
ಬೆಂಗಳೂರು, 07 ಜುಲೈ (ಹಿ.ಸ.):
ಆ್ಯಂಕರ್:
ತೂಗುಸೇತುವೆಗಳ ಸರದಾರ’ ಹಾಗೂ ‘ಸುಳ್ಯದ ವಿಶ್ವೇಶ್ವರಯ್ಯ’ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಎಂಜಿನಿಯರ್ ಡಾ. ಗಿರೀಶ್ ಭಾರದ್ವಾಜ್ ಅವರು ಮಂಗಳವಾರ ಮುಂಜಾನೆ ಹೃದಯ ಸಂಬಂಧಿ ಕಾಯಿಲೆಯಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಗ್ರಾಮೀಣ ಭಾರತದ ಅಭಿವೃದ್ಧಿಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಡಾ. ಭಾರದ್ವಾಜ್ ಅವರು ದೇಶದಾದ್ಯಂತ 140ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿ ಲಕ್ಷಾಂತರ ಜನರಿಗೆ ಸಂಪರ್ಕ ಸೌಲಭ್ಯ ಕಲ್ಪಿಸಿದ್ದರು. ಕಡಿಮೆ ವೆಚ್ಚ ಹಾಗೂ ಕಡಿಮೆ ಅವಧಿಯಲ್ಲಿ ಸುರಕ್ಷಿತ ತೂಗುಸೇತುವೆಗಳನ್ನು ನಿರ್ಮಿಸುವ ತಂತ್ರಜ್ಞಾನದಿಂದ ರಾಷ್ಟ್ರ ಮಟ್ಟದಲ್ಲಿ ಅಪಾರ ಮೆಚ್ಚುಗೆ ಪಡೆದಿದ್ದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದ ಅವರು ಕೈಗಾರಿಕಾ ಕ್ಷೇತ್ರವನ್ನು ತೊರೆದು ಗ್ರಾಮೀಣ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ‘ಆಯಶಿಲ್ಪ ಇಂಜಿನಿಯರಿಂಗ್ ವರ್ಕ್ಸ್’ ಸಂಸ್ಥೆ ಸ್ಥಾಪಿಸಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ನೂರಾರು ತೂಗುಸೇತುವೆಗಳನ್ನು ನಿರ್ಮಿಸಿದರು. ಉತ್ತರ ಕನ್ನಡದ ಅಂಕೋಲಾ, ಮಂಗಳೂರು ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅವರು ನಿರ್ಮಿಸಿದ ಸೇತುವೆಗಳು ಸಾವಿರಾರು ಕುಟುಂಬಗಳ ಬದುಕನ್ನು ಸುಲಭಗೊಳಿಸಿವೆ.
ಸುಳ್ಯದ ಮಂಡೆಕೋಲಿನಲ್ಲಿ ನಿರ್ಮಿಸಿದ 100ನೇ ತೂಗುಸೇತುವೆ ವಿಶೇಷ ಗುರುತಿಸಿಕೊಂಡಿತ್ತು. ಗ್ರಾಮಸ್ಥರು ಅವರನ್ನು ಪ್ರೀತಿಯಿಂದ ‘ಸುಳ್ಯದ ವಿಶ್ವೇಶ್ವರಯ್ಯ’ ಹಾಗೂ ‘ತೂಗುಸೇತುವೆಗಳ ಸರದಾರ’ ಎಂದು ಕರೆಯುತ್ತಿದ್ದರು.
ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದು, ರಾಜ್ಯವು ಅಪರೂಪದ ತಾಂತ್ರಿಕ ಸಾಧಕನನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಜನಜೀವನ ಸುಗಮಗೊಳಿಸಿದ ಅವರ ಸೇವೆ ಸದಾ ಸ್ಮರಣೀಯವಾಗಿರಲಿದೆ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.