ಹಿಪ್ಪರಗಿ ಕಾರು ಸ್ಪೋಟ ಪ್ರಕರಣ: ಪೂರ್ವನಿಯೋಜಿತ ಕೊಲೆ ಯತ್ನ; ಎಸ್ಪಿ ಗೋಯಲ್
ಬಾಗಲಕೋಟೆ, 14 ಆಗಸ್ಟ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬಳಿ ಜುಲೈ 25ರಂದು ರಾತ್ರಿ ನಡೆದಿದ್ದ ಭಯಾನಕ ಕಾರು ಸ್ಫೋಟ ಪ್ರಕರಣಕ್ಕೆ ಕೊನೆಗೂ ಪೊಲೀಸರಿಂದ ತೆರೆ ಬಿದ್ದಿದ್ದು, ಇದು ತಾಂತ್ರಿಕ ದೋಷದಿಂದ ಸಂಭವಿಸಿದ ಸ್ಫೋಟವಲ್ಲ, ಬದಲಾಗಿ ಪೂರ್ವಯೋಜಿತ ಕೊಲೆ ಯತ್ನ ಎಂಬುದು ತನಿಖೆಯಿಂದ ಬಹಿ
ಪೋಲಿಸ್


ಪೋಲಿಸ್


ಪೋಲಿಸ್


ಪೋಲಿಸ್


ಬಾಗಲಕೋಟೆ, 14 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬಳಿ ಜುಲೈ 25ರಂದು ರಾತ್ರಿ ನಡೆದಿದ್ದ ಭಯಾನಕ ಕಾರು ಸ್ಫೋಟ ಪ್ರಕರಣಕ್ಕೆ ಕೊನೆಗೂ ಪೊಲೀಸರಿಂದ ತೆರೆ ಬಿದ್ದಿದ್ದು, ಇದು ತಾಂತ್ರಿಕ ದೋಷದಿಂದ ಸಂಭವಿಸಿದ ಸ್ಫೋಟವಲ್ಲ, ಬದಲಾಗಿ ಪೂರ್ವಯೋಜಿತ ಕೊಲೆ ಯತ್ನ ಎಂಬುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯೆಲ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಜುಲೈ 25ರಂದು ರಾತ್ರಿ ಸುಮಾರು 10.45ರ ವೇಳೆಗೆ ಹಿಪ್ಪರಗಿ ಸಮೀಪ ಮಹೀಂದ್ರಾ XUV300 ಕಾರು ಏಕಾಏಕಿ ಭೀಕರವಾಗಿ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಕಾರಿನ ಅವಶೇಷಗಳು ಚದುರಿಹೋಗಿದ್ದವು. ಕಾರಿನ ಮಾಲೀಕ ಹನುಮಂತ ಅಥಣಿ ಅವರು ಕಾರು ಹತ್ತಿ ಮನೆಗೆ ತೆರಳಲು ಮುಂದಾಗಿದ್ದ ವೇಳೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಆರಂಭದಲ್ಲಿ ಕಾರಿನಲ್ಲಿ ತಾಂತ್ರಿಕ ದೋಷ ಉಂಟಾಗಿ ಸ್ಫೋಟ ಸಂಭವಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಾಗಲಕೋಟೆ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದು, ಸುಮಾರು 20 ದಿನಗಳ ಸುದೀರ್ಘ ತನಿಖೆಯ ಬಳಿಕ ಸ್ಫೋಟದ ಹಿಂದಿನ ಭಯಾನಕ ಸಂಚು ಬಯಲಿಗೆಳೆದಿದ್ದಾರೆ.

ಪೊಲೀಸರ ತನಿಖೆಯ ಪ್ರಕಾರ, ಆರೋಪಿಗಳು ಜಿಲೆಟಿನ್ ಕಡ್ಡಿಗಳನ್ನು ಬಳಸಿ ಕಾರನ್ನು ಸ್ಫೋಟಿಸಿ ಹನುಮಂತ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಆದರೆ ಸ್ಫೋಟ ಸಂಭವಿಸಿದರೂ ಹನುಮಂತ ಅವರು ಪಾರಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿವಾನಂದ ಜೆಲ್ಲಿ, ರೇವಣಪ್ಪ ಜೆಲ್ಲಿ, ಮಾದೇವ ಸಂಗಾಪುರ ಹಾಗೂ ಮಲ್ಲಿಕಾರ್ಜುನ ಬದ್ರಪ್ಪನವರ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಗಜಾನನನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

40 ಲಕ್ಷ ಸಾಲ, 5 ಎಕರೆ ಜಮೀನು ಮತ್ತು 67 ಲಕ್ಷ ರೂಪಾಯಿ ಬೇಡಿಕೆ

ತನಿಖೆಯಲ್ಲಿ ಸ್ಫೋಟದ ಹಿಂದಿನ ಪ್ರಮುಖ ಕಾರಣ ಹಣ ಹಾಗೂ ಜಮೀನು ವ್ಯವಹಾರ ಎಂಬುದು ಬೆಳಕಿಗೆ ಬಂದಿದೆ.

ಎ1 ಆರೋಪಿ ಶಿವಾನಂದ ಅವರ ದೊಡ್ಡಪ್ಪ ನಿಂಗಪ್ಪ ಅವರು ಕಾರಿನ ಮಾಲೀಕ ಹನುಮಂತ ಅವರಿಂದ ಸುಮಾರು 40 ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲವನ್ನು ಮರುಪಾವತಿಸದ ಹಿನ್ನೆಲೆಯಲ್ಲಿ ನಿಂಗಪ್ಪ ಅವರ ಐದು ಎಕರೆ ಜಮೀನು ಹನುಮಂತ ಅವರ ಪಾಲಾಗಿತ್ತು.

ಕುಟುಂಬದ ಆಸ್ತಿ ಬೇರೆಯವರ ಪಾಲಾಗಬಾರದು ಎಂಬ ಕಾರಣಕ್ಕೆ ಶಿವಾನಂದ ಈ ವಿಚಾರದಲ್ಲಿ ಅಸಮಾಧಾನಗೊಂಡಿದ್ದರು. ಸಾಲದ ಹಣವನ್ನು ತೀರಿಸಿ ಜಮೀನನ್ನು ಮರಳಿ ಪಡೆಯುವುದಾಗಿ ಶಿವಾನಂದ ಮನವಿ ಮಾಡಿದ್ದರು ಎನ್ನಲಾಗಿದೆ. ಇದಕ್ಕೆ ಹನುಮಂತ ಅವರು ಸಾಲದ 40 ಲಕ್ಷ ರೂಪಾಯಿಯ ಜೊತೆಗೆ ಬಡ್ಡಿ ಸೇರಿ ಒಟ್ಟು 67 ಲಕ್ಷ ರೂಪಾಯಿ ಪಾವತಿಸುವಂತೆ ಹೇಳಿದ್ದರು ಎನ್ನಲಾಗಿದೆ.

ಈ ವ್ಯವಹಾರದಿಂದ ಅಸಮಾಧಾನಗೊಂಡ ಶಿವಾನಂದ, ಹನುಮಂತ ಅವರು ತಮ್ಮ ಕುಟುಂಬಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಭಾವಿಸಿ, ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ.

25ರಿಂದ 30 ಜಿಲೆಟಿನ್ ಕಡ್ಡಿಗಳ ಬಳಕೆ

ಆರೋಪಿಗಳ ಪೈಕಿ ಶಿವಾನಂದ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಜಿಲೆಟಿನ್ ಕಡ್ಡಿಗಳನ್ನು ಬಳಸುವ ವಿಧಾನ ತಿಳಿದಿತ್ತು ಎನ್ನಲಾಗಿದ್ದು, ಇದೇ ಜ್ಞಾನವನ್ನು ಬಳಸಿಕೊಂಡು ಕಾರು ಸ್ಫೋಟಿಸುವ ಸಂಚು ರೂಪಿಸಲಾಗಿತ್ತು.

ಪೊಲೀಸರ ಪ್ರಕಾರ, ಸುಮಾರು 25ರಿಂದ 30 ಜಿಲೆಟಿನ್ ಕಡ್ಡಿಗಳನ್ನು ಒಟ್ಟುಗೂಡಿಸಿ ಕಾರಿನ ಟೈರ್ ಬಳಿ ಇರಿಸಿ, ಕೆಪೆಸಿಟರ್ ಹಾಗೂ ಡಿಟೋನೇಟರ್ ಬಳಸಿ ಸ್ಫೋಟ ನಡೆಸಲಾಗಿದೆ. ಸ್ಫೋಟದ ಪರಿಣಾಮ ಕಾರು ಸಂಪೂರ್ಣವಾಗಿ ಹಾನಿಗೊಳಗಾದರೂ, ಹನುಮಂತ ಅವರಿಗೆ ಯಾವುದೇ ಗಂಭೀರ ಗಾಯವಾಗದೆ ಪಾರಾಗಿದ್ದಾರೆ.

ಕದ್ದ ಸಿಮ್ನಿಂದ ಸಿಕ್ಕಿತು ಪೊಲೀಸರಿಗೆ ಮಹತ್ವದ ಸುಳಿವು

ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿಗಳ ಪತ್ತೆಗೆ ಮಹತ್ವದ ಸುಳಿವು ಮೊಬೈಲ್ ಹಾಗೂ ಸಿಮ್ ಕಾರ್ಡ್ ಮೂಲಕ ದೊರೆತಿದೆ.

ಸ್ಫೋಟದ ಸ್ಥಳಕ್ಕೆ ತೆರಳುವ ಮಾರ್ಗದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಸಂಬಂಧಿಸಿದ ಸಿಮ್ ಕಾರ್ಡ್ಗಳನ್ನು ಕಳವು ಮಾಡಿದ್ದ ಆರೋಪಿಗಳು, ಅದೇ ಸಿಮ್ ಬಳಸಿಕೊಂಡು ಹನುಮಂತ ಅವರಿಗೆ ಕರೆ ಮಾಡಿದ್ದರು ಎನ್ನಲಾಗಿದೆ.

ಇಷ್ಟೇ ಅಲ್ಲದೆ, ಸ್ಫೋಟದ ಬಳಿಕ ಹನುಮಂತ ಅವರಿಗೆ ಬೆದರಿಕೆ ಸಂದೇಶವನ್ನೂ ಕಳುಹಿಸಲಾಗಿತ್ತು ಎನ್ನಲಾಗಿದೆ. ಈ ಬಾರಿ ತಪ್ಪಿಸಿಕೊಂಡಿದ್ದೀಯ, ಮುಂದಿನ ಬಾರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅರ್ಥದ ಸಂದೇಶ ಆರೋಪಿಗಳ ವಿರುದ್ಧದ ತನಿಖೆಗೆ ಪ್ರಮುಖ ಸುಳಿವಾಗಿ ಪರಿಣಮಿಸಿತು.

ಈ ಮೆಸೇಜ್ನ ಜಾಡು ಹಿಡಿದ ಪೊಲೀಸರು ಬಳಸಲಾಗಿದ್ದ ಸಿಮ್ ಕಾರ್ಡ್ ಹಾಗೂ ಮೊಬೈಲ್ ಫೋನ್ಗಳ ತಾಂತ್ರಿಕ ಮಾಹಿತಿ ಸಂಗ್ರಹಿಸಿ ಆರೋಪಿಗಳತ್ತ ತನಿಖೆಯನ್ನು ಕೊಂಡೊಯ್ದಿದ್ದಾರೆ. ಮೊಬೈಲ್ ಹಾಗೂ ಸಿಮ್ಗಳ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಿಲೆಟಿನ್ ನೀಡಿದವರ ವಿಚಾರಣೆಯೂ ಮುಂದುವರಿಕೆ

ಕಾರು ಸ್ಫೋಟಕ್ಕೆ ಬಳಸಲಾಗಿದೆ ಎನ್ನಲಾದ ಜಿಲೆಟಿನ್ ಕಡ್ಡಿಗಳನ್ನು ಆರೋಪಿಗಳಿಗೆ ನೀಡಿದ ವ್ಯಾಪಾರಸ್ಥರನ್ನು ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸ್ಫೋಟಕ ವಸ್ತುಗಳು ಆರೋಪಿಗಳ ಕೈಗೆ ಹೇಗೆ ತಲುಪಿದವು, ಅವುಗಳ ಖರೀದಿ ಹಾಗೂ ಬಳಕೆಯ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.

ಈ ಪ್ರಕರಣದ ಕುರಿತು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಅವರು ಮಾಹಿತಿ ನೀಡಿದ್ದು, ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ, ಹಿಪ್ಪರಗಿ ಬಳಿ ನಡೆದಿದ್ದ ಕಾರು ಬ್ಲಾಸ್ಟ್ ಪ್ರಕರಣ ತಾಂತ್ರಿಕ ದೋಷದಿಂದ ಸಂಭವಿಸಿದ ಘಟನೆ ಎಂಬ ಆರಂಭಿಕ ಅನುಮಾನಕ್ಕೆ ತೆರೆ ಬಿದ್ದಿದ್ದು, ಹಣ ಮತ್ತು ಜಮೀನು ವ್ಯವಹಾರದ ಹಿನ್ನೆಲೆಯಲ್ಲಿ ಪೂರ್ವಯೋಜಿತವಾಗಿ ನಡೆಸಿದ ಕೊಲೆ ಯತ್ನ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ತಾಂತ್ರಿಕ ಸಾಕ್ಷ್ಯಗಳು, ಮೊಬೈಲ್ ಹಾಗೂ ಸಿಮ್ಗಳ ಜಾಡು ಹಿಡಿದು ಪ್ರಕರಣವನ್ನು ಭೇದಿಸುವಲ್ಲಿ ಬಾಗಲಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande