
ವಾಷಿಂಗ್ಟನ್/ಟೆಹ್ರಾನ್, ಜುಲೈ 28:(ಹಿ.ಸ.):
ಆ್ಯಂಕರ್:
ಹೋರ್ಮುಜ್ ಜಲಸಂಧಿಯನ್ನು ಕೇಂದ್ರವಾಗಿಸಿಕೊಂಡು ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಶಮನಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ತೀವ್ರಗೊಂಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಜೊತೆ ಸ್ನೇಹಪರ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದು, ಮಾತುಕತೆ ಶೀಘ್ರದಲ್ಲೇ ಫಲಿತಾಂಶಕ್ಕೆ ಬರಬೇಕೆಂದು ಆಶಿಸಿದ್ದಾರೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು, ಶಾಂತಿ ಸ್ಥಾಪನೆಗೆ ಇರಾನ್ ಸಿದ್ಧವಿದ್ದರೂ ಅದು ಅಮೆರಿಕದ ಏಕಪಕ್ಷೀಯ ಷರತ್ತುಗಳ ಮೇಲೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭವಿಷ್ಯದಲ್ಲಿ ಯಾವುದೇ ಸಂಘರ್ಷ ಎದುರಿಸಲು ಇರಾನ್ ಸಂಪೂರ್ಣ ಸನ್ನದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಇರಾನ್ ಸೇನಾ ಮುಖ್ಯಸ್ಥರೂ ಇದೇ ನಿಲುವು ವ್ಯಕ್ತಪಡಿಸಿದ್ದು, ರಾಜತಾಂತ್ರಿಕ ಮಾತುಕತೆಯ ಬಾಗಿಲು ಸಂಪೂರ್ಣ ಮುಚ್ಚಿಲ್ಲ, ಆದರೆ ಸಂಪೂರ್ಣ ತೆರೆದೂ ಇಲ್ಲ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ಹೋರ್ಮುಜ್ ಜಲಸಂಧಿಯ ಮೂಲಕ ಸಾಗಣೆ ಮತ್ತೆ ಸುಗಮವಾಗಬೇಕೆಂಬುದು ಅಮೆರಿಕದ ಪ್ರಮುಖ ಗುರಿಯಾಗಿದೆ. ಇರಾನ್ ಹಠ ಮುಂದುವರಿಸಿದರೆ ಕಠಿಣ ಸೇನಾ ಕ್ರಮ ಕೈಗೊಳ್ಳುವ ಆಯ್ಕೆಯೂ ಇದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಾಷಿಂಗ್ಟನ್‌ಗೆ ಭೇಟಿ ನೀಡಿದ್ದು, ಟ್ರಂಪ್ ಅವರನ್ನು ಭೇಟಿಯಾಗಿ ಇರಾನ್ ಸಂಬಂಧಿತ ಬೆಳವಣಿಗೆಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಇನ್ನೊಂದೆಡೆ, ಇರಾನ್ ಬೆಂಬಲಿತ ಗುಂಪುಗಳು ಇರಾಕ್‌ನಿಂದ ಸೌದಿ ಅರೇಬಿಯಾದ ತೈಲ ಸೌಲಭ್ಯಗಳ ಮೇಲೆ ನಡೆಸಿದ ಡ್ರೋನ್ ದಾಳಿಯನ್ನು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಕಡಿಮೆ ಮಾಡಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ರಾಜತಾಂತ್ರಿಕ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.