ಭಾಗ್ಯಗಳ ಹೆಸರಲ್ಲಿ 225 ಕೋಟಿ ಲೂಟಿ: ನಿರ್ಮಲಾ ಕೊಳ್ಳಿ
ಗದಗ, 04 ಜುಲೈ (ಹಿ.ಸ.) ಆ್ಯಂಕರ್:- ಚುನಾವಣೆಗೂ ಮುನ್ನ ರಾಜ್ಯದ ಕೋಟ್ಯಂತರ ಸೋದರಿಯರಿಗೆ ಪ್ರತಿ ತಿಂಗಳು ₹2,000 ನೀಡುತ್ತೇವೆ ಹಾಗೂ ಮನೆ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ತರುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಇಂದು ಹಗರಣಗಳ ಮೂಲಕ ತಾಯಂದಿರ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಸಿ
ಫೋಟೋ


ಗದಗ, 04 ಜುಲೈ (ಹಿ.ಸ.)

ಆ್ಯಂಕರ್:- ಚುನಾವಣೆಗೂ ಮುನ್ನ ರಾಜ್ಯದ ಕೋಟ್ಯಂತರ ಸೋದರಿಯರಿಗೆ ಪ್ರತಿ ತಿಂಗಳು ₹2,000 ನೀಡುತ್ತೇವೆ ಹಾಗೂ ಮನೆ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ತರುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಇಂದು ಹಗರಣಗಳ ಮೂಲಕ ತಾಯಂದಿರ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಸಿಎಜಿ ವರದಿಯಲ್ಲಿ ಬಹಿರಂಗವಾಗಿರುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅದಕ್ಷತೆಯಿಂದಾಗಿ ಗೃಹಲಕ್ಷ್ಮಿ ಯೋಜನೆಯಲ್ಲಿ ಬರೋಬ್ಬರಿ ₹225 ಕೋಟಿಗಿಂತಲೂ ಅಧಿಕ ಮೊತ್ತದ ಬೃಹತ್ ಅಕ್ರಮ ನಡೆದಿದೆ ಎಂದು ಗದಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ನಿರ್ಮಲಾ ಡ. ಕೊಳ್ಳಿ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸ್ವಾವಲಂಬನೆಯಿಂದ ಬದುಕಲು ಇಚ್ಛಿಸುವ ರಾಜ್ಯದ ಮಹಿಳೆಯರಿಗೆ ಇಂತಹ ಮೋಸದ ಉಚಿತ ಭಾಗ್ಯಗಳ ಭಿಕ್ಷೆ ಬೇಡ; ಬದಲಿಗೆ ಅವರಿಗೆ ಉದ್ಯೋಗಾವಕಾಶ ಹಾಗೂ ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕ್ ಸಾಲದ ಸೌಲಭ್ಯಗಳನ್ನು ನೀಡಿದ್ದರೆ ಗೌರವಯುತವಾಗಿ ಬದುಕುತ್ತಿದ್ದರು ಎಂದು ಅವರು ಪ್ರತಿಪಾದಿಸಿದ್ದಾರೆ.

ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಹಾಗೂ ಅದಕ್ಷ ಸಚಿವಾಲಯವನ್ನು ಇಂದು ನಾವು ನೋಡುತ್ತಿದ್ದೇವೆ ಎಂದು ದೂರಿದ ಅವರು, ಪತ್ರಿಕಾ ವರದಿಯ ಅಧಿಕೃತ ಅಂಕಿ-ಅಂಶಗಳನ್ನು ಉಲ್ಲೇಖಿಸಿ ತೀವ್ರ ಆತಂಕ ವ್ಯಕ್ತಪಡಿಸಿದರು. ಯೋಜನೆಯ ವ್ಯಾಪ್ತಿಯಲ್ಲಿ ಮೃತಪಟ್ಟಿರುವ ಸುಮಾರು 1.08 ಲಕ್ಷ ಫಲಾನುಭವಿಗಳ ಹೆಸರಿನಲ್ಲಿ ಬರೋಬ್ಬರಿ ₹116 ಕೋಟಿ ಹಣವನ್ನು ಅಕ್ರಮವಾಗಿ ಲೂಟಿ ಮಾಡಲಾಗಿದೆ. ಅಷ್ಟೇ ಅಲ್ಲದೆ, ಯಾವುದೇ ಬ್ಯಾಂಕ್ ಖಾತೆ ವಿವರಗಳೇ ಇಲ್ಲದ 23,262 ಜನರಿಗೆ ಡಿಬಿಟಿ ಮೂಲಕ ₹46.65 ಕೋಟಿ ಹಣವನ್ನು ನಿಯಮಬಾಹಿರವಾಗಿ ವರ್ಗಾಯಿಸಲಾಗಿದೆ. ಇನ್ನು 19,020 ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ ₹60.70 ಕೋಟಿ ಹಣವನ್ನು ಪುನರಾವರ್ತಿತವಾಗಿ ಜಮೆ ಮಾಡಿ ಗೋಲ್ ಮಾಲ್ ಮಾಡಲಾಗಿದೆ. ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ಈ ಬೇಜವಾಬ್ದಾರಿತನದಿಂದಾಗಿ ಕೇವಲ ಪರಿಶೀಲನೆಯ ನೆಪವೊಡ್ಡಿ ಇತ್ತೀಚೆಗೆ ರಾಜ್ಯಾದ್ಯಂತ 6 ಲಕ್ಷಕ್ಕೂ ಹೆಚ್ಚು ನಿಜವಾದ ಬಡ ಮಹಿಳೆಯರನ್ನು ಯೋಜನೆಯಿಂದ ಹಠಾತ್ ಕೈಬಿಡಲಾಗಿದೆ. ಇತ್ತ ಗೃಹಜ್ಯೋತಿಯಲ್ಲೂ ಸಹ 1.74 ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದರೂ, ಈಗ ಏಕಾಏಕಿ ಮನೆ-ಮನೆ ಸಮೀಕ್ಷೆ ಹಾಗೂ ಕಠಿಣ ಷರತ್ತುಗಳನ್ನು ಹೇರಿ ಜನರನ್ನು ಮತ್ತಷ್ಟು ಕತ್ತಲೆಗೆ ದೂಡಲು ಸರ್ಕಾರ ಮುಂದಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ತನ್ನ ಆಡಳಿತಾತ್ಮಕ ವೈಫಲ್ಯ ಹಾಗೂ ಭ್ರಷ್ಟಾಚಾರವನ್ನು ಒಪ್ಪಿಕೊಂಡು, ತಕ್ಷಣವೇ ನಿಲ್ಲಿಸಲಾಗಿರುವ ಗೃಹಲಕ್ಷ್ಮಿ ಯೋಜನೆಯಗಳನ್ನು ಅರ್ಹ ಫಲಾನುಭವಿಗಳನ್ನು ಮರುಸೇರ್ಪಡೆಗೊಳಿಸಬೇಕು, ಬಾಕಿ ಹಣವನ್ನು ತಕ್ಷಣವೇ ಜಮೆ ಮಾಡಬೇಕು ಮತ್ತು ಗೃಹಜ್ಯೋತಿಯ ಜಟಿಲ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇನ್ನು ಮುಂದಾದರೂ ಸರ್ಕಾರ ಮಹಿಳೆಯರನ್ನು ಸಾಲಗಾರರನ್ನಾಗಿ ಮಾಡುವ ಉಚಿತ ಯೋಜನೆಗಳ ಬದಲಿಗೆ, ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ, ಕಡಿಮೆ ಬಡ್ಡಿಯ ಸಾಲ ಮತ್ತು ಹಳ್ಳಿ ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಸುವ ಕಡೆಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಗೃಹಿಣಿಯರ ಆತ್ಮಗೌರವದ ಜೊತೆ ಆಟವಾಡುತ್ತಾ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುತ್ತಿರುವ ಇಲಾಖೆಯ ಧೋರಣೆಯನ್ನು ಖಂಡಿಸಿ ಹಾಗೂ ಮಹಿಳೆಯರ ನಿಜವಾದ ಹಕ್ಕುಗಳ ರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ಗದಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶ್ರೀಮತಿ ನಿರ್ಮಲಾ ಡ. ಕೊಳ್ಳಿ ಅವರು ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande