
ಬೆಂಗಳೂರು, 20 ಆಗಸ್ಟ್ (ಹಿ.ಸ.):
ಆ್ಯಂಕರ್:ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರು ತಮ್ಮ ಆದರ್ಶ ವ್ಯಕ್ತಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸದ್ಭಾವನಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜೀವ್ ಗಾಂಧಿ ಅವರು ಸಂಪರ್ಕ ಕ್ರಾಂತಿಯ ಮೂಲಕ ಆಧುನಿಕ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ದೂರದೃಷ್ಟಿಯ ನಾಯಕರು. ಪಂಚಾಯತ್ ರಾಜ್, ಅಧಿಕಾರ ವಿಕೇಂದ್ರೀಕರಣ ಹಾಗೂ ಗ್ರಾಮ ಸ್ವರಾಜ್ಯದ ಆಶಯಗಳಿಗೆ ಅವರು ಹೊಸ ದಿಕ್ಕು ನೀಡಿದ್ದರು ಎಂದು ಖಂಡ್ರೆ ಸ್ಮರಿಸಿದರು.
ಕೋಲ್ಕತ್ತಾದಲ್ಲಿ ನಡೆದ ಸೇವಾದಳದ ಕಾರ್ಯಕ್ರಮವೊಂದರಲ್ಲಿ ರಾಜೀವ್ ಗಾಂಧಿ ಅವರಿಂದ ಪ್ರೇರಣೆ ಪಡೆದು ತಾವು ಸಾರ್ವಜನಿಕ ಜೀವನಕ್ಕೆ ಬಂದಿದ್ದು, ಅವರನ್ನು ಸದಾ ತಮ್ಮ ಆದರ್ಶ ನಾಯಕ ಹಾಗೂ ರೋಲ್ ಮಾಡೆಲ್ ಎಂದು ಗೌರವಿಸುತ್ತೇನೆ ಎಂದು ಹೇಳಿದರು.
ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡಿದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರನ್ನೂ ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸಿದರು.
ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಅವರ ಆದರ್ಶಗಳು ಸಾರ್ವಜನಿಕ ಬದುಕಿನಲ್ಲಿ ಸೇವೆ ಸಲ್ಲಿಸುವ ಎಲ್ಲರಿಗೂ ಸದಾ ಪ್ರೇರಣೆಯಾಗಲಿ ಎಂದು ಸಚಿವ ಈಶ್ವರ ಖಂಡ್ರೆ ಆಶಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.