ಪ್ರೇಮ ಪಕರಣ: ತುಮಕೂರಿನಲ್ಲಿ ಮಾಜಿ ರೌಡಿಶೀಟರ್ ಭೀಕರ ಹತ್ಯೆ
ತುಮಕೂರು, 29 ಜುಲೈ (ಹಿ.ಸ.): ಆ್ಯಂಕರ್: ತುಮಕೂರು ನಗರದ ಹೊರವಲಯದ ಬೆಳಗುಂಬ ರಸ್ತೆಯಲ್ಲಿ ನಡೆದಿದ್ದ ಮಾಜಿ ರೌಡಿಶೀಟರ್ ವೀರಣ್ಣ ಅಲಿಯಾಸ್ ಮಲ್ಲ (38) ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಮ್ ಮಾಲೀಕ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ತುಮಕೂರಿನ ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದ
tumakuru murder case


ತುಮಕೂರು, 29 ಜುಲೈ (ಹಿ.ಸ.):

ಆ್ಯಂಕರ್:

ತುಮಕೂರು ನಗರದ ಹೊರವಲಯದ ಬೆಳಗುಂಬ ರಸ್ತೆಯಲ್ಲಿ ನಡೆದಿದ್ದ ಮಾಜಿ ರೌಡಿಶೀಟರ್ ವೀರಣ್ಣ ಅಲಿಯಾಸ್ ಮಲ್ಲ (38) ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಮ್ ಮಾಲೀಕ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ತುಮಕೂರಿನ ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ. ಅಕ್ಕನ ಮಗಳ ಜತೆಗಿನ ಅನೈತಿಕ ಸಂಬಂಧದ ವಿಚಾರವೇ ಈ ಕೃತ್ಯಕ್ಕೆ ಪ್ರಮುಖ ಕಾರಣ ಎಂದು ತುಮಕೂರು ಎಸ್.ಪಿ. ಅಶೋಕ್ ಕೆ.ವಿ. ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಜುಲೈ 26ರ ರಾತ್ರಿ 8:30ರ ಸುಮಾರಿಗೆ ತುಮಕೂರು ತಾಲೂಕಿನ ಬೆಳಗುಂಬ ಬಳಿಯ ಗರುಢ ಕೆಫೆ ರಸ್ತೆಯಲ್ಲಿ ಮಾಜಿ ರೌಡಿಶೀಟರ್ ವೀರಣ್ಣ ಅಲಿಯಾಸ್ ಮಲ್ಲ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಮೃತ ವೀರಣ್ಣ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಹಿಂಬಾಲಿಸಿಸ ಬಂದ ದುಷ್ಕರ್ಮಿಗಳು, ಮೊದಲು ಬೈಕ್ಗೆ ಕಾರಿನಿಂದ ಗುದ್ದಿ ಕೆಡವಿ ನಂತರ ಮಚ್ಚಿನಿಂದ ಮನಬಂದಂತೆ ಹೊಡೆದು ಸ್ಥಳದಿಂದ ಪರಾರಿಯಾಗಿದ್ದರು.

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕ್ಯಾತಸಂದ್ರ ಪೊಲೀಸರು, ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡು, ಹತ್ಯೆಯ ರಹಸ್ಯವನ್ನು ಭೇದಿಸಲು ಎರಡು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದರು. ತನಿಖೆ ಮುಂದುವರಿಸಿದ ಪೊಲೀಸರು ಮೈಸೂರು ರೈಲ್ವೆ ನಿಲ್ದಾಣದ ಬಳಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರೇಮ ಪ್ರಕರಣವೇ ಹತ್ಯೆಗೆ ಅಸಲಿ ಕಾರಣ:

ಪೊಲೀಸ್ ತನಿಖೆಯಿಂದ ಸ್ಫೋಟಕ ಸತ್ಯಗಳು ಹೊರಬಂದಿದ್ದು, ತುಮಕೂರಿನಲ್ಲಿ ಎಸ್ಎಸ್ ಜಿಮ್ ನಡೆಸುತ್ತಿದ್ದ ಮಾಲೀಕ ಹಾಗೂ ಟ್ರೈನರ್ ಚೇತನ್ (26) ಎಂಬಾತನೇ ಈ ಕೊಲೆಗೆ ಮಾಸ್ಟರ್ ಮೈಂಡ್ ಎಂಬುದು ಗೊತ್ತಾಗಿದೆ.

ಆರೋಪಿ ಚೇತನ್ಗೆ ಈಗಾಗಲೇ ಮದುವೆಯಾಗಿ ಹೆಂಡತಿ-ಮಕ್ಕಳಿದ್ದಾರೆ. ಈ ನಡುವೆ ವೀರಣ್ಣನ ಅಕ್ಕನ ಮಗಳಾದ ಸುಚಿತ್ರಾ ಎಂಬಾಕೆಯೊಂದಿಗೆ ಚೇತನ್ ಅಕ್ರಮ ಸಂಬಂಧ ಹೊಂದಿದ್ದನು. ಸುಚಿತ್ರಾ ತನ್ನ ಗಂಡನನ್ನು ಬಿಟ್ಟು ಪ್ರತ್ಯೇಕವಾಗಿದ್ದಳು. ಈ ವಿಚಾರ ತಿಳಿದು ಕೋಪಗೊಂಡಿದ್ದ ಮಾಜಿ ರೌಡಿಶೀಟರ್ ವೀರಣ್ಣ, ನಮ್ಮ ಅಕ್ಕನ ಮಗಳ ಸಹವಾಸಕ್ಕೆ ಹೋಗಬೇಡ ಎಂದು ಜಿಮ್ ಮಾಲೀಕ ಚೇತನ್ಗೆ ಕೆಲವು ತಿಂಗಳ ಹಿಂದೆ ಎಚ್ಚರಿಕೆ ನೀಡಿದ್ದನು. ಈ ವೈಷಮ್ಯದಿಂದ ಚೇತನ್, ವೀರಣ್ಣನನ್ನು ಮುಗಿಸಲು ಪ್ಲ್ಯಾನ್ ರೂಪಿಸಿದ್ದನು.

ಮೈಸೂರಿಂದ ಯುವಕರನ್ನು ಕರೆಸಿ ಕೃತ್ಯ.!

ಕೊಲೆಗಾಗಿ ಚೇತನ್ ತನ್ನ ಸ್ನೇಹಿತರ ಜೊತೆ ಸೇರಿ ಸಂಚು ಹೂಡಿದ್ದು, ಮೈಸೂರಿನಿಂದ ಇಬ್ಬರು ಯುವಕರನ್ನು ಕರೆಸಿಕೊಂಡಿದ್ದನು. ಜುಲೈ 26ರಂದು ರಾತ್ರಿ ವೀರಣ್ಣನ ಚಲನವಲನಗಳನ್ನು ಗಮನಿಸಿ, ಕಾರಿನಲ್ಲಿ ಬಂದ ಚೇತನ್ ಹಾಗೂ ಆತನ ಮೂವರು ಸಹಚರರು ಈ ಕೃತ್ಯ ಎಸಗಿ ಪರಾರಿಯಾಗಿದ್ದರು.

ಬಂಧಿತ ಆರೋಪಿಗಳನ್ನು ಚೇತನ್ (26), ಸಂದೀಪ್ (32), ಕುಮಾರ್ (22) ಹಾಗೂ ಶಿವಕುಮಾರ್ (22) ಎಂದು ಗುರುತಿಸಲಾಗಿದೆ. ಕೊಲೆಯಾದ ವೀರಣ್ಣ ಅಲಿಯಾಸ್ ಮಲ್ಲ ಈ ಹಿಂದೆ 2008ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ಆತನ ಮೇಲೆ ರೌಡಿಶೀಟರ್ ತೆರೆಯಲಾಗಿತ್ತು. ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾದ ಬಳಿಕ ಸನ್ನಡತೆ ಆಧಾರದ ಮೇಲೆ ಆತನನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗಿತ್ತು. ಸದ್ಯ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲು ಮುಂದಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande