ ಎಂದು ಹೇಳಿದ್ದಾರೆ.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯೇನಾಯಿತು? 12 ವರ್ಷಗಳಲ್ಲಿ 24 ಕೋಟಿ ಉದ್ಯೋಗಗಳು ಸೃಷ್ಟಿಯಾಗಬೇಕಿತ್ತು. ಆದರೆ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿದ್ದು, ಖಾಯಂ ಉದ್ಯೋಗಗಳ ಬದಲಿಗೆ ಗುತ್ತಿಗೆ ಮತ್ತು ಅರೆಕಾಲಿಕ ಉದ್ಯೋಗಗಳು ಹೆಚ್ಚುತ್ತಿವೆ ಎಂದು ಖರ್ಗೆ ಆರೋಪಿಸಿದ್ದಾರೆ.
ದುಬಾರಿ ಹಾಗೂ ಅಸಮರ್ಪಕ ಶಿಕ್ಷಣ, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬ, ಹೆಚ್ಚುತ್ತಿರುವ ಕೌಶಲ್ಯ ಅಂತರ ಮತ್ತು ಗುಣಮಟ್ಟದ ಉದ್ಯೋಗಗಳ ಕೊರತೆ ಯುವ ಭಾರತದ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿವೆ ಎಂದು ಅವರು ಹೇಳಿದ್ದಾರೆ.
70 ವರ್ಷಗಳಲ್ಲಿ ಹಿಂದಿನ ಸರ್ಕಾರಗಳು ಮಾಡಲಾಗದ್ದನ್ನು ಮಾಡುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ ಶಿಕ್ಷಣ ವ್ಯವಸ್ಥೆ ಹೆಚ್ಚು ದುಬಾರಿಯಾಗಿದ್ದು, ಪರೀಕ್ಷೆಗಳ ಮೇಲಿನ ನಂಬಿಕೆ ಕುಸಿದಿದೆ ಮತ್ತು ಪದವಿಗಳಿದ್ದರೂ ಉದ್ಯೋಗಗಳು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.