
ಬಾಗಲಕೋಟೆ, 10 ಆಗಸ್ಟ್ (ಹಿ.ಸ.)
ಆ್ಯಂಕರ್ : ಮನೆಯ ಮುಂದೆ ಹಾಗೂ ಎಪಿಎಂಸಿ ಆವರಣದ ಪಂಚಲಿಂಗೇಶ್ವರ ದೇವಸ್ಥಾನದ ಸಮೀಪ ನಿಲ್ಲಿಸಿದ್ದ ಇನ್ನೋವಾ ಕಾರಿನ ಗ್ಲಾಸ್ ಒಡೆದು ಕಳ್ಳರು ಕಾರನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ.
ನಗರದ ಎಪಿಎಂಸಿ ಆವರಣದಲ್ಲಿರುವ ಪಂಚಲಿಂಗೇಶ್ವರ ದೇವಸ್ಥಾನದ ಸಮೀಪ ಅರವಿಂದ ಮೇಲಿನಮನಿ ಅವರಿಗೆ ಸೇರಿದ ಇನ್ನೋವಾ ಕಾರನ್ನು ನಿಲ್ಲಿಸಲಾಗಿತ್ತು. ರಾತ್ರಿ ವೇಳೆ ಸ್ಥಳಕ್ಕೆ ಬಂದಿರುವ ಕಳ್ಳರು ಕಾರಿನ ಗ್ಲಾಸ್ ಒಡೆದು, ವಾಹನವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ಕಾರು ಸ್ಥಳದಲ್ಲಿ ಕಾಣಿಸದಿರುವುದನ್ನು ಗಮನಿಸಿದ ಮಾಲೀಕರು ಹಾಗೂ ಸ್ಥಳೀಯರು ಪರಿಶೀಲಿಸಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಕಾರಿನ ಗ್ಲಾಸ್ ಒಡೆದಿರುವುದು ಕಂಡುಬಂದಿದ್ದು, ಕಳ್ಳರು ಪೂರ್ವನಿಯೋಜಿತವಾಗಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ಕುರಿತು ಮಾಹಿತಿ ದೊರೆತ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುತ್ತಮುತ್ತಲಿನ ಪ್ರದೇಶದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಕಾರು ಯಾವ ದಿಕ್ಕಿನಲ್ಲಿ ತೆರಳಿದೆ ಹಾಗೂ ಕಳುವಿನ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.
ನಗರದಲ್ಲಿ ವಾಹನ ಕಳವು ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸುವಂತೆ ಹಾಗೂ ರಾತ್ರಿ ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ವಾಹನಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಕಳುವಾದ ಇನ್ನೋವಾ ಕಾರಿನ ಪತ್ತೆಗಾಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande