
ನವದೆಹಲಿ, ಜುಲೈ 29(ಹಿ.ಸ.):
ಆ್ಯಂಕರ್:
ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ ಕಾನೂನನ್ನು ಇನ್ನಷ್ಟು ಕಠಿಣಗೊಳಿಸುವ 'ಸಾರ್ವಜನಿಕ ಪರೀಕ್ಷೆ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಬುಧವಾರ ಧ್ವನಿಮತದ ಮೂಲಕ ಅಂಗೀಕರಿಸಿತು. ಮಸೂದೆ ಅಂಗೀಕಾರದ ಬಳಿಕ ಸದನದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಈ ವಿಷಯದಲ್ಲಿ ರಚನಾತ್ಮಕ ಸಲಹೆಗಳು ದೊರೆಯುವ ನಿರೀಕ್ಷೆ ಇತ್ತು. ಆದರೆ ಕೆಲವರು ರಾಜಕೀಯ ಮಾಡುವ ಪ್ರಯತ್ನ ನಡೆಸಿದರು ಎಂದು ಟೀಕಿಸಿದರು. ಸುಮಾರು 40ರಿಂದ 45 ಮಂದಿ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು ಎಂದು ಅವರು ಹೇಳಿದರು.
ಜನವರಿ 2024ರಲ್ಲಿ ಜಾರಿಗೆ ಬಂದಿದ್ದ ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ ಕಾಯ್ದೆಯನ್ನು ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿಸಲು ಸರ್ಕಾರ ತಿದ್ದುಪಡಿ ತಂದಿದೆ ಎಂದು ಸಚಿವರು ತಿಳಿಸಿದರು. ಈ ಹಿಂದೆಯೇ ಅಪರಾಧವನ್ನು ಸಂಜ್ಞೇಯ, ಜಾಮೀನು ರಹಿತ ಹಾಗೂ ರಾಜಿ ಮಾಡಿಕೊಳ್ಳಲಾಗದ ಅಪರಾಧವೆಂದು ಘೋಷಿಸಲಾಗಿತ್ತು. ಈಗ ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದರು.
ತಿದ್ದುಪಡಿ ಪ್ರಕಾರ ಅಕ್ರಮದಲ್ಲಿ ಭಾಗಿಯಾಗುವವರಿಗೆ ಈಗ ಇದ್ದ 3ರಿಂದ 5 ವರ್ಷಗಳ ಶಿಕ್ಷೆಯನ್ನು 5ರಿಂದ 10 ವರ್ಷಗಳಿಗೆ ಹೆಚ್ಚಿಸಲಾಗಿದ್ದು, ದಂಡವನ್ನು ₹50 ಲಕ್ಷದವರೆಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಸೇವೆ ಒದಗಿಸುವ ಸಂಸ್ಥೆಗಳ ಮೇಲಿನ ಗರಿಷ್ಠ ದಂಡವನ್ನು ₹1 ಕೋಟಿಯಿಂದ ₹5 ಕೋಟಿಗೆ ಏರಿಸಲಾಗಿದ್ದು, ಅವರಿಗೆ 8 ವರ್ಷಗಳವರೆಗೆ ಪರೀಕ್ಷಾ ಕಾರ್ಯದಿಂದ ನಿರ್ಬಂಧ ಹೇರಬಹುದಾಗಿದೆ. ನಿರ್ದೇಶಕರು ಹಾಗೂ ಆಡಳಿತ ಮಂಡಳಿಯ ತಪ್ಪಿತಸ್ಥರಿಗೂ ಹೆಚ್ಚಿನ ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವಿದೆ.
ಸಂಘಟಿತ ಅಪರಾಧ ಪ್ರಕರಣಗಳಲ್ಲಿ ಕನಿಷ್ಠ ಶಿಕ್ಷೆಯನ್ನು 7 ವರ್ಷಗಳಿಗೆ ಹೆಚ್ಚಿಸಲಾಗಿದ್ದು, ₹10 ಕೋಟಿವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಕಾಯ್ದೆಯಡಿ 52 ಎಫ್‌ಐಆರ್‌ಗಳು ದಾಖಲಾಗಿದ್ದು, ಅವುಗಳಲ್ಲಿ 29 ಪ್ರಕರಣಗಳು ಪರೀಕ್ಷಾ ಅಕ್ರಮಗಳಿಗೆ ಹಾಗೂ 23 ಪ್ರಕರಣಗಳು ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಧಿಗಳಡಿ ದಾಖಲಾಗಿವೆ ಎಂದು ಸಚಿವರು ಮಾಹಿತಿ ನೀಡಿದರು.
ಇತ್ತೀಚಿನ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮಾಹಿತಿ ಜುಲೈ 7 ಮತ್ತು 8ರ ರಾತ್ರಿ ಲಭ್ಯವಾಗಿದ್ದು, ಜುಲೈ 12ರಂದು ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ಮರುದಿನವೇ 13 ಮಂದಿಯನ್ನು ವಶಕ್ಕೆ ಪಡೆದು ಸುಮಾರು 92 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು. ಸಿಬಿಐ ಶೀಘ್ರವಾಗಿ ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಿದ್ದು, ಹೊಸ ಕಾನೂನಿನಡಿ ವಿಚಾರಣೆ ಆರಂಭವಾಗಿದೆ ಎಂದು ಅವರು ತಿಳಿಸಿದರು.
ಶಿಕ್ಷಣ ಕ್ಷೇತ್ರದ ಸಾಧನೆಗಳನ್ನು ಉಲ್ಲೇಖಿಸಿದ ಸಚಿವರು, ವಿಶ್ವವಿದ್ಯಾಲಯಗಳ ಸಂಖ್ಯೆ 760ರಿಂದ 1,293ಕ್ಕೆ, ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ 51,534ರಿಂದ 64,896ಕ್ಕೆ ಏರಿಕೆಯಾಗಿದೆ ಎಂದರು. ಏಕಲವ್ಯ ಮಾದರಿ ವಸತಿ ಶಾಲೆಗಳ ವಿಸ್ತರಣೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ–2020 ಜಾರಿಗೆ ತಂದಿರುವುದನ್ನೂ ಅವರು ಪ್ರಸ್ತಾಪಿಸಿದರು.
ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿಯೂ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ಏಮ್ಸ್ ಆಸ್ಪತ್ರೆಗಳ ಸಂಖ್ಯೆ 7ರಿಂದ 22ಕ್ಕೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳು 387ರಿಂದ 844ಕ್ಕೆ ಹೆಚ್ಚಿವೆ. ಎಂಬಿಬಿಎಸ್ ಆಸನಗಳು ಸುಮಾರು 51,300ರಿಂದ 1.39 ಲಕ್ಷಕ್ಕೆ ಏರಿಕೆಯಾಗಿದ್ದು, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದಲ್ಲೂ ಆಸನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ಸರ್ಕಾರ ಗರಿಷ್ಠ ಸಂಯಮ ವಹಿಸಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಮಾತ್ರ ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ಗುಂಡಿನ ದಾಳಿ ನಡೆಸಲಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಗುಂಡು ಹಾರಿಸುವ ಆದೇಶವನ್ನು ಯಾವುದೇ ಸಚಿವರು ನೀಡುವುದಿಲ್ಲ. ಅಂತಹ ಅಧಿಕಾರ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳಿಗೆ ಮಾತ್ರ ಇದೆ. ಜನಸಮೂಹ ನಿಯಂತ್ರಣಕ್ಕಾಗಿ ಕೇವಲ ಅಶ್ರುವಾಯುವನ್ನು ಬಳಸಲಾಗಿತ್ತು ಎಂದು ಹೇಳಿದರು.
ಚರ್ಚೆಯ ವೇಳೆ ಯಾವುದೇ ಆಧಾರವಿಲ್ಲದೆ 150 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಹಾಗೂ 7.50 ಕೋಟಿ ವಿದ್ಯಾರ್ಥಿಗಳು ಪರಿಣಾಮಕ್ಕೊಳಗಾಗಿದ್ದಾರೆ ಎಂಬ ಅಂಕಿಅಂಶಗಳನ್ನು ಉಲ್ಲೇಖಿಸಲಾಗಿದೆ ಎಂದು ಸಚಿವರು ಟೀಕಿಸಿದರು. ಸಂಸತ್ತಿನಲ್ಲಿ ವಾಸ್ತವಾಂಶ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆಯೇ ಚರ್ಚೆ ನಡೆಯಬೇಕು ಎಂದು ಅವರು ಹೇಳಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.