
ನವದೆಹಲಿ, 04 ಜುಲೈ (ಹಿ.ಸ.):
ಆ್ಯಂಕರ್:
ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರದ 'ಶೂನ್ಯ ಸಹಿಷ್ಣುತೆ' ನೀತಿಯ ಭಾಗವಾಗಿ, ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)-1967 ಅಡಿಯಲ್ಲಿ ಮತ್ತಷ್ಟು 23 ಉಗ್ರರನ್ನು ಭಯೋತ್ಪಾದಕರೆಂದು ಅಧಿಕೃತವಾಗಿ ಘೋಷಿಸಿದೆ. ಈ ಕ್ರಮದೊಂದಿಗೆ ಯುಎಪಿಎ ನಾಲ್ಕನೇ ಅನುಸೂಚಿಯಲ್ಲಿ ಹೆಸರು ನೋಂದಾಯಿಸಲಾದ ಭಯೋತ್ಪಾದಕರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.
ಹೊಸದಾಗಿ ಘೋಷಿಸಲಾದ 23 ಉಗ್ರರಲ್ಲಿ 17 ಮಂದಿ ಪಾಕಿಸ್ತಾನ ಪ್ರಜೆಗಳು ಹಾಗೂ 6 ಮಂದಿ ಭಾರತೀಯ ಪ್ರಜೆಗಳು ಸೇರಿದ್ದಾರೆ. ಇವರೆಲ್ಲರೂ ಪ್ರಸ್ತುತ ಪಾಕಿಸ್ತಾನ ಅಥವಾ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಿಂದ ಭಾರತ ವಿರೋಧಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಭಯೋತ್ಪಾದನೆ ವಿರುದ್ಧದ 'ಶೂನ್ಯ ಸಹಿಷ್ಣುತೆ' ನೀತಿಯನ್ನು ಮುಂದುವರಿಸುತ್ತಾ, ನಿಷೇಧಿತ ಸಂಘಟನೆಗಳಿಗೆ ಸಂಬಂಧಿಸಿದ 23 ಕುಖ್ಯಾತ ಉಗ್ರರನ್ನು ಯುಎಪಿಎ ಅಡಿಯಲ್ಲಿ ಭಯೋತ್ಪಾದಕರೆಂದು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಉಗ್ರರು ಭಾರತ ವಿರೋಧಿ ಚಟುವಟಿಕೆಗಳು, ಉಗ್ರ ದಾಳಿಗಳು, ಶಸ್ತ್ರಾಸ್ತ್ರ ಕಳ್ಳಸಾಗಣೆ, ಗಡಿ ನುಸುಳುವಿಕೆ, ಉಗ್ರ ಸಂಘಟನೆಗಳಿಗೆ ನೆರವು, ಹಣ ಸಂಗ್ರಹಣೆ ಹಾಗೂ ಹೊಸ ಸದಸ್ಯರ ನೇಮಕಾತಿಯಲ್ಲಿ ತೊಡಗಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ. ಭಾರತ ಹಾಗೂ ಭಾರತೀಯರ ಭದ್ರತೆಗಾಗಿ ಪ್ರತಿಯೊಂದು ಉಗ್ರ ಜಾಲವನ್ನು ಸಂಪೂರ್ಣವಾಗಿ ನಾಶಪಡಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಗೃಹ ಸಚಿವಾಲಯದ ಪ್ರಕಾರ, ಘೋಷಿತ ಉಗ್ರರಲ್ಲಿ ಹೆಚ್ಚಿನವರು ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ, ಜಮಾತ್-ಉದ್-ದವಾ, ಫಲಾಹ್-ಎ-ಇನ್ಸಾನಿಯತ್ ಫೌಂಡೇಶನ್, ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್, ಅಲ್-ಖೈದಾ, ಐಸಿಸ್ ಹಾಗೂ ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಸೇರಿದಂತೆ ವಿವಿಧ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ.
ಈ ಉಗ್ರರನ್ನು ಅಧಿಕೃತ ಪಟ್ಟಿಗೆ ಸೇರಿಸುವುದರಿಂದ ಅವರ ಆರ್ಥಿಕ ಜಾಲ, ಸಂಚಾರ, ನೇಮಕಾತಿ ಸಾಮರ್ಥ್ಯ ಹಾಗೂ ಉಗ್ರ ಚಟುವಟಿಕೆಗಳಿಗೆ ತಡೆ ಹಾಕಲು ನೆರವಾಗುವುದರ ಜೊತೆಗೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ವಿರುದ್ಧದ ಕಾನೂನು ಕ್ರಮವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗಲಿದೆ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.