
ನವದೆಹಲಿ, 04 ಜುಲೈ (ಹಿ.ಸ.):
ಆ್ಯಂಕರ್:ಅಯೋಧ್ಯೆಯ ರಾಮ ಜನ್ಮಭೂಮಿ ಮಂದಿರದಲ್ಲಿ ಕಾಣಿಕೆ ಹಣ ಕಳವು ನಡೆದಿರುವ ಪ್ರಕರಣದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಹಿಂಪ) ಅಂತಾರಾಷ್ಟ್ರೀಯ ಅಧ್ಯಕ್ಷ ಆಲೋಕ್ ಕುಮಾರ್ ಒತ್ತಾಯಿಸಿದ್ದಾರೆ.
ಹಿಂದೂಸ್ಥಾನ ಸಮಾಚಾರ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಘಟನೆ ದೇಶದ ಕೋಟ್ಯಂತರ ಹಿಂದೂ ಭಕ್ತರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದರು. ಆರಂಭದಿಂದಲೂ ವಿಹಿಂಪವು ನಿಷ್ಪಕ್ಷಪಾತ ತನಿಖೆ, ಎಫ್‌ಐಆರ್ ದಾಖಲಿಸುವುದು, ಅನುಭವಿ ಅಧಿಕಾರಿಗಳಿಂದ ತನಿಖೆ ನಡೆಸುವುದು ಹಾಗೂ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸುವಂತೆ ಒತ್ತಾಯಿಸುತ್ತಿದೆ ಎಂದರು.
ಪ್ರಕರಣದಲ್ಲಿ ಚಂಪತ್ ರಾಯ್, ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರನ್ನು ರಕ್ಷಿಸಲಾಗುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ವ್ಯಕ್ತಿಯನ್ನು ಕಾಪಾಡುವ ಉದ್ದೇಶ ವಿಹಿಂಪಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಯಾರ ವಿರುದ್ಧ ಆರೋಪಗಳಿವೆಯೋ, ಅವರ ವಿರುದ್ಧವೂ ಸಮಾನವಾಗಿ ತನಿಖೆ ನಡೆಯಬೇಕು. ತನಿಖೆಯಲ್ಲಿ ಅಪರಾಧ ಸಾಬೀತಾದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮಂದಿರದ ಆಡಳಿತ ವ್ಯವಸ್ಥೆ ಕುರಿತು ಮಾತನಾಡಿದ ಅವರು, ಇಂತಹ ಘಟನೆಗಳು ಮರುಕಳಿಸದಂತೆ ಬಲಿಷ್ಠ ಆಡಳಿತಾತ್ಮಕ ಹಾಗೂ ತಾಂತ್ರಿಕ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂದಿರದ ನಿರ್ವಹಣೆ ಮಾಡುತ್ತಿರುವುದರಿಂದ, ಆಧುನಿಕ ಭದ್ರತಾ ವ್ಯವಸ್ಥೆ, ಪಾರದರ್ಶಕ ಕಾರ್ಯವಿಧಾನ ಹಾಗೂ ಅನುಭವಿ ಆಡಳಿತಾಧಿಕಾರಿಗಳ ನೇಮಕದಂತಹ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು.
ಚಂಪತ್ ರಾಯ್ ಅವರ ಹೇಳಿಕೆಗಳು ಹಾಗೂ ಅವರ ವಿರುದ್ಧದ ಆರೋಪಗಳ ಬಗ್ಗೆ ಮಾಧ್ಯಮ ವರದಿಗಳ ಆಧಾರದ ಮೇಲೆ ತೀರ್ಮಾನಕ್ಕೆ ಬರಬಾರದು ಎಂದು ವಿಹಿಂಪ ಹೇಳಿದೆ. ತನಿಖೆ ಪೂರ್ಣಗೊಳ್ಳುವ ಮುನ್ನ ಯಾವುದೇ ಸಂಘಟನಾ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ. ಆದರೆ ತನಿಖೆಯಲ್ಲಿ ಯಾರಾದರೂ ತಪ್ಪಿತಸ್ಥರು ಅಥವಾ ನಿರ್ಲಕ್ಷ್ಯ ವಹಿಸಿರುವುದು ಸಾಬೀತಾದರೆ, ಅವರಿಗೆ ಯಾವುದೇ ವಿನಾಯಿತಿ ನೀಡಬಾರದು ಎಂದು ಆಲೋಕ್ ಕುಮಾರ್ ಪುನರುಚ್ಚರಿಸಿದರು.
ಟ್ರಸ್ಟ್ ಅನ್ನು ವಿಸರ್ಜಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಕೆಲವರ ವಿರುದ್ಧದ ಆರೋಪಗಳ ಆಧಾರದ ಮೇಲೆ ಸಂಪೂರ್ಣ ಟ್ರಸ್ಟ್ ಅನ್ನು ರದ್ದುಪಡಿಸುವುದು ಸಮಂಜಸವಲ್ಲ ಎಂದರು. ಟ್ರಸ್ಟ್‌ನ ಇತರ ಸದಸ್ಯರು ಗೌರವಾನ್ವಿತ ಸಂತರು ಹಾಗೂ ಸಮಾಜದಲ್ಲಿ ಉತ್ತಮ ಹೆಸರಿರುವ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು.
ಕೋಟ್ಯಂತರ ರಾಮಭಕ್ತರ ವಿಶ್ವಾಸ ಉಳಿಸಿಕೊಳ್ಳಲು ತನಿಖೆ ಸಂಪೂರ್ಣ ಪಾರದರ್ಶಕವಾಗಿ ನಡೆಯಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಚೂಕ ವ್ಯವಸ್ಥೆ ಜಾರಿಯಾಗಬೇಕು ಎಂದು ಆಲೋಕ್ ಕುಮಾರ್ ಒತ್ತಾಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.