ಗಜೇಂದ್ರಗಡ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ: ಕಂದಕೂರು
ಗದಗ, 04 ಜುಲೈ (ಹಿ.ಸ.) ಆ್ಯಂಕರ್:- ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದಿಂದ ಮಾತ್ರ ಸರ್ಕಾರದ ಸ್ವಚ್ಛತಾ ಅಭಿಯಾನಗಳು ಯಶಸ್ವಿಯಾಗಲು ಸಾಧ್ಯ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು ಹೇಳಿದರು. ಗದಗ ಜಿಲ್ಲೆ ಗಜೇಂದ
ಫೋಟೋ


ಗದಗ, 04 ಜುಲೈ (ಹಿ.ಸ.)

ಆ್ಯಂಕರ್:- ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದಿಂದ ಮಾತ್ರ ಸರ್ಕಾರದ ಸ್ವಚ್ಛತಾ ಅಭಿಯಾನಗಳು ಯಶಸ್ವಿಯಾಗಲು ಸಾಧ್ಯ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು ಹೇಳಿದರು.

ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ತಾಲೂಕು ಪಂಚಾಯತ್, ತಾಲೂಕು ಗ್ಯಾರಂಟಿ ಸಮಿತಿ, ಪುರಸಭೆ, ಕೆಎಸ್ಆರ್ಟಿಸಿ ಇಲಾಖೆ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಟಿಜಿಟಿ ಮಳೆ ಹಾಗೂ ಮೋಡ ಕವಿದ ವಾತಾವರಣದ ನಡುವೆಯೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಕೈಗವಸು, ಮಾಸ್ಕ್, ಪೊರಕೆ, ಪುಟ್ಟಿ ಹಿಡಿದು ಬಸ್ ನಿಲ್ದಾಣದ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಬೆಳಗ್ಗೆ 6.30ರಿಂದ 9 ಗಂಟೆಯವರೆಗೆ ನಡೆದ ಶ್ರಮದಾನದಲ್ಲಿ ಬಸ್ ನಿಲ್ದಾಣದ ಮುಂಭಾಗ, ಒಳ ಆವರಣ, ಸುತ್ತಮುತ್ತಲಿನ ಪ್ರದೇಶ, ಇಂದಿರಾ ಕ್ಯಾಂಟಿನ್, ಸಾರ್ವಜನಿಕ ಶೌಚಾಲಯಗಳ ಪರಿಸರ ಸೇರಿದಂತೆ ಎಲ್ಲೆಡೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಚದುರಿದ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗಿದ್ದು, ಬಸ್ ನಿಲ್ದಾಣದ ಪರಿಸರವನ್ನು ಶುಚಿಗೊಳಿಸಿ ಪ್ರಯಾಣಿಕರು ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ನಂತರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ ಬಸ್ ನಿಲ್ದಾಣದ ಆವರಣದಲ್ಲಿ ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ಸ್ವಚ್ಛತೆ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರು. ಬಳಿಕ ಬಸ್ ನಿಲ್ದಾಣದ ಮುಂಭಾಗದ ಅಂಗಡಿ ಮಾಲೀಕರನ್ನು ಭೇಟಿ ಮಾಡಿದ ಅವರು, ಕಸವನ್ನು ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದೆ ಒಂದು ಸ್ಥಳದಲ್ಲಿ ಸಂಗ್ರಹಿಸಿ, ಪುರಸಭೆಯ ಕಸದ ವಾಹನ ಬಂದಾಗ ವಿಲೇವಾರಿ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶರಣಪ್ಪ ಬೆಟಗೇರಿ, ಸ್ವಚ್ಛತೆ ಎಂಬುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ರೋಗಗಳ ಹರಡುವಿಕೆಯನ್ನು ತಡೆಗಟ್ಟಬಹುದು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆ, ಅಂಗಡಿ, ಕಚೇರಿ ಹಾಗೂ ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಛವಾಗಿಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು ಮಾತನಾಡಿ, ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಮನೆಯ ಸುತ್ತಮುತ್ತಲಿನ ಪರಿಸರ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು. ಸರ್ಕಾರದ ಸ್ವಚ್ಛತಾ ಅಭಿಯಾನಗಳು ಜನರ ಸಹಭಾಗಿತ್ವದಿಂದ ಮಾತ್ರ ಯಶಸ್ವಿಯಾಗುತ್ತವೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ, ನಿಗದಿತ ಸ್ಥಳದಲ್ಲಿ ಸಂಗ್ರಹಿಸಿ ಪುರಸಭೆ ಅಥವಾ ಗ್ರಾಮ ಪಂಚಾಯಿತಿಯ ಕಸದ ವಾಹನಗಳಿಗೆ ನೀಡಬೇಕು. ಗ್ರಾಮ ಹಾಗೂ ಪಟ್ಟಣಗಳ ಸ್ವಚ್ಛತೆ ಕಾಪಾಡುವಲ್ಲಿ ಸ್ಥಳೀಯ ಸಂಸ್ಥೆಗಳು ನಿರಂತರವಾಗಿ ಶ್ರಮಿಸುತ್ತಿದ್ದು, ಸಾರ್ವಜನಿಕರು ಸಹ ಕೈಜೋಡಿಸಿದಾಗ ಮಾತ್ರ ಸುಂದರ ಮತ್ತು ಆರೋಗ್ಯಯುತ ಪರಿಸರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.

ಗ್ರಾಮ ಮತ್ತು ನಗರಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಹಾತ್ಮ ಗಾಂಧೀಜಿ ಕಂಡ ಕನಸಾಗಿದ್ದು, ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಮಾತ್ರ ಆ ಕನಸನ್ನು ನನಸಾಗಿಸಲು ಸಾಧ್ಯ. ಸ್ವಚ್ಛ ಪರಿಸರದಿಂದ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಸರ್ವ ಸದಸ್ಯರು, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ್, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯೂಕೆಆರ್ಟಿಸಿ) ಘಟಕದ ವ್ಯವಸ್ಥಾಪಕ ಕೆ.ಎಸ್. ಜಿಗಳೂರು, ತಾಲೂಕು ಯೋಜನಾಧಿಕಾರಿ ಅರವಿಂದ ಬಂಡಿ, ವಿವಿಧ ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ, ಪೌರ ಕಾರ್ಮಿಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮದಾನದಲ್ಲಿ ಭಾಗವಹಿಸಿ ಸ್ವಚ್ಛತೆಯ ಮಹತ್ವವನ್ನು ಸಾರಿದರು.

ಕಾರ್ಯಕ್ರಮವು ಕೇವಲ ಸ್ವಚ್ಛತಾ ಕಾರ್ಯಕ್ಕೆ ಸೀಮಿತವಾಗದೆ, ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ, ಆರೋಗ್ಯ ಕಾಳಜಿ ಹಾಗೂ ಸ್ವಚ್ಛ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನೂ ಯಶಸ್ವಿಯಾಗಿ ಈಡೇರಿಸಿತು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande