ಸಂಕಲ್ಪದಿಂದ ಸಿದ್ಧಿ ಸಾಧಿಸಿದರೆ ದೇವಮಾನವರಾಗುತ್ತಾರೆ: ಬಸವರಾಜ ಬೊಮ್ಮಾಯಿ
ಗದಗ, 04 ಜುಲೈ (ಹಿ.ಸ.) ಆ್ಯಂಕರ್:- ಸಂಕಲ್ಪದಿಂದ ಸಿದ್ಧಿ ಸಾಧಿಸಿದರೆ ದೇವಮಾನವರಾಗುತ್ತಾರೆ. ಅದೇ ರೀತಿ ನಮ್ಮ ಅಂತರಂಗವನ್ನು ನೋಡಿರುವಂತಹ ಪರಮಪೂಜ್ಯರು ಸಾಧನೆಯನ್ನು ಮಾಡಿ ದೇವಮಾನವರಾಗಿ ಹೊರಹೊಮ್ಮುತ್ತಾರೆ. ಅದಕ್ಕಾಗಿ ಇಷ್ಟು ಜನ ಎಲ್ಲರೂ ಕೂಡ ಬಂದು ಭಾಗವಹಿಸುತ್ತಾರೆ. ಎಲ್ಲಿ ದೊಡ್ಡ ಸಂಖ್ಯೆಯಲ್ಲಿ
ಫೋಟೋ


ಗದಗ, 04 ಜುಲೈ (ಹಿ.ಸ.)

ಆ್ಯಂಕರ್:- ಸಂಕಲ್ಪದಿಂದ ಸಿದ್ಧಿ ಸಾಧಿಸಿದರೆ ದೇವಮಾನವರಾಗುತ್ತಾರೆ. ಅದೇ ರೀತಿ ನಮ್ಮ ಅಂತರಂಗವನ್ನು ನೋಡಿರುವಂತಹ ಪರಮಪೂಜ್ಯರು ಸಾಧನೆಯನ್ನು ಮಾಡಿ ದೇವಮಾನವರಾಗಿ ಹೊರಹೊಮ್ಮುತ್ತಾರೆ. ಅದಕ್ಕಾಗಿ ಇಷ್ಟು ಜನ ಎಲ್ಲರೂ ಕೂಡ ಬಂದು ಭಾಗವಹಿಸುತ್ತಾರೆ. ಎಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಇದೆಯೋ, ಅಲ್ಲೇ ಭಗವಂತ ಇದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಇಂದು ಗದಗ ಜಿಲ್ಲೆಯ ಸುಕ್ಷೇತ್ರ ಅಂತೂರು - ಬೆಂತೂರು ಗ್ರಾಮದ ಜಗದ್ಗುರು ಬೂದೀಶ್ವರ ಸಂಸ್ಥಾನಮಠದಲ್ಲಿ ಶಿವಯೋಗ ರತ್ನ ಶ್ರೀ ಷ.ಬ್ರ ಡಾ. ರಾಚೋಟಿಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 60 ನೇಯ ಮೌನಾನುಷ್ಠಾನ, 16 ನೇಯ ಶಿವಯೋಗ ಸಮಾಧಿ ಮತ್ತು ಶಿವಯೋಗ ಸಿದ್ದಿಯಿಂದ 775 ವರ್ಷ ಬಾಳಿದ ಜಗದ್ಗುರು ಬೂದೀಶ್ವರರ ಮೂರ್ತಿ ಪ್ರತಿಷ್ಠಾಪನೆ ಹಾಗೂ 775 ಶಿವಲಿಂಗ ಪ್ರತಿಷ್ಠಾಪನೆ ಹಾಗೂ ಬಸವ ಮಹಾಪುರಣ, ಮಹಾಮಂಗಲೋತ್ಸವದ ಸಮಾರಂಭದಲ್ಲಿ ಭಾಗವಹಿಸಿ, ಗದ್ದುಗೆಯ ದರ್ಶನ ಪಡೆದುಕೊಂಡು ಮಾತನಾಡಿದರು.

ಮನುಷ್ಯನಿಗೆ ಅಸಾಧ್ಯ ಅನ್ನುವುದು ಏನೂ ಇಲ್ಲ. ಆದರೆ, ಯಾರಿಗೆ ಸಿದ್ಧಿ ಅನ್ನುವ ಸಂಕಲ್ಪ ಮಾಡುವ ಶಕ್ತಿ ಇರುತ್ತದೆ, ಅವರಿಗೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಕೂಡ ಭಗವಂತ ಶಕ್ತಿ ಕೊಟ್ಟಿದ್ದಾನೆ. ಆದರೆ, ಆ ಸಂಕಲ್ಪವನ್ನು ನಾವು ಮಾಡಬೇಕು. ನಮಗೆಲ್ಲ ಲೌಕಿಕವಾಗಿ ಸಾಧ್ಯ ಇಲ್ಲ. ನಾವು ಮೂರ್ಖತನದ ಜಂಜಾಟದಲ್ಲಿ ಸಿಲುಕಿಕೊಂಡಿದ್ದೇವೆ. ನಾನು ಇಲ್ಲಿ ಬಂದಿದ್ದೇನೆ, ದರ್ಶನ ಪಡೆದ ನಂತರ ಮುಂದಿನ ಕಾರ್ಯಕ್ರಮ ಏನೆಂದು ನಾನು ಚಿಂತಿಸುತ್ತೇನೆ. ನೀವು ಮನೆಯಿಂದ ಬಂದಿದ್ದೀರಿ, ಇಲ್ಲಿ ಬಂದು ಕುಳಿತಿದ್ದೀರಿ, ಈ ಕಾರ್ಯಕ್ರಮ ಯಾವಾಗ ಮುಗಿಯುತ್ತದೋ, ಮನೆಗೆ ಯಾವಾಗ ಹೋಗಬೇಕೋ, ನನ್ನ ಮಕ್ಕಳಿಗೆ ಏನು ಅಡುಗೆ ಮಾಡಬೇಕೋ, ಗಂಡ ಬಂದಿದ್ದಾರೋ ಇಲ್ಲವೋ. ಪ್ರತಿಯೊಬ್ಬರೂ ಒಂದಿಲ್ಲ ಒಂದು ಚಿಂತೆ, ಚಿಂತನೆಯಲ್ಲಿ ನಾವು ಬದುಕುತ್ತಿದ್ದೇವೆ, ಕ್ಷಣ ಕ್ಷಣಕ್ಕೂ ಬದುಕುತ್ತಿದ್ದೇವೆ. ಕ್ಷಣ ಮುಂದೆ ಓಡುತ್ತಿದೆ, ಸಮಯ ಬಹಳ ವೇಗವಾಗಿ ಓಡುತ್ತಿದೆ. ಆ ಸಮಯವನ್ನ ನಾವು ನಿಯಂತ್ರಣ ಮಾಡುವಂತಹ ಶಕ್ತಿ ನಮಗೆ ಬಂದಾಗ ಸಿದ್ಧಿ ಸಾಧ್ಯ. ಸಮಯವನ್ನು ಎಲ್ಲ ನಿಯಂತ್ರಣ ಮಾಡಬೇಕು.

ಸಮಯವನ್ನು ನಿಯಂತ್ರಣ ಮಾಡುವುದು ಸುಲಭವಲ್ಲ. ಸೂರ್ಯ ಹುಟ್ಟುತ್ತಾನೆ, ಚಂದ್ರ ಹುಟ್ಟುತ್ತಾನೆ, ಮತ್ತೆ ಸೂರ್ಯ ಹುಟ್ಟುತ್ತಾನೆ. ಅದೆಲ್ಲವನ್ನು ಮೀರಿ ನಮ್ಮ ಜಗತ್ತಿನಲ್ಲಿ ಸೂರ್ಯ ನಿರಂತರವಾಗಿ, ಚಂದ್ರ ನಿರಂತರವಾಗಿ ಇರುವಂತಹ ಒಂದು ಸಾಧನೆ ಯಾವುದು ಅಂತ ಅಂದರೆ ಆಧ್ಯಾತ್ಮಿಕವಾಗಿರುವಂತಹ ಒಂದು ತಪಸ್ಸು. ಮನಸ್ಸನ್ನು ಸ್ಥಿಮಿತದಲ್ಲಿ ಇಡಬೇಕು ಮತ್ತು ಮನಸ್ಸು ವ್ಯಾಕುಲ, ಮನಸ್ಸನ್ನು ಸ್ಥಿರ ಹಿಡಿದು ಮೊದಲನೇ ಬಾರಿಗೆ ಮನಸ್ಸು ಅರ್ಧ ಸೆಕೆಂಡ್ ಅಷ್ಟೇ ಇರತ್ತೆ. ಆಮೇಲೆ ಒಂದು ಸೆಕೆಂಡ್ ಆಗಿ ಒಂದು ನಿಮಿಷ. ಒಂದು ನಿಮಿಷ ಯಾರಾದರೂ ಮನಸ್ಸನ್ನು ಸ್ಥಿರ ಹಿಡಿದರೆ, ಅವನು ಬಹಳ ದೊಡ್ಡ ಸಾಧಕ. ಆ ಒಂದು ನಿಮಿಷ ಇದ್ದದ್ದು ಐದು ನಿಮಿಷ ಆದರೆ, ಅವನು ಬಹಳ ದೊಡ್ಡ ಸಾಧಕನೇ ಎಂದು ಹೇಳಿದರು.

ಮನಸ್ಸಿನ ನಿಯಂತ್ರಣ

ಈಗ ನಮ್ಮ ಗುರುಗಳು ಹೇಳಿದರು, ತಮಗೋಸ್ಕರ ಮಹಾಸ್ವಾಮಿಗಳು 775 ವರ್ಷ ಬದುಕಿದ್ದರು, ಪ್ರಾಣವನ್ನು ಮಸ್ತಕಕ್ಕೆ ಏರಿಸಿಕೊಂಡು ಸ್ಥಿರವಾಗಿಟ್ಟಿದ್ದರು. ಅಂದರೆ ಸಮಯವನ್ನು ಸ್ಥಿರವಾಗಿ ನಿಲ್ಲಿಸುವಂತದ್ದು. ಸಮಯ ಅಂದರೆ, ನಮ್ಮ ಮನಸ್ಸು. ನಮ್ಮ ಮನಸ್ಸೇ ನಮ್ಮ ಸಮಯ. ಉಸಿರಾಟ ಮಾಡುವಾಗ ನಾವು ಯಾರೂ ಕಷ್ಟ ಪಡುವುದಿಲ್ಲ. ಬೆಳಗ್ಗೆ ಎದ್ದು ಕೂಡಲೇ ಕಷ್ಟ ಪಟ್ಟು ಉಸಿರಾಟ ಮಾಡುವುದಿಲ್ಲ, ಸಹಜ ಪ್ರಕ್ರಿಯೆ. ಅಂದರೆ, ಸಮಯ ಸಹಜ ಪ್ರಕ್ರಿಯೆ. ಆದರೆ ಉಸಿರನ್ನು ನೀವು ಒಂದು ನಿಮಿಷ ಹಿಡಿದರೆ ಸಾಧನೆ, ಎರಡು ನಿಮಿಷ ಹಿಡಿದರೆ ಸಾಧನೆ, ಉಸಿರನ್ನು ಐದು ನಿಮಿಷ ಹಿಡಿದರೆ ನೀವು ಮರಣವನ್ನು ಗೆದ್ದ ಹಾಗೆ. ಇದೆಲ್ಲ ಒಂದು ಸಿದ್ಧಿಯಲ್ಲಿ ಬರುತ್ತದೆ. ಹೊರಗಡೆ ಎಷ್ಟು ದೊಡ್ಡ ಜಗತ್ತು ಇದೆಯೋ, ಒಳಗಡೆ ಅದಕ್ಕಿಂತ ನೂರು ಪಟ್ಟು ದೊಡ್ಡ ಜಗತ್ತು ಇದೆ, ನಮ್ಮ ಒಳಗಡೆ. ಈಗ ಪರಮಪೂಜ್ಯರು ಏನು ಸಿದ್ಧಿ ಮಾಡುತ್ತಿದ್ದಾರೆ, ಆ ಸಿದ್ಧಿ ಒಳಗಿನ ದೈವಿಕ ಜಗತ್ತನ್ನು ಅವರು ಗೆದ್ದು 33 ದಿನ 775 ಗಂಟೆ ನಿರಂತರವಾಗಿ ಆ ಸಿದ್ಧಿಯನ್ನು ಮಾಡಿಕೊಂಡು, ಆ ದೈವತ್ವವನ್ನು ಪಡೆದುಕೊಂಡು ಹೊರಗಡೆ ಬಂದಾಗ ಅವರು ಜಗತ್ತಿನ ಬೆಳಕಿಗಾಗಿ, ಜಗತ್ತಿನ ಒಳ್ಳೆಯದಕ್ಕಾಗಿ, ಜನರ ಒಳ್ಳೆಯದಕ್ಕಾಗಿ, ಕಲ್ಯಾಣಕ್ಕಾಗಿ ಅವರು ಮಾಡುವಂತಹ ಎಲ್ಲಾ ಕೆಲಸ ಕಾರ್ಯಗಳು ಇರುತ್ತವೆ. ಅದ್ಭುತವಾಗಿರುವಂತಹ ಶಕ್ತಿ ಎಂದು ಹೇಳಿದರು.

ನಾವೆಲ್ಲ ಮನುಷ್ಯರಾಗಿ ಹುಟ್ಟಿದ್ದೇವೆ. ಮನುಷ್ಯರಾಗಿ ಈ ಜಗತ್ತಿನಲ್ಲಿ ಬದುಕುತ್ತೇವೆ. ಆದರೆ ಕೆಲವೇ ಕೆಲವು ಜನ ಮನುಷ್ಯರಿಂದ ಮಾನವರಾಗುತ್ತಾರೆ. ಮನುಷ್ಯ ಮಾನವನಿಗೆ ಇರುವಂತಹ ವ್ಯತ್ಯಾಸ ಇಷ್ಟೇ. ಕಾಮ, ಕ್ರೋಧ, ಮದ, ಮತ್ಸರಗಳ ಸಂಕೋಲೆಯಲ್ಲಿ ಸಿಕ್ಕವನು ಮನುಷ್ಯ. ಕಾಮ, ಕ್ರೋಧ, ಮದ, ಮತ್ಸರಗಳ ಸಂಕೋಲೆಯಿಂದ ಹೊರಗಡೆ ಬಂದು, ನ್ಯಾಯ, ನೀತಿ, ಪ್ರೀತಿ, ಧರ್ಮ ಈ ಸಂಕೋಲೆಯಲ್ಲಿ ಸಿಕ್ಕವನು ಮಾನವ. ಇನ್ನು ಮಾನವೀಯತೆಯನ್ನು ನೀವು ಸಾಧನೆಯನ್ನು ಮಾಡಿದರೆ, ಸಿದ್ಧಿಯನ್ನು ಮಾಡಿದರೆ ದೇವಮಾನವ. ಹಂಗೆ ನಮ್ಮ ಅಂತರಂಗವನ್ನು ನೋಡಿರುವಂತಹ ಪರಮಪೂಜ್ಯರು ಸಾಧನೆಯನ್ನು ಮಾಡಿ ದೇವಮಾನವರಾಗಿ ಹೊರಹೊಮ್ಮುತ್ತಾರೆ. ಅದಕ್ಕಾಗಿ ಇಷ್ಟು ಜನ ಎಲ್ಲರೂ ಕೂಡ ಬಂದು ಭಾಗವಹಿಸುತ್ತಾರೆ. ಎಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಇದೆಯೋ, ಅಲ್ಲೇ ಭಗವಂತ ಇದ್ದಾನೆ. ಜನತೆ ಜನಾರ್ದನ ಅಂತ ಯಾರು ಅಂತ ಕೇಳಿದ್ದಾರೆ. ಎಲ್ಲಿ ದೈವ ಕೂಡುತ್ತದೋ ಅಲ್ಲಿ ದೇವರಿದ್ದಾನೆ. ಹೀಗಾಗಿ ಇದು ಅದ್ಭುತವಾಗಿರುವಂತಹ ಒಳಪಯಣ, ಒಳನೋಟ, ಒಳಸಾಧನೆ ಆದರೆ ಅದು ಎಲ್ಲವೂ ಕೂಡ ಹೊರಗಡೆ ಜಗತ್ತಿಗಾಗಿ. ತನಗಾಗಿ ಅಲ್ಲ. ಸ್ವಾಮಿ ವಿವೇಕಾನಂದರು ಈ ತರದ ಸಿದ್ಧಿಯನ್ನು ಮಾಡಿ ಅವರ ಗುರುಗಳ ಹತ್ತಿರ ಹೋಗಿ ನನ್ನ ಸಾಧನೆಯಾಗಿದೆ ನನಗೆ ಮುಕ್ತಿ ಬೇಕು ನಾನು ಇಲ್ಲಿಂದ ಮುಕ್ತಿಯಾಗಬೇಕು ಅಂದಿದ್ದರು. ಅದಕ್ಕೆ ಪರಮಹಂಸರು ಹೇಳಿದರು, ಮುಕ್ತಿ ನಿನ್ನ ಸಾಧನೆ ನಿನಗಾಗಿ ಅಲ್ಲಪ್ಪ, ಜಗತ್ತಿಗಾಗಿ ನಿನ್ನ ಬೆಳಕಿನಿಂದ ಜಗತ್ತು ಬೆಳಗಬೇಕು ಎಲ್ಲರು ಬೆಳಗಬೇಕು ಎಲ್ಲರೂ ಕೂಡ ಮುಕ್ತಿ ಮಾರ್ಗದಲ್ಲಿ ಹೋಗುವಂತಹ ಕೆಲಸ ಆಗಬೇಕು ಧರ್ಮ ಸ್ಥಾಪನೆ ಆಗಬೇಕು, ನ್ಯಾಯ ಸ್ಥಾಪನೆ ಆಗಬೇಕು, ಸತ್ಯ ಸ್ಥಾಪನೆ ಆಗಬೇಕು. ಅದರ ಪ್ರತಿಫಲ ನಮಗೆಲ್ಲರಿಗೂ ಸಿಗುತ್ತದೆ. ಆದರೆ ನಮ್ಮ ಭಕ್ತಿ, ಭಕ್ತಿ ಭಾವದಿಂದ ನಾವು ತಲೆಬಾಗಿ ನಮಸ್ಕಾರ ಮಾಡಿದಾಗ ಆ ಆಶೀರ್ವಾದ ನಮಗೆಲ್ಲರಿಗೂ ಕೂಡ ಸಿಗುತ್ತದೆ ಎಂದು ಹೇಳಿದರು.

ಸಾವಿನ ನಂತರ ಬದುಕುವವನು ಸಾಧಕ

ಈಗ 775 ವರ್ಷ ಇದ್ದಾರೆ ಅಂದರೆ ಅದರ ಅರ್ಥ ಏನು ಅಂದರೆ ಸ್ವಾಮಿ ವಿವೇಕಾನಂದರು ಬಹಳ ಚೆನ್ನಾಗಿ ಹೇಳಿದ್ದಾರೆ, ಸಾಧಕನಿಗೆ ಸಾವು ಅಂತ್ಯವಲ್ಲ. ನಮ್ಮೆಲ್ಲರ ಸಾವು ಅಂತ್ಯ ಅಂತ ನಾವು ಅಂದುಕೊಂಡಿದ್ದೇವೆ. ನಾವು ಸತ್ತರೆ ನಮ್ಮದು ಮುಗಿಯಿತು, ಆದರೆ ಸಾಧಕರಿಗೆ ಹಾಗಲ್ಲ. ಸಾವಿನ ನಂತರವೂ ಬದುಕುವವನು ಸಾಧಕ. ಸಾವಿನ ನಂತರ ಬದುಕುವಂತಹ ಕಲೆ ಅದೇ ಇವತ್ತು ನಮಗೆ ಅರ್ಥ ಆಗುತ್ತಿದೆ, ನಮ್ಮ ಕ್ಷೇತ್ರದಲ್ಲಿ ಅರ್ಥ ಆಗುತ್ತಿದೆ. ನಮ್ಮನ್ನೆಲ್ಲ ಕರೆಸಿ ನಮಗೂ ಕೂಡ ಪುನೀತರಾಗಿ ಮಾಡಿದ್ದೀರಿ. ಆ ಅನುಷ್ಠಾನ ಮಾಡುತ್ತಿರುವಂತಹ ನಮ್ಮ ಪರಮ ಪೂಜ್ಯರು, 63ನೇ ಅನುಷ್ಠಾನ ಮಾಡುತ್ತಿದ್ದಾರೆ, ಅಂದರೆ ಈ ಶಿವನ ಸನ್ನಿಧಿಯಲ್ಲಿ ಮಾಡುತ್ತಿದ್ದಾರೆ. ಹೀಗೆ 775 ಆಸನಗಳು, ಇವತ್ತು ಅವರ ಶಿವನ ಧ್ಯಾನದಲ್ಲಿ ಅನುಷ್ಠಾನ ಮಾಡುತ್ತಿರುವಂತದ್ದು ಒಂದು ಅದ್ಭುತವಾಗಿರುವಂತಹ ಸಾಧನೆ. ಯಾವುದು ನಮ್ಮ ವಿಚಾರದ ಕಲ್ಪನೆಗಳಿಗೆ ನಿಲುಕುವುದಿಲ್ಲವೋ ಅದೇ ಪವಾಡ ಆಗುತ್ತದೆ. ಆದರೆ ಅದು ಪವಾಡಕ್ಕಿಂತ ಸಾಧನೆ. ಆ ಸಾಧಿಸುವಂತಹ ಶಕ್ತಿ ಅವರಲ್ಲಿದೆ, ಅದರಿಂದ ನಾಳೆ ದರ್ಶನ ಕೊಡುವಾಗ ಈ ಜಗತ್ತು ಪುನೀತ ಆಗುತ್ತದೆ. ದರ್ಶನ ಪಡೆದುಕೊಂಡು ಎಲ್ಲರೂ ಕೃತಾರ್ಥರಾಗಬೇಕ ನನಗೂ ಇಲ್ಲಿಗೆ ಕರೆಸಿ ಪುಣ್ಯ ಕಾರ್ಯದಲ್ಲಿ ಒಂದು ಸಣ್ಣ ಭಾಗವನ್ನು ಕೊಡುವಂತಹ ಕೆಲಸವನ್ನು ಮಾಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande