
ಕೋಲಾರ, ಆಗಸ್ಟ್ ೧೯(ಹಿ.ಸ.)
ಆ್ಯಂಕರ್ : ಪಾನೀಯ, ದ್ರವ ಅಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಜರ್ಮನಿ ಮೂಲದ ಕ್ರೋನ್ಸ್ ಕಂಪನಿಯು ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ದಾಖಲೆ ಅವಧಿಯಲ್ಲಿ ನಿರ್ಮಿಸಿರುವ ನೂತನ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಸ್ಥಾವರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಉದ್ಘಾಟಿಸಿದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ೨೦೨೪ರ ಅಕ್ಟೋಬರ್ ತಿಂಗಳಲ್ಲಿ ಕ್ರೋನ್ಸ್ ಕಂಪನಿ ಸಲ್ಲಿಸಿದ್ದ ಹೂಡಿಕೆ ಯೋಜನೆಗೆ ಅನುಮೋದನೆ ಕೊಟ್ಟು, ೩೦ ಎಕರೆ ಭೂಮಿಯನ್ನು ಮಂಜೂರು ಮಾಡಿದೆವು. ಬಳಿಕ ೨೦೨೫ರ ಫೆ.೨೦ರಂದು ಈ ಸ್ಥಾವರ ನಿರ್ಮಾಣಕ್ಕೆ ನಾನೇ ಭೂಮಿಪೂಜೆ ಮಾಡಿದೆ. ಇದಾದ ಕೇವಲ ೧೮ ತಿಂಗಳಲ್ಲಿ ಈ ಭವ್ಯ ಸ್ಥಾವರ ತಲೆ ಎತ್ತಿದೆ. ಇದೊಂದು ವಿಶಿಷ್ಟ ದಾಖಲೆಯಾಗಿದ್ದು, ಹೂಡಿಕೆದಾರರಿಗೆ ಒಳ್ಳೆಯ ಸಂದೇಶ ರವಾನಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರೋನ್ಸ್ ಕಂಪನಿಯು ಈ ನಿವೇಶನದಲ್ಲಿ ಈಗ ೧೬ ಸಾವಿರ ಚದರ ಮೀಟರ್ ನಷ್ಟು ವಿಸ್ತಾರದ ಉತ್ಪಾದನಾ ಘಟಕ ನಿರ್ಮಿಸಿದೆ. ಇದಕ್ಕಾಗಿ ಕಂಪನಿಯು ೩೧೫ ಕೋಟಿ ರೂಪಾಯಿ ವಿನಿಯೋಗಿಸಿದ್ದು, ಇಲ್ಲಿ ೪೦೦ ಉದ್ಯೋಗಗಳು ಸೃಷ್ಟಿಯಾಗಲಿವೆ. ಬೆಂಗಳೂರಿಗೆ ಹತ್ತಿರದಲ್ಲೇ ಇರುವ ವೇಮಗಲ್ ಮತ್ತು ಕೋಲಾರ ಕೈಗಾರಿಕಾ ಪ್ರದೇಶಗಳ ಅಗಾಧ ಬೆಳವಣಿಗೆಗೆ ಅಪಾರ ಅವಕಾಶಗಳಿವೆ. ಕಂಪನಿಗಳು ಸ್ಥಳೀಯ ಯುವಜನರಿಗೆ ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಕೊಡಲು ಮುಂದಾಗಬೇಕು ಎಂದು ಅವರು ಹೇಳಿದ್ದಾರೆ.
ಕ್ರೋನ್ಸ್ ಕಂಪನಿಯು ವಿಶ್ವಾದ್ಯಂತ ೨೧ ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಕಳೆದ ವರ್ಷ ೫.೬೫ ಬಿಲಿಯನ್ ಡಾಲರ್ ವಹಿವಾಟು ನಡೆಸಿರುವ ಕಂಪನಿಯು ರಾಜ್ಯದ ಆರ್ಥಿಕತೆಗೂ ಮೌಲಿಕ ಕೊಡುಗೆ ನೀಡಲಿದೆ. ಈ ಘಟಕದಲ್ಲಿ ಭಾರತದ ಮಾರುಕಟ್ಟೆಗೆ ಉನ್ನತ ಗುಣಮಟ್ಟದ ಎರ್ಗೋಬ್ಲಾಕ್ ಪ್ಯಾಕೇಜಿಂಗ್ ಯಂತ್ರಗಳನ್ನು ಉತ್ಪಾದಿಸಲಿದೆ. ಎಲ್ಲ ರೀತಿಯ ಬಾಟಲಿ ಉತ್ಪಾದನೆಗೆ ಬೇಕಾಗುವ ಯಂತ್ರಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಗಂಟೆಗೆ ಒಂದು ಲಕ್ಷ ಕೊಕೊ ಕೋಲಾ ರೀತಿಯ ಬಾಟಲಿ ತಯಾರಿಸುವ ಯಂತ್ರಗಳನ್ನು ಕೂಡ ಉತ್ಪಾದಿಸುತ್ತಿರುವುದು ಖುಷಿಯ ವಿಚಾರ. ಸರಕಾರದ ಅಂಗವಾದ ಕೆಐಎಡಿಬಿ ಕೈಗಾರಿಕಾಸ್ನೇಹಿ ಸಂಸ್ಕೃತಿಗೆ ಇನ್ನೊಂದು ಹೆಸರಾಗಿದೆ ಎಂದು ಪಾಟೀಲ ಹೇಳಿದರು.
ಕಾರ್ಯಕ್ರಮದಲ್ಲಿ ಕೋಲಾರ ಸಂಸದ ಮಲ್ಲೇಶ ಬಾಬು, ಶಾಸಕ ಕೊತ್ತೂರು ಮಂಜುನಾಥ, ಮಾಜಿ ಸ್ಪೀಕರ್ ವಿ.ಆರ್ ಸುದರ್ಶನ್, ನಿಯೋಜಿತ ಜರ್ಮನ್ ಕಾನ್ಸುಲ್ ಜನರಲ್ ಡಾ.ಕ್ರಿಸ್ಟಾಫ್ ಡೋರ್ಸ್ ಫೆಲ್ಟ್, ಕಂಪನಿಯ ಸಿಓಓ ರಾಲ್ಫ್ ಗೋಲ್ಡ್ ಬ್ರನ್ನರ್, ವ್ಯವಸ್ಥಾಪಕ ನಿರ್ದೇಶಕ ಥಾಮಸ್ ವೂಲ್ಫರ್, ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಸುರಾಜ್ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್