
ಪ್ರತಾಪಗಢ, 07 ಜುಲೈ (ಹಿ.ಸ.):
ಆ್ಯಂಕರ್:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿನ ದೇಣಿಗೆ ದುರ್ಬಳಕೆ ಆರೋಪದ ವಿಚಾರವಾಗಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
384 ಕೋಟಿ ರೂಪಾಯಿ ವೆಚ್ಚದ 111 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಯೋಧ್ಯೆ ಪ್ರಕರಣದ ಬಗ್ಗೆ ಪ್ರತಿಪಕ್ಷಗಳು ಹಿಂದೂ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದರು. ಈ ಪ್ರಕರಣದ ಕುರಿತು ಎಸ್ಐಟಿ ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಕ್ಫ್ ಭೂಮಿಗೆ ಸಂಬಂಧಿಸಿದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅಕ್ರಮಗಳ ಬಗ್ಗೆ ಪ್ರತಿಪಕ್ಷಗಳು ಎಂದಿಗೂ ಧ್ವನಿ ಎತ್ತಿಲ್ಲ. ಆದರೆ ಒಂದೇ ಘಟನೆಯನ್ನು ಹಿಡಿದು ಹಿಂದೂಗಳ ನಂಬಿಕೆಯನ್ನು ಅವಮಾನಿಸುವ ರಾಜಕೀಯ ಮಾಡುತ್ತಿವೆ ಎಂದು ಟೀಕಿಸಿದರು.
ಅಯೋಧ್ಯೆಯ ಅಭಿವೃದ್ಧಿ, ಶ್ರೀರಾಮ ಮಂದಿರ ನಿರ್ಮಾಣ ಹಾಗೂ ಭಕ್ತರ ಹೆಚ್ಚುತ್ತಿರುವ ಆಗಮನವೇ ಪ್ರತಿಪಕ್ಷಗಳಿಗೆ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದ ಯೋಗಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹಿಂದಿನಿಂದಲೂ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದವು ಎಂದು ಆರೋಪಿಸಿದರು. ಜೊತೆಗೆ ಯುವಕರಿಗೆ ಉದ್ಯೋಗ, ಅಭಿವೃದ್ಧಿ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.