

ಟೆಹ್ರಾನ್/ವಾಷಿಂಗ್ಟನ್, 23 ಆಗಸ್ಟ್ (ಹಿ.ಸ.):
ಆ್ಯಂಕರ್:
ಹೋರ್ಮುಜ್ ಜಲಸಂಧಿ ವಿಚಾರವಾಗಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಕಂಡುಬಂದಿದೆ. ಇರಾನ್ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕದ ಆರ್ಥಿಕ ಯುದ್ಧಕ್ಕೆ ಯಾವುದೇ ನೆರೆ ರಾಷ್ಟ್ರಗಳು ಬೆಂಬಲ ನೀಡಬಾರದು ಎಂದು ಇರಾನ್ ಎಚ್ಚರಿಸಿದೆ.
ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಸೋಮವಾರ ಇರಾನ್ ವಿರುದ್ಧ ಕಠಿಣ ನಿರ್ಬಂಧಗಳ ಘೋಷಣೆ ಮಾಡುವ ಸಾಧ್ಯತೆ ಇದೆ. ಇರಾನ್‌ನ ತೈಲ ಕಳ್ಳಸಾಗಣೆ ಜಾಲ, ಹಣಕಾಸು ವರ್ಗಾವಣೆ ವ್ಯವಸ್ಥೆ, ವಿನಿಮಯ ಕೇಂದ್ರಗಳು, ಹಡಗು ನೋಂದಣಿ ಹಾಗೂ ಮುಂಚೂಣಿ ಕಂಪನಿಗಳನ್ನು ಗುರಿಯಾಗಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ ಮೊಹ್ಸಿನ್ ರೆಜಾಯಿ, ಅಮೆರಿಕದ ಆರ್ಥಿಕ ಯುದ್ಧಕ್ಕೆ ನೆರವು ನೀಡುವ ನೆರೆ ರಾಷ್ಟ್ರಗಳನ್ನು ಶತ್ರುಗಳೆಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಅಗತ್ಯವಿದ್ದರೆ ಪರ್ಷಿಯನ್ ಕೊಲ್ಲಿ ಹಾಗೂ ಹೋರ್ಮುಜ್ ಜಲಸಂಧಿಯಿಂದ ತೈಲ ರಫ್ತನ್ನೇ ತಡೆಯುವುದಾಗಿ ಅವರು ಹೇಳಿದ್ದಾರೆ.
ಚೀನಾದಿಂದಲೂ ಅಮೆರಿಕದೊಂದಿಗೆ ಸಹಕರಿಸುವಂತೆ ಬೆಸೆಂಟ್ ಮನವಿ ಮಾಡಿದ್ದಾರೆ. 2025ರ ಅಂಕಿಅಂಶಗಳ ಪ್ರಕಾರ, ಇರಾನ್ ರಫ್ತು ಮಾಡುವ ತೈಲದ ಶೇ.80ಕ್ಕೂ ಹೆಚ್ಚು ಭಾಗವನ್ನು ಚೀನಾ ಖರೀದಿಸುತ್ತದೆ.
ಅಮೆರಿಕದ ನಿರ್ಬಂಧಗಳು ಇರಾನ್ ಜನರ ಸಂಕಲ್ಪವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಇರಾನ್‌ನ ಪ್ರಥಮ ಉಪಾಧ್ಯಕ್ಷ ಮೊಹಮ್ಮದ್ ರೆಜಾ ಆರಿಫ್ ಹೇಳಿದ್ದಾರೆ. ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹಾಗೂ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ಕೂಡ ಅಮೆರಿಕದ ಕ್ರಮವನ್ನು ಖಂಡಿಸಿದ್ದಾರೆ.
ಇದೇ ವೇಳೆ, ಅಮೆರಿಕದ ಬೆದರಿಕೆಗಳಿಗೆ ಇರಾನ್ ಸೇನೆ ಕಠಿಣ ಹಾಗೂ ವಿನಾಶಕಾರಿ ಪ್ರತಿಕ್ರಿಯೆ ನೀಡಲಿದೆ ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಅಲಿ ಅಬ್ದುಲ್ಲಾಹಿ ಎಚ್ಚರಿಸಿದ್ದಾರೆ. ಹೀಗಾಗಿ ಹೋರ್ಮುಜ್ ಜಲಸಂಧಿ ವಿಚಾರದಲ್ಲಿ ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.