


ಬಳ್ಳಾರಿ, 05 ಜುಲೈ (ಹಿ.ಸ.)
ಆ್ಯಂಕರ್ : ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಿಹಟ್ಟಿ ಗ್ರಾಮದ ಹೆಚ್.ಎಲ್.ಸಿ ಕಾಲುವೆ ದಂಡೆಯ ಮೇಲೆ ಮೂವರು ಯುವಕರು ನಕಲಿ ಡಬಲ್ ಬ್ಯಾರೆಲ್ ಬಂದೂಕು ಹಾಗೂ ಪಿಸ್ತೂಲ್ ಹಿಡಿದುಕೊಂಡು ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ರೀಲ್ಸ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿದ ಕಾರಣ ಮೂವರ ವಿರುದ್ಧ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಾಹಿಲ್, ವಿಕಾಸ್ ಮತ್ತು ಅಭಿಷೇಕ್ ಎನ್ನುವ ಯುವಕರು ನಕಲಿ ಬಂದೂಕನ್ನು ಹಿಡಿದುಕೊಂಡು ರೀಲ್ಸ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು. ಇದನ್ನು ಪತ್ತೆ ಮಾಡಿದ ಪೊಲೀಸರು ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಆಮ್ರ್ಸ್ ಆಕ್ಟ್ & 351(2), ಆಧಾರ 3(5) ಬಿ.ಎನ್.ಎಸ್-2023 ಪ್ರಕಾರ ಪ್ರಕರಣ ದಾಖಲಿಸಿ, ತನಿಖೆ ಪ್ರಾರಂಭಿಸಿದ್ದಾರೆ.
ಆರೋಪಿಗಳ ಕೈಗೆ ಡಬಲ್ ಬ್ಯಾರೆಲ್ ಬಂದೂಕು ಹಾಗೂ ಪಿಸ್ತೂಲ್ ಸಿಕ್ಕ ಬಗ್ಗೆ ತನಿಖೆ ನಡೆದಿದೆ ಎಂದು ಪೋಲಿಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್