ರಾಜ್ಯದಲ್ಲಿ ಭರ್ಜರಿ ಯಶಸ್ಸಿನ ಬಳಿಕ ವಿದೇಶಕ್ಕೂ ಕರಾವಳಿ ಚಿತ್ರದ ಪಯಣ
ಬೆಂಗಳೂರು, 29 ಜುಲೈ (ಹಿ.ಸ.): ಆ್ಯಂಕರ್: ಈ ವರ್ಷದ ಸ್ಯಾಂಡಲ್‌ವುಡ್‌ನ ಸೂಪರ್‌ಹಿಟ್ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿರುವ ''ಕರಾವಳಿ'' ಸಿನಿಮಾ ಇದೀಗ ಗಲ್ಫ್‌ ರಾಷ್ಟ್ರಗಳಲ್ಲೂ ತನ್ನ ಅಬ್ಬರ ಆರಂಭಿಸಲು ಸಜ್ಜಾಗಿದೆ. ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಅಭಿ
ಕರಾವಳಿ ಚಿತ್ರದ ಪೋಸ್ಟರ್


ಬೆಂಗಳೂರು, 29 ಜುಲೈ (ಹಿ.ಸ.):

ಆ್ಯಂಕರ್:

ಈ ವರ್ಷದ ಸ್ಯಾಂಡಲ್‌ವುಡ್‌ನ ಸೂಪರ್‌ಹಿಟ್ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿರುವ 'ಕರಾವಳಿ' ಸಿನಿಮಾ ಇದೀಗ ಗಲ್ಫ್‌ ರಾಷ್ಟ್ರಗಳಲ್ಲೂ ತನ್ನ ಅಬ್ಬರ ಆರಂಭಿಸಲು ಸಜ್ಜಾಗಿದೆ. ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ ಈ ಚಿತ್ರವು ರಾಜ್ಯದಲ್ಲಿ ಭರ್ಜರಿ ಯಶಸ್ಸು ಗಳಿಸಿದ ಬೆನ್ನಲ್ಲೇ ಈ ಶುಕ್ರವಾರದಿಂದ ದುಬೈ ಹಾಗೂ ಅಬುಧಾಬಿಯಲ್ಲಿ ಬಿಡುಗಡೆಯಾಗುತ್ತಿದೆ.

ಕರಾವಳಿ ಭಾಗದ ಸಾಂಸ್ಕೃತಿಕ ವೈಭವ, ವಿಶೇಷವಾಗಿ ಕಂಬಳದ ಅದ್ಭುತ ಲೋಕವನ್ನು ಮನೋಜ್ಞವಾಗಿ ತೆರೆಗೆ ತಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಬಿಡುಗಡೆಯಾದ ಮೊದಲ ವಾರದಲ್ಲೇ ರಾಜ್ಯದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿರುವ ಚಿತ್ರಕ್ಕೆ ಕುಟುಂಬ ಸಮೇತ ಪ್ರೇಕ್ಷಕರ ಬೆಂಬಲವೂ ದೊರೆತಿದೆ.

ಗಲ್ಫ್‌ ರಾಷ್ಟ್ರಗಳಲ್ಲಿ ಚಿತ್ರದ ವಿತರಣೆಯ ಹಕ್ಕುಗಳನ್ನು ಪ್ರಖ್ಯಾತ ಫಾರಾಸ್ ಸಿನಿಮಾಸ್ ಪಡೆದುಕೊಂಡಿದ್ದು, ಈಗಾಗಲೇ ದಕ್ಷಿಣ ಭಾರತದ ಹಲವು ಯಶಸ್ವಿ ಚಿತ್ರಗಳನ್ನು ವಿದೇಶಗಳಲ್ಲಿ ಬಿಡುಗಡೆ ಮಾಡಿರುವ ಸಂಸ್ಥೆ ಕರಾವಳಿಯನ್ನು ಕೂಡ ದುಬೈ ಹಾಗೂ ಅಬುಧಾಬಿಯ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದೆ.

ಜುಲೈ 24ರಂದು 175ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರದರ್ಶನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮೊದಲ ದಿನವೇ ₹1 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎಂಬ ಮಾಹಿತಿ ಚಿತ್ರರಂಗದಲ್ಲಿ ಹರಿದಾಡುತ್ತಿದ್ದು, ಇದುವರೆಗೆ ₹6 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಕನ್ನಡ ಚಿತ್ರರಂಗದ ಇತ್ತೀಚಿನ ಪರಿಸ್ಥಿತಿಯಲ್ಲಿ ಇದು ಗಮನಾರ್ಹ ಸಾಧನೆ ಎನ್ನಲಾಗುತ್ತಿದೆ.

ಬಿಡುಗಡೆಯಾದ ಆರನೇ ದಿನಕ್ಕೆ 5 ಲಕ್ಷಕ್ಕೂ ಅಧಿಕ ಮಂದಿ ಚಿತ್ರವನ್ನು ವೀಕ್ಷಿಸಿರುವುದು ಚಿತ್ರದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ದೊರೆತಿರುವ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಮಲಯಾಳಂ, ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಮುಂದಿನ ವಾರವೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಒಟ್ಟಾರೆ, ರಾಜ್ಯದಲ್ಲಿ ಯಶಸ್ಸಿನ ಅಲೆ ಎಬ್ಬಿಸಿರುವ 'ಕರಾವಳಿ' ಸಿನಿಮಾ ಇದೀಗ ಗಲ್ಫ್‌ ರಾಷ್ಟ್ರಗಳಲ್ಲೂ ಕನ್ನಡದ ಸಂಸ್ಕೃತಿ ಮತ್ತು ಕರಾವಳಿಯ ಸೊಗಡನ್ನು ಪರಿಚಯಿಸಲು ಸಜ್ಜಾಗಿದ್ದು, ವಿದೇಶದಲ್ಲಿರುವ ಕನ್ನಡಿಗರಲ್ಲೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande