
ವಿಜಯಪುರ, 08 ಜುಲೈ (ಹಿ.ಸ.)
ಆ್ಯಂಕರ್ : ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯ ಸೋಗು ಹಾಕಿಕೊಂಡು ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ನಡೆಸುತ್ತಿದ್ದ ವಂಚಕನನ್ನು ವಿಜಯಪುರ ಜಿಲ್ಲಾ ಪೊಲೀಸರು 12 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಲವು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಬೆಂಗಳೂರಿನಲ್ಲಿ ವಿಶೇಷ ತನಿಖಾ ತಂಡದ ಬಲೆಗೆ ಬಿದ್ದಿದ್ದಾನೆ.
ಬಂಧಿತ ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವರಗೋಡದಿನ್ನಿ ಗ್ರಾಮದ ಗ್ಯಾನಗೌಡ ಅಲಿಯಾಸ್ ಜ್ಞಾನಗೌಡ ಅಲಿಯಾಸ್ ಗಣೇಶ್ ಅಲಿಯಾಸ್ ಸಿ. ಸಂಪತ್ಕುಮಾರ್ (31) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ವಿಜಯಪುರ ಜಿಲ್ಲೆಯ ಎಪಿಎಂಸಿ, ತಾಳಿಕೋಟೆ ಹಾಗೂ ಮುದ್ದೇಬಿಹಾಳ ಪೊಲೀಸ್ ಠಾಣೆಗಳಲ್ಲಿ ಐದಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ಪೊಲೀಸ್ ಸಮವಸ್ತ್ರ ಧರಿಸಿ ತಾನೊಬ್ಬ ಪ್ರಭಾವಿ ಡಿಎಸ್ಪಿ ಎಂದು ಸಾರ್ವಜನಿಕರನ್ನು ನಂಬಿಸುತ್ತಿದ್ದ. ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ), ಜೈಲರ್ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ ನಿರುದ್ಯೋಗಿ ಯುವಕರು ಹಾಗೂ ಅವರ ಕುಟುಂಬಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ನಡೆಸುತ್ತಿದ್ದ ಎನ್ನಲಾಗಿದೆ. ಉದ್ಯೋಗದ ನಿರೀಕ್ಷೆಯಲ್ಲಿದ್ದ ಅನೇಕ ಕುಟುಂಬಗಳು ಆತನ ಮಾತಿಗೆ ಮರುಳಾಗಿ ತಮ್ಮ ಜೀವನದ ಉಳಿತಾಯವನ್ನೇ ಕಳೆದುಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
2012ರಲ್ಲಿ ವಿಜಯಪುರ ಜಿಲ್ಲೆಯ ಕಾಖಂಡಕಿ ಗ್ರಾಮದ ವಿಠ್ಠಲ ಛಾಯಾಗೋಳ ಅವರ ಸಂಬಂಧಿಕರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ₹1.20 ಲಕ್ಷ ಪಡೆದುಕೊಂಡಿದ್ದ ಆರೋಪಿ, ಬಳಿಕ ಉದ್ಯೋಗವೂ ಕೊಡಿಸದೇ, ಹಣವನ್ನೂ ಹಿಂತಿರುಗಿಸಿರಲಿಲ್ಲ. ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಆರೋಪಿ ತನ್ನ ಇಬ್ಬರು ಸಹಚರರೊಂದಿಗೆ ಸೇರಿ ವಿಠ್ಠಲ ಛಾಯಾಗೋಳ ಅವರನ್ನು ಕಾರಿನಲ್ಲಿ ಅಪಹರಿಸಿ, ಕೈಕಾಲು ಕಟ್ಟಿ ಗೋಣಿ ಚೀಲದಲ್ಲಿ ತುಂಬಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದ ಹುಲಗಿ ಗ್ರಾಮದ ಕಾಲುವೆಗೆ ಎಸೆದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿ ಹಾಗೂ ಆತನ ಸಹಚರರನ್ನು ಈ ಹಿಂದೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸಂಪತ್ ಕಮಾರ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈ ಅವಧಿಯಲ್ಲಿಯೂ ತನ್ನ ವಂಚನೆ ಜಾಲವನ್ನು ಮುಂದುವರಿಸಿ, ಮುದ್ದೇಬಿಹಾಳ ತಾಲೂಕಿನ ಹಂದ್ರ್ಯಾಳ ಗ್ರಾಮದ ವ್ಯಕ್ತಿಯೊಬ್ಬರ ಮಗನಿಗೆ ಜೈಲರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ₹8 ಲಕ್ಷ ಪಡೆದು ವಂಚಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಸಂಬಂಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.
ಬಂಧನದಿಂದ ತಪ್ಪಿಸಿಕೊಳ್ಳಲು ಆರೋಪಿ ಹಲವು ನಕಲಿ ಹೆಸರುಗಳನ್ನು ಬಳಸುತ್ತಿದ್ದ. ಗ್ಯಾನಗೌಡ, ಜ್ಞಾನಗೌಡ, ಗಣೇಶ್ ಹಾಗೂ ಸಿ. ಸಂಪತ್ ಕುಮರ್ ಸೇರಿದಂತೆ ವಿವಿಧ ಹೆಸರಿನಲ್ಲಿ ಓಡಾಡುತ್ತಿದ್ದ ಆತ, ನೂರಾರು ಮೊಬೈಲ್ ಸಂಖ್ಯೆಗಳ ಮೂಲಕ ಜನರನ್ನು ಸಂಪರ್ಕಿಸಿ ಸ್ಥಳದಿಂದ ಸ್ಥಳಕ್ಕೆ ತೆರಳುತ್ತಾ ಪೊಲೀಸರ ಕಣ್ತಪ್ಪಿಸುತ್ತಿದ್ದ. ಇದರಿಂದ ಆತನ ಪತ್ತೆ ಕಾರ್ಯ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.
ಆರೋಪಿಯ ಚಲನವಲನ ಪತ್ತೆಹಚ್ಚಲು ವಿಜಯಪುರ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ ತಿಪ್ಪಾರೆಡ್ಡಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತಾಂತ್ರಿಕ ಮಾಹಿತಿ, ಮೊಬೈಲ್ ಲೋಕೇಶನ್, ಕರೆ ವಿವರಗಳು ಹಾಗೂ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಜುಲೈ 6ರಂದು ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಉದ್ಯೋಗದ ಹೆಸರಿನಲ್ಲಿ ವಂಚನೆ ನಡೆಸುತ್ತಿದ್ದ ನಕಲಿ ಡಿಎಸ್ಪಿಯ ಅಸಲಿ ಆಟಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಇಂತಹ ವಂಚಕರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿ ಹಣ ಕೇಳುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ನೇಮಕಾತಿಗಳು ಕೇವಲ ಸರ್ಕಾರದ ಅಧಿಕೃತ ಪ್ರಕ್ರಿಯೆಯ ಮೂಲಕವೇ ನಡೆಯುತ್ತವೆ. ಉದ್ಯೋಗ ಕೊಡಿಸುವ ಹೆಸರಿನಲ್ಲಿ ಹಣ ಕೇಳುವವರು ಅಥವಾ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande