ಧಾರವಾಡದಲ್ಲಿ ಸಾಧಕರೊಂದಿಗೆ ಚಿಂತನ ಮಂಥನ: ಬಾಬು ಜತ್ತಕರ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ
ಧಾರವಾಡ, 20 ಆಗಸ್ಟ್ (ಹಿ.ಸ.): ಆ್ಯಂಕರ್:ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ಸಾಧಕರೊಂದಿಗೆ ಚಿಂತನ ಮಂಥನ’ ಕಾರ್ಯಕ್ರಮದ ಅಂಗವಾಗಿ ಹಿರಿಯ ಕಲಾವಿದ ಪ್ರೊ. ಬಾಬು ಜತ್ತಕರ ಅವರ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ಹಾಗೂ ಸಂವಾದ ಕಾರ್ಯಕ್ರಮಕ್ಕೆ
ಚಿಂತನ ಮಂಥನ


ಧಾರವಾಡ, 20 ಆಗಸ್ಟ್ (ಹಿ.ಸ.):

ಆ್ಯಂಕರ್:ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ಸಾಧಕರೊಂದಿಗೆ ಚಿಂತನ ಮಂಥನ’ ಕಾರ್ಯಕ್ರಮದ ಅಂಗವಾಗಿ ಹಿರಿಯ ಕಲಾವಿದ ಪ್ರೊ. ಬಾಬು ಜತ್ತಕರ ಅವರ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ರಂಜಾನ್ ದರ್ಗಾ, ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ, ಟ್ರಸ್ಟ್ ಸದಸ್ಯರಾದ ಎಫ್.ವಿ. ಚಿಕ್ಕಮಠ, ಡಾ. ಬಿ.ಎಲ್. ಚವ್ಹಾಣ, ಡಾ. ಬಿ.ಎಚ್. ಕುರಿಯವರ, ಎಸ್.ಕೆ. ಪತ್ತಾರ ಹಾಗೂ ಡಾ. ರೇಣುಕಾ ಮಾರ್ಕಂಡೇಯ ಉಪಸ್ಥಿತರಿದ್ದರು.

ಟ್ರಸ್ಟ್ ಸದಸ್ಯ ಸುರೇಶ ಹಾಲಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಡಿ.ಎಂ. ಬಡೀಗೇರ ವಂದಿಸಿದರು.

ಮೂರು ದಶಕಗಳ ಕಲಾ ಸೇವೆ

ಪ್ರೊ. ಬಾಬು ಜತ್ತಕರ ಅವರು ಕರ್ನಾಟಕ ಚಿತ್ರಕಲಾ ಪರಿಷತ್ತಿನ ದೃಶ್ಯಕಲಾ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾಗಿದ್ದು, ಅನ್ವಯಕಲಾ ವಿಭಾಗದಲ್ಲಿ ಪ್ರಾಧ್ಯಾಪಕ, ಸಹಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ ಹಾಗೂ ಪ್ರಾಂಶುಪಾಲರಾಗಿ ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಸೇವಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಮಾರ್ಗದರ್ಶನ ನೀಡಿರುವ ಅವರು, ಚಿತ್ರಕಲಾ ಪ್ರದರ್ಶನಗಳು ಹಾಗೂ ಕಲಾ ಶಿಬಿರಗಳನ್ನು ಅಚ್ಚುಕಟ್ಟಾಗಿ ಸಂಘಟಿಸಿ ಕಲಾವಿದರು ಮತ್ತು ಕಲಾಸಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರತಿ ವರ್ಷ ನಡೆಯುವ ‘ಚಿತ್ರಸಂತೆ’ಯಂತಹ ಪ್ರಮುಖ ಕಲಾ ಕಾರ್ಯಕ್ರಮಗಳ ಯಶಸ್ವಿ ಸಂಘಟನೆಯಲ್ಲಿ ಅವರ ಪಾತ್ರ ಗಮನಾರ್ಹವಾಗಿದೆ.

ನಾಡಿನ ವಿವಿಧ ಭಾಗಗಳಿಂದ ಬೆಂಗಳೂರಿಗೆ ಕಲಾ ಪ್ರದರ್ಶನ ಹಾಗೂ ಇತರ ಕಲಾ ಚಟುವಟಿಕೆಗಳಿಗಾಗಿ ಆಗಮಿಸುವ ಕಲಾವಿದರಿಗೆ ಸದಾ ಸ್ನೇಹಪೂರ್ವಕವಾಗಿ ನೆರವಾಗುವ ಸಹೃದಯಿ ಕಲಾವಿದರಾಗಿ ಬಾಬು ಜತ್ತಕರ ಗುರುತಿಸಿಕೊಂಡಿದ್ದಾರೆ. ಹಲವು ಜಾಹೀರಾತು ಸಂಸ್ಥೆಗಳು ಹಾಗೂ ಪತ್ರಿಕೆಗಳಿಗೆ ಕಲಾ ವಿನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಸದಸ್ಯ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಸಂಘದ ಉಪಾಧ್ಯಕ್ಷರಾಗಿದ್ದಾರೆ. ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಹಲವು ಕಲಾ ಪ್ರದರ್ಶನಗಳನ್ನು ಆಯೋಜಿಸಿ, ಕಲೆಗೆ ಸಂಬಂಧಿಸಿದ ಉಪನ್ಯಾಸಗಳನ್ನೂ ನೀಡಿದ್ದಾರೆ.

ಹಲವು ಪ್ರಶಸ್ತಿಗಳ ಗೌರವ

ಬಾಬು ಜತ್ತಕರ ಅವರ ಕಲಾ ಸೇವೆಗೆ ಹಲವು ಪ್ರತಿಷ್ಠಿತ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಫ್ರೆಂಡ್‌ಶಿಪ್ ಸೊಸೈಟಿಯ ‘ಭಾರತ ಜ್ಯೋತಿ’ ಪ್ರಶಸ್ತಿ, ಆಂಧ್ರಪ್ರದೇಶದ ನವರಂಗ ಆರ್ಟ್ ಅಕಾಡೆಮಿ ಪ್ರಶಸ್ತಿ, ಕಲಾದರ್ಪಣ ಪ್ರಶಸ್ತಿ, ವಿಶ್ವಕರ್ಮ ಚಿತ್ರಕಲಾ ಭೂಷಣ ಪ್ರಶಸ್ತಿ, ವರ್ಣ ಕಲಾಶ್ರೀ ಪ್ರಶಸ್ತಿ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ಅವರ ಕಲಾಕೃತಿಗಳು ಕಲಾಸಕ್ತರಿಗೆ ವಿಶಿಷ್ಟ ಅನುಭವ ನೀಡುತ್ತಿದ್ದು, ಚಿತ್ರಕಲಾ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ದೀರ್ಘಕಾಲದ ಸೇವೆ ಹಾಗೂ ಯುವ ಕಲಾವಿದರಿಗೆ ನೀಡಿರುವ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande