
ಜಮ್ಮು, 17 ಆಗಸ್ಟ್ (ಹಿ.ಸ.):
ಆ್ಯಂಕರ್:
ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಲೋರನ್ ಕಣಿವೆಯ ಪುಲಸ್ತ್ಯ ನದಿ ತೀರದಲ್ಲಿರುವ ಪವಿತ್ರ ಬೂಢಾ ಅಮರನಾಥ ದೇವಾಲಯದ ವಾರ್ಷಿಕ ಯಾತ್ರೆ ಸೋಮವಾರ ಕಠಿಣ ಭದ್ರತೆಯ ನಡುವೆ ಆರಂಭವಾಯಿತು.
ಜಮ್ಮುವಿನ ಭಗವತಿನಗರ ಮೂಲ ಶಿಬಿರದಿಂದ ಬೆಳಗ್ಗೆ ಸುಮಾರು 6.30ಕ್ಕೆ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ಮೊದಲ ತಂಡದ ಯಾತ್ರಾರ್ಥಿಗಳಿಗೆ ಧ್ವಜ ತೋರಿಸಿ ಯಾತ್ರೆಗೆ ಚಾಲನೆ ನೀಡಿದರು. ಸಮುದ್ರ ಮಟ್ಟದಿಂದ ಸುಮಾರು 4,600 ಅಡಿ ಎತ್ತರದಲ್ಲಿರುವ ಈ ಪುರಾತನ ಶಿವ ಕ್ಷೇತ್ರ ಜಮ್ಮುವಿನಿಂದ ಸುಮಾರು 290 ಕಿ.ಮೀ. ದೂರದಲ್ಲಿದೆ.
ಯಾತ್ರೆಯ ಹಿನ್ನೆಲೆಯಲ್ಲಿ ಜಮ್ಮು–ರಾಜೌರಿ–ಪೂಂಚ್ ಹೆದ್ದಾರಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು, ಹೆಚ್ಚುವರಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಪೂಂಚ್‌ನಲ್ಲಿ ವಿಶೇಷ ಕಾರ್ಯಾಚರಣೆ ಪಡೆ ಮನೆಗಳು ಹಾಗೂ ವಸತಿ ಪ್ರದೇಶಗಳಲ್ಲಿ ಶೋಧ ನಡೆಸಿ ನಿವಾಸಿಗಳು ಮತ್ತು ಬಾಡಿಗೆದಾರರ ವಿವರಗಳನ್ನು ಸಂಗ್ರಹಿಸಿದೆ. ಅಪರಿಚಿತರಿಗೆ ಆಶ್ರಯ ನೀಡದಂತೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
12 ದಿನಗಳ ಯಾತ್ರೆ ಆ.28ರಂದು ರಕ್ಷಾಬಂಧನದ ದಿನ ಮುಕ್ತಾಯಗೊಳ್ಳಲಿದೆ. ಪೂಂಚ್ ಜಿಲ್ಲೆಯ ಮಂಡಿ ತಾಲೂಕಿನ ರಾಜಪುರ ಗ್ರಾಮದ ಶಿವ ದೇಗುಲದವರೆಗೆ ಯಾತ್ರೆ ಸಾಗಲಿದೆ. ಬೂಢಾ ಅಮರನಾಥ ದರ್ಶನವಿಲ್ಲದೆ ಅಮರನಾಥ ಯಾತ್ರೆ ಸಂಪೂರ್ಣವಾಗುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ.
ಯಾತ್ರಾ ಮಾರ್ಗದಲ್ಲಿ ಜಲನಿರೋಧಕ ಟೆಂಟ್‌ಗಳು, ಸಾಮೂಹಿಕ ಅಡುಗೆ ವ್ಯವಸ್ಥೆ, ವಾಹನ ನಿಲುಗಡೆ ಸ್ಥಳ ಹಾಗೂ ಆರೋಗ್ಯ ಕೇಂದ್ರಗಳನ್ನು ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಕಲ್ಪಿಸಿವೆ. ದೇಶದ ವಿವಿಧೆಡೆಯಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಪೂರ್ವ ನೋಂದಣಿ ವ್ಯವಸ್ಥೆಯನ್ನೂ ಆರಂಭಿಸಲಾಗಿದೆ.
ಧಾರ್ಮಿಕ ಸೌಹಾರ್ದತೆಗೆ ಪ್ರತೀಕವಾಗಿರುವ ಈ ಕ್ಷೇತ್ರದ ನಿರ್ವಹಣೆಯಲ್ಲಿ ಸ್ಥಳೀಯ ಮುಸ್ಲಿಂ ಕುಟುಂಬಗಳು ಹಾಗೂ ಗಡಿ ಭದ್ರತಾ ಪಡೆ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತ್ರಯೋದಶಿಯಂದು ಪೂಂಚ್‌ನ ದಶನಾಮಿ ಅಖಾಡದಿಂದ ಪವಿತ್ರ ಛಡಿ ಮುಬಾರಕ್ ಯಾತ್ರೆ ಆರಂಭವಾಗಲಿದ್ದು, ಸಾವಿರಾರು ಸಾಧುಗಳು ಮತ್ತು ಭಕ್ತರು ಪಾಲ್ಗೊಳ್ಳಲಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.