
ಮಡಿಕೇರಿ, 26 ಜುಲೈ (ಹಿ.ಸ.):
ಆ್ಯಂಕರ್:
ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಧೀರ ಯೋಧರ ಶೌರ್ಯ-ಪರಾಕ್ರಮದ ಪ್ರತೀಕವಾದ 'ಕಾರ್ಗಿಲ್ ವಿಜಯೋತ್ಸವ'ವನ್ನು ಮಡಿಕೇರಿಯಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಗಿಲ್ ಯುದ್ಧದ ವಿಜಯದ 26ನೇ ವರ್ಷಾಚರಣೆಯ ಸಂಭ್ರಮದಲ್ಲಿ ಹುತಾತ್ಮ ಯೋಧರ ಸ್ಮರಣೆಯನ್ನು ಮಾಡಲಾಯಿತು .
ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆ ಸಂಯುಕ್ತ ನೇತೃತ್ವದಲ್ಲಿ ಮಡಿಕೇರಿಯ ಐತಿಹಾಸಿಕ ಯುದ್ಧಸ್ಮಾರಕದ ಬಳಿ ವಿಶೇಷ ಶ್ರದ್ಧಾಂಜಲಿ ಹಾಗೂ ವಿಜಯೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಗಿಲ್ ಕದನದಲ್ಲಿ ದೇಶಕ್ಕಾಗಿ ಹುತಾತ್ಮರಾದ ಅಮರ ಯೋಧರ ಭಾವಚಿತ್ರ ಹಾಗೂ ಸ್ಮಾರಕಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ದೇಶದ ರಕ್ಷಣೆಯೇ ನಮ್ಮ ಮೊದಲ ಕರ್ತವ್ಯ:
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗಣ್ಯರು ಹಾಗೂ ಮಾಜಿ ಸೈನಿಕರು, ಕಾರ್ಗಿಲ್ ಯುದ್ಧದ ಕಠಿಣ ಪರಿಸ್ಥಿತಿಯಲ್ಲಿ ನಮ್ಮ ಯೋಧರು ತೋರಿದ ಸಾಹಸಗಾಥೆಯನ್ನು ಕೊಂಡಾಡಿದರು. ವೀರ ಯೋಧರ ತ್ಯಾಗ ಮತ್ತು ಬಲಿದಾನ ಎಂದಿಗೂ ಅಳಿಸಲಾಗದು ಎಂದು ಸ್ಮರಿಸಿದರು. ದೇಶದ ಏಕತೆ, ಅಖಂಡತೆ ಹಾಗೂ ಸಾರ್ವಭೌಮತೆಯನ್ನು ಕಾಪಾಡುವಲ್ಲಿ ಸಶಸ್ತ್ರ ಪಡೆಗಳು ನೀಡುತ್ತಿರುವ ಕೊಡುಗೆಯನ್ನು ಇಂದಿನ ಯುವ ಜನತೆ ಸದಾ ಸ್ಮರಿಸಬೇಕು ಮತ್ತು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವಿಜಯೋತ್ಸವದ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಮಾಜಿ ಸೈನಿಕರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿದ್ದರು. ನೆರೆದಿದ್ದ ಎಲ್ಲರೂ ಒಕ್ಕೊರಲಿನಿಂದ 'ಭಾರತ್ ಮಾತಾ ಕಿ ಜೈ' ಎಂಬ ದೇಶಭಕ್ತಿಯ ಜಯಘೋಷಗಳು ಮೊಳಗಿದವು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII