
ಬೆಂಗಳೂರು, 24 ಆಗಸ್ಟ್ (ಹಿ.ಸ.):
ಆ್ಯಂಕರ್:ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರಗೊಂಡಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಜನರು ಪಡಿತರ ಚೀಟಿ ಹಾಗೂ ಪಿಂಚಣಿಗಾಗಿ ಪರದಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರನ್ನು ರಕ್ಷಿಸುವುದೇ ಮುಖ್ಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ರಾಜ್ಯದ ಬರ ಪರಿಸ್ಥಿತಿ, ನೈಸ್ ಟೋಲ್ ಸಮಸ್ಯೆ, ಬಿಡದಿ ರೈತರ ಸಂಕಷ್ಟ, ಪಡಿತರ ಚೀಟಿ ಹಾಗೂ ಪಿಂಚಣಿ ಸೇರಿದಂತೆ ಜನರ ಬದುಕಿಗೆ ಸಂಬಂಧಿಸಿದ ಹಲವು ಗಂಭೀರ ವಿಚಾರಗಳು ಸದನದಲ್ಲಿ ಚರ್ಚೆಯಾಗಬೇಕಿವೆ. ಆದರೆ ಸರ್ಕಾರ ಸಚಿವ ನಾಗೇಂದ್ರ ಅವರನ್ನು ರಕ್ಷಿಸುವುದಕ್ಕಾಗಿ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂದು ಟೀಕಿಸಿದರು.
“ಒಬ್ಬ ನಾಗೇಂದ್ರನಿಗಾಗಿ ಒಂದು ಕೋಟಿ ದಲಿತರ ಹಿತಾಸಕ್ತಿಯನ್ನು ನಿರ್ಲಕ್ಷಿಸುವುದು ಯಾವ ನ್ಯಾಯ?” ಎಂದು ಪ್ರಶ್ನಿಸಿದ ಅಶೋಕ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮದ ಕುರಿತು ಸರ್ಕಾರ ಉತ್ತರ ನೀಡಬೇಕು ಹಾಗೂ ಸಚಿವ ಬಿ. ನಾಗೇಂದ್ರ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಜನರ ಸಮಸ್ಯೆಗಳ ಕುರಿತು ಸದನದಲ್ಲಿ ಚರ್ಚೆ ನಡೆಯಬೇಕು. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವರ ರಕ್ಷಣೆಗೆ ಸದನದ ಸಮಯ ಬಳಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಶೋಕ ಕಿಡಿಕಾರಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.