
ಗದಗ, 28 ಜುಲೈ (ಹಿ.ಸ.):
ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಡಾ. ಮಹಾಂತ ಶಿವಯೋಗಿಗಳ ಸಂದೇಶವೇ ದಾರಿದೀಪ:
ವ್ಯಸನಗಳು ವ್ಯಕ್ತಿಯ ಆರೋಗ್ಯವನ್ನು ಹಾಳು ಮಾಡುವುದರ ಜೊತೆಗೆ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ ಹಾಗೂ ಸಮಾಜದ ಅಭಿವೃದ್ಧಿಯ ಮೇಲೂ ಗಂಭೀರ ಪರಿಣಾಮ ಬೀರುತ್ತವೆ. ಮದ್ಯಪಾನ, ತಂಬಾಕು, ಗುಟ್ಕಾ, ಮಾದಕ ವಸ್ತುಗಳು ಸೇರಿದಂತೆ ವಿವಿಧ ರೀತಿಯ ದುಶ್ಚಟಗಳು ಇಂದು ವಿಶೇಷವಾಗಿ ಯುವಜನತೆಯ ಭವಿಷ್ಯಕ್ಕೆ ಮಾರಕವಾಗುತ್ತಿವೆ. ಹೀಗಾಗಿ ವ್ಯಸನಗಳ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಆರೋಗ್ಯಕರ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಆಗಸ್ಟ್ 1ರಂದು ರಾಜ್ಯಾದ್ಯಂತ ವ್ಯಸನಮುಕ್ತ ದಿನಾಚರಣೆಯನ್ನು ಆಚರಿಸುತ್ತಿದೆ.
ಆಗಸ್ಟ್ 1ರಂದು ಜನಿಸಿದ ಮಹಾನ್ ಸಂತ, ಸಮಾಜ ಸುಧಾರಕ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಡಾ. ಮಹಾಂತ ಶಿವಯೋಗಿಗಳ ಜನ್ಮದಿನವನ್ನು ವ್ಯಸನಮುಕ್ತ ದಿನಾಚರಣೆಯಾಗಿ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ತಮ್ಮ ಜೀವನದುದ್ದಕ್ಕೂ ಸಮಾಜದ ಒಳಿತಿಗಾಗಿ ಶ್ರಮಿಸಿದ ಅವರು, ಜನರಲ್ಲಿ ಉತ್ತಮ ನಡತೆ, ಶಿಸ್ತು, ಆತ್ಮಸಂಯಮ ಹಾಗೂ ಆರೋಗ್ಯಕರ ಜೀವನದ ಕುರಿತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1930ರ ಆಗಸ್ಟ್ 1ರಂದು ಜನಿಸಿದ ಡಾ. ಮಹಾಂತ ಶಿವಯೋಗಿಗಳು ತಮ್ಮ 10ನೇ ವಯಸ್ಸಿನಲ್ಲಿಯೇ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು. ಬಳಿಕ ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ ಹಾಗೂ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣಿತಿ ಪಡೆದ ಅವರು, ಸಮಾಜ ಸೇವೆಯನ್ನೇ ತಮ್ಮ ಜೀವನದ ಪ್ರಮುಖ ಧ್ಯೇಯವನ್ನಾಗಿ ಮಾಡಿಕೊಂಡರು.
ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ ಎದುರಾದ ಸಂದರ್ಭದಲ್ಲಿ ಕಾಶಿಯಿಂದ ಮರಳಿ ಬಂದ ಅವರು ನೂರಾರು ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಿ ಅನ್ನದಾಸೋಹ ನಡೆಸಿದರು. ಬರದಿಂದ ಸಂಕಷ್ಟಕ್ಕೊಳಗಾದ ಜನರಿಗೆ ನೆರವು ನೀಡುವುದರ ಜೊತೆಗೆ ಗೋಶಾಲೆಗಳನ್ನು ಆರಂಭಿಸಿ ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಿದರು. 1970ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 19ನೇ ಪೀಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, 2018ರವರೆಗೆ ಅಖಂಡ 48 ವರ್ಷಗಳ ಕಾಲ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಪಾರ ಸೇವೆ ಸಲ್ಲಿಸಿದರು.
ಡಾ. ಮಹಾಂತ ಶಿವಯೋಗಿಗಳ ಸಮಾಜ ಸೇವೆಯ ವ್ಯಾಪ್ತಿ ಅತ್ಯಂತ ವಿಶಾಲವಾಗಿತ್ತು. ನಿರಂತರ ಅನ್ನದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗಾಗಿ ಟ್ರಸ್ಟ್, ನಿರುದ್ಯೋಗಿಗಳು ಮತ್ತು ವಿಧವೆಯರಿಗಾಗಿ ಕಾಯಕ ಸಂಜೀವಿನಿ ಸಂಸ್ಥೆ, ನಿಸರ್ಗ ಚಿಕಿತ್ಸಾ ಹಾಗೂ ಯೋಗ ಕೇಂದ್ರಗಳ ಸ್ಥಾಪನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡರು. ಶಾಖಾ ಮಠಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ ಮಾಡಿದರು. ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಗಳನ್ನಾಗಿ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆಗೆ ಹೊಸ ದಿಕ್ಕು ತೋರಿದರು. ಮಠದ ನೂರಾರು ಎಕರೆ ಭೂಮಿಯನ್ನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿ ಬದುಕಲು ನೀಡುವ ಮೂಲಕ ಅನೇಕರಿಗೆ ಬದುಕಿನ ಭದ್ರತೆಯನ್ನು ಕಲ್ಪಿಸಿದರು.
ಆದರೆ ಡಾ. ಮಹಾಂತ ಶಿವಯೋಗಿಗಳ ಸಮಾಜ ಸುಧಾರಣಾ ಕಾರ್ಯಗಳಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣದ ಅಭಿಯಾನ ಅತ್ಯಂತ ಮಹತ್ವದ್ದಾಗಿದೆ. ಕೈಯಲ್ಲಿ ಬಟ್ಟೆಯ ಚೀಲದ ಜೋಳಿಗೆ ಹಿಡಿದು, ಕುಡಿತದ ಚಟದಿಂದ ಮೃತಪಟ್ಟ ಪರಿಶಿಷ್ಟ ಜಾತಿಯ ಯುವಕನ ಕೇರಿಗೆ ತೆರಳಿದ ಅವರು, ಅಲ್ಲಿನ ಗುಡಿಸಲು ಮನೆಗಳಿಗೆ ಭೇಟಿ ನೀಡಿ ಮದ್ಯಪಾನ, ತಂಬಾಕು ಹಾಗೂ ಇತರ ಎಲ್ಲ ರೀತಿಯ ದುಶ್ಚಟಗಳ ದುಷ್ಪರಿಣಾಮಗಳ ಕುರಿತು ಜನರಿಗೆ ಮನಮುಟ್ಟುವಂತೆ ತಿಳಿವಳಿಕೆ ನೀಡಿದರು.
ಸ್ವಾಮೀಜಿಗಳ ಮಾತಿನಿಂದ ಪ್ರೇರಿತರಾದ ಅನೇಕ ದುರ್ವ್ಯಸನಿಗಳು ತಮ್ಮಲ್ಲಿದ್ದ ಮದ್ಯ, ತಂಬಾಕು ಹಾಗೂ ಇತರ ದುಶ್ಚಟಗಳ ವಸ್ತುಗಳನ್ನು ಅವರ ಜೋಳಿಗೆಗೆ ಹಾಕಿ, ಇನ್ನು ಮುಂದೆ ಯಾವುದೇ ದುಶ್ಚಟಕ್ಕೆ ಬಲಿಯಾಗುವುದಿಲ್ಲ ಎಂದು ಪ್ರಮಾಣ ಮಾಡಿದರು. ಹೀಗೆ ಜನರಲ್ಲಿದ್ದ ದುಶ್ಚಟಗಳನ್ನೇ ಭಿಕ್ಷೆಯ ರೂಪದಲ್ಲಿ ಜೋಳಿಗೆಯಲ್ಲಿ ಸಂಗ್ರಹಿಸುವ ಮೂಲಕ ಅವರು ವಿಶಿಷ್ಟ ರೀತಿಯಲ್ಲಿ ವ್ಯಸನಮುಕ್ತಿಯ ಸಂದೇಶವನ್ನು ಸಾರಿದರು.
ಜಾತಿ, ಮತ, ಪಂಗಡ, ಧರ್ಮ, ಭಾಷೆ ಹಾಗೂ ದೇಶದ ಗಡಿಗಳನ್ನು ಮೀರಿ ಸುಮಾರು 42 ವರ್ಷಗಳ ಕಾಲ ಡಾ. ಮಹಾಂತ ಶಿವಯೋಗಿಗಳು ತಮ್ಮ 'ಮಹಾಂತ ಜೋಳಿಗೆ' ಅಭಿಯಾನವನ್ನು ಮುಂದುವರಿಸಿದರು. ದೇಶದ ವಿವಿಧ ಭಾಗಗಳಲ್ಲಿ ಮಾತ್ರವಲ್ಲದೆ ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲಿಯೂ ಸಂಚರಿಸಿ ಜನರಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಿದರು. ವ್ಯಸನಮುಕ್ತ ವ್ಯಕ್ತಿ, ಕುಟುಂಬ, ಗ್ರಾಮ ಹಾಗೂ ಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸಿದರು.
ತಮ್ಮ ಜೋಳಿಗೆ ಕಾರ್ಯಕ್ರಮದ ಮೂಲಕ ಜನರಲ್ಲಿ ಅರಿವು ಮೂಡಿಸುವ ಸಂದರ್ಭದಲ್ಲಿ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು, ಸಾಹಿತಿಗಳು, ಸಮಾಜ ಕಳಕಳಿಯ ಕವಿಗಳು ಹಾಗೂ ಧರ್ಮಗುರುಗಳನ್ನು ಆಹ್ವಾನಿಸಿ ಉಪನ್ಯಾಸಗಳನ್ನು ಆಯೋಜಿಸುತ್ತಿದ್ದರು. ವ್ಯಸನಕ್ಕೆ ಒಳಗಾದವರ ಮನಪರಿವರ್ತನೆಗೆ ಆದ್ಯತೆ ನೀಡಿದ ಅವರು, ಮಕ್ಕಳು, ವಿದ್ಯಾರ್ಥಿಗಳು ಹಾಗೂ ಯುವಜನತೆ ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದಂತೆ ನಿರಂತರವಾಗಿ ಎಚ್ಚರಿಕೆ ನೀಡಿದರು. ಅವರ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಜನರು ವ್ಯಸನಮುಕ್ತರಾಗಿ, ಅವರ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಯಿತು ಎಂಬುದು ಅವರ ಸಮಾಜ ಸೇವೆಯ ಮಹತ್ವವನ್ನು ತೋರಿಸುತ್ತದೆ.
ವ್ಯಸನ ವ್ಯಕ್ತಿಯಷ್ಟೇ ಅಲ್ಲ, ಕುಟುಂಬ ಮತ್ತು ಸಮಾಜದ ಸಮಸ್ಯೆ
ವ್ಯಸನವೆಂಬುದು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾದ ಸಮಸ್ಯೆಯಲ್ಲ. ಅದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ವ್ಯಸನಕ್ಕೆ ಒಳಗಾದ ವ್ಯಕ್ತಿಯ ಆರೋಗ್ಯ ಹದಗೆಡುವುದರ ಜೊತೆಗೆ ಕುಟುಂಬದ ಆದಾಯದ ಬಹುಪಾಲು ದುಶ್ಚಟಗಳಿಗೆ ವ್ಯಯವಾಗುತ್ತದೆ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ಕುಟುಂಬ ಸದಸ್ಯರಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತದೆ. ಕುಟುಂಬದಲ್ಲಿ ಕಲಹ, ಅಶಾಂತಿ ಹಾಗೂ ಸಾಮಾಜಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅನೇಕ ಕುಟುಂಬಗಳು ವ್ಯಸನದ ದುಷ್ಪರಿಣಾಮಗಳಿಂದ ನೆಮ್ಮದಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿವೆ.
ಹೀಗಾಗಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೇವಲ ಸರ್ಕಾರದ ಪ್ರಯತ್ನ ಸಾಕಾಗುವುದಿಲ್ಲ. ಪ್ರತಿಯೊಬ್ಬ ನಾಗರಿಕರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಈ ಅಭಿಯಾನದಲ್ಲಿ ಕೈಜೋಡಿಸಬೇಕಾಗಿದೆ. ವ್ಯಸನಕ್ಕೆ ಒಳಗಾದವರನ್ನು ತಿರಸ್ಕರಿಸುವ ಬದಲು ಅವರಿಗೆ ಮಾನವೀಯತೆ ಹಾಗೂ ಸಹಾನುಭೂತಿಯಿಂದ ಸೂಕ್ತ ಮಾರ್ಗದರ್ಶನ ಮತ್ತು ನೆರವು ನೀಡುವುದು ಅಗತ್ಯವಾಗಿದೆ.
ಸದೃಢ ಯುವಜನತೆ ದೇಶದ ಭವಿಷ್ಯದ ಶಕ್ತಿ
ಒಂದು ದೇಶದ ಭವಿಷ್ಯ ಅಲ್ಲಿನ ಯುವಜನತೆಯ ಮೇಲೆ ಅವಲಂಬಿತವಾಗಿದೆ. ಯುವಜನತೆ ಸದೃಢರಾಗಿದ್ದರೆ ದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬಲಿಷ್ಠವಾಗಲು ಸಾಧ್ಯ. ಸ್ವಾಮಿ ವಿವೇಕಾನಂದರು ಯುವಜನತೆಯ ಶಕ್ತಿ ಮತ್ತು ಸಾಮರ್ಥ್ಯವನ್ನು ಸದಾ ಒತ್ತಿ ಹೇಳುತ್ತಿದ್ದರು. ಯುವಜನತೆಯೇ ದೇಶದ ನಿಜವಾದ ಶಕ್ತಿ ಹಾಗೂ ಭವಿಷ್ಯದ ನಿರ್ಮಾತೃಗಳು ಎಂಬ ಸಂದೇಶವನ್ನು ಅವರು ನೀಡಿದ್ದರು.
ಇಂದಿನ ಯುವಜನತೆ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ, ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕಾಗಿದೆ. ಆದರೆ ದುಶ್ಚಟಗಳು ಯುವಕರ ಶಕ್ತಿ, ಪ್ರತಿಭೆ ಮತ್ತು ಕನಸುಗಳನ್ನು ಹಾಳು ಮಾಡುವ ಅಪಾಯ ಹೊಂದಿವೆ. ಕುತೂಹಲ, ಸ್ನೇಹಿತರ ಒತ್ತಡ, ಮಾನಸಿಕ ಒತ್ತಡ ಅಥವಾ ತಪ್ಪು ಅಭ್ಯಾಸಗಳ ಪರಿಣಾಮವಾಗಿ ಅನೇಕ ಯುವಕರು ವ್ಯಸನಗಳಿಗೆ ಒಳಗಾಗುತ್ತಿದ್ದಾರೆ.
ಆದ್ದರಿಂದ ಶಾಲಾ-ಕಾಲೇಜು ಹಂತದಿಂದಲೇ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ವ್ಯಸನಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು. ಕ್ರೀಡೆ, ಶಿಕ್ಷಣ, ಸಾಹಿತ್ಯ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಾಮಾಜಿಕ ಸೇವೆಯಲ್ಲಿ ಯುವಜನತೆ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಯುವಕರು ತಮ್ಮ ಸಮಯ ಮತ್ತು ಶಕ್ತಿಯನ್ನು ಸೃಜನಾತ್ಮಕ ಕಾರ್ಯಗಳಲ್ಲಿ ಬಳಸಿದಾಗ ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಮನುಷ್ಯನಲ್ಲಿರುವ ಹಣ, ಆಸ್ತಿ ಹಾಗೂ ಆಭರಣಗಳನ್ನು ಯಾರಾದರೂ ಕದಿಯಬಹುದು. ಆದರೆ ಯಾವುದೇ ವ್ಯಸನಕ್ಕೆ ಒಳಗಾಗದೆ ಪರಿಶುದ್ಧ ಜೀವನ ನಡೆಸುವ ವ್ಯಕ್ತಿಯಲ್ಲಿರುವ ಒಳ್ಳೆಯ ಗುಣ, ಶೌರ್ಯ, ಚಾರಿತ್ರ್ಯ, ಚುರುಕುತನ ಹಾಗೂ ಸ್ನೇಹಿತರ ಸಂಪಾದನೆಯಂತಹ ಸದ್ಗುಣಗಳನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಈ ಸದ್ಗುಣಗಳೇ ಯುವಕರ ವ್ಯಕ್ತಿತ್ವ ವಿಕಾಸಕ್ಕೆ ಆಧಾರ ಸ್ತಂಭಗಳಾಗಿವೆ.
ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಕುಟುಂಬದ ಪಾತ್ರ ಪ್ರಮುಖ
ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಕುಟುಂಬದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪೋಷಕರು ಮಕ್ಕಳೊಂದಿಗೆ ಸ್ನೇಹಪೂರ್ವಕವಾಗಿ ಮಾತನಾಡಬೇಕು. ಅವರ ಚಟುವಟಿಕೆಗಳು, ಸ್ನೇಹವಲಯ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ನಿರಂತರವಾಗಿ ಗಮನಹರಿಸಬೇಕು. ಮಕ್ಕಳಿಗೆ ಪ್ರೀತಿ, ಮಾರ್ಗದರ್ಶನ ಹಾಗೂ ಉತ್ತಮ ವಾತಾವರಣವನ್ನು ಒದಗಿಸಿದರೆ ಅವರು ದುಶ್ಚಟಗಳಿಂದ ದೂರವಿರಲು ಸಾಧ್ಯವಾಗುತ್ತದೆ.
ಮಕ್ಕಳೊಂದಿಗೆ ಮುಕ್ತವಾಗಿ ಸಂವಹನ ನಡೆಸುವುದರ ಜೊತೆಗೆ ವ್ಯಸನಗಳಿಂದ ಉಂಟಾಗುವ ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಕುರಿತು ಅವರಿಗೆ ತಿಳಿಸಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಮೂಲಕ ಯಾವುದೇ ರೀತಿಯ ಕೆಟ್ಟ ಒತ್ತಡಗಳಿಗೆ ಒಳಗಾಗದಂತೆ ಅವರನ್ನು ಸಿದ್ಧಗೊಳಿಸಬೇಕು.
ಸಾಮೂಹಿಕ ಜಾಗೃತಿಯಿಂದ ಮಾತ್ರ ವ್ಯಸನಮುಕ್ತ ಕರ್ನಾಟಕ ಸಾಧ್ಯ
ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಸರ್ಕಾರಿ ಇಲಾಖೆಗಳು, ಶಿಕ್ಷಣ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಜಾಥಾ, ವಿಚಾರ ಸಂಕಿರಣ, ಪ್ರತಿಜ್ಞಾ ಕಾರ್ಯಕ್ರಮ, ಉಪನ್ಯಾಸ, ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಅಭಿಯಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವ್ಯಸನಮುಕ್ತಿಯ ಸಂದೇಶವನ್ನು ಜನರಿಗೆ ತಲುಪಿಸಬೇಕು.
ವ್ಯಸನಕ್ಕೆ ಒಳಗಾದವರನ್ನು ಸಮಾಜದಿಂದ ದೂರ ಮಾಡುವ ಬದಲು ಅವರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವಾಗಬೇಕು. ಅಗತ್ಯವಿರುವವರಿಗೆ ಸೂಕ್ತ ಸಮಾಲೋಚನೆ, ಚಿಕಿತ್ಸೆ ಹಾಗೂ ಪುನರ್ವಸತಿ ನೆರವು ದೊರೆಯುವಂತೆ ಸಂಬಂಧಿಸಿದ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಕುಟುಂಬ ಸದಸ್ಯರು ಮತ್ತು ಸ್ನೇಹಿತರು ವ್ಯಸನಮುಕ್ತಿಯ ಹಾದಿಯಲ್ಲಿ ಸಾಗುವವರಿಗೆ ನಿರಂತರ ಬೆಂಬಲ ನೀಡಬೇಕು.
ಆಗಸ್ಟ್ 1ರ ಸಂಕಲ್ಪ ಜೀವನಪರ್ಯಂತ ಮುಂದುವರಿಯಲಿ
ರಾಜ್ಯವನ್ನು ವ್ಯಸನಮುಕ್ತ ಕರ್ನಾಟಕವನ್ನಾಗಿ ಮಾಡುವ ಗುರಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಇದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ವ್ಯಸನಗಳಿಂದ ದೂರವಿರುವುದು ಮಾತ್ರವಲ್ಲದೆ, ವ್ಯಸನಕ್ಕೆ ಒಳಗಾದವರನ್ನು ತಿರಸ್ಕರಿಸದೆ ಅವರ ಮನಪರಿವರ್ತನೆಗೆ ಸಹಕರಿಸುವುದು ಕೂಡ ಸಮಾಜದ ಕರ್ತವ್ಯವಾಗಿದೆ.
ಆಗಸ್ಟ್ 1ರಂದು ಆಚರಿಸಲಾಗುವ ವ್ಯಸನಮುಕ್ತ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಅದು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಶಾಶ್ವತ ಸಂಕಲ್ಪವಾಗಬೇಕು. 'ವ್ಯಸನಮುಕ್ತ ಜೀವನ, ಆರೋಗ್ಯಕರ ಕುಟುಂಬ, ಸುಸ್ಥಿರ ಸಮಾಜ' ಎಂಬ ಸಂದೇಶ ಪ್ರತಿಯೊಬ್ಬರ ಮನದಲ್ಲಿ ಬೇರೂರಬೇಕು.
ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಸಂದರ್ಭದಲ್ಲಿ ಅವರ ಮಹಾಂತ ಜೋಳಿಗೆ ಅಭಿಯಾನದ ಆಶಯವನ್ನು ಸ್ಮರಿಸಿಕೊಂಡು, ವ್ಯಸನಮುಕ್ತ ಜೀವನದ ಸಂಕಲ್ಪ ಕೈಗೊಳ್ಳಬೇಕಿದೆ. ನಮ್ಮ ಮನೆ, ನಮ್ಮ ಗ್ರಾಮ, ನಮ್ಮ ನಗರ ಹಾಗೂ ನಮ್ಮ ರಾಜ್ಯವನ್ನು ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಆರೋಗ್ಯಕರ ಯುವಜನತೆ, ಸದೃಢ ಕುಟುಂಬಗಳು ಹಾಗೂ ಉತ್ತಮ ಸಮಾಜ ನಿರ್ಮಾಣದ ಮೂಲಕ ವ್ಯಸನಮುಕ್ತ ಕರ್ನಾಟಕದ ಕನಸನ್ನು ನನಸಾಗಿಸುವುದು ಇಂದಿನ ಅಗತ್ಯವಾಗಿದೆ.
ಲೇಖಕರು:ಅಂಜನಾ ರಾಘವೇಂದ್ರ ಕುಬೇರ
ಗದಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ.
---------------
ಹಿಂದೂಸ್ತಾನ್ ಸಮಾಚಾರ್ / lalita MP