
ಬೆಂಗಳೂರು, 26 ಜುಲೈ (ಹಿ.ಸ.):
ಆ್ಯಂಕರ್:
ಕರ್ನಾಟಕ ರಾಜಕೀಯದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸುವ ಮೂಲಕ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಸ್ಪಷ್ಟ ಸಂದೇಶ ನೀಡಿದ್ದಾರೆ. ಶನಿವಾರ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದ ದಿ.ಕೆ.ಆರ್. ಪೇಟೆ ಕೃಷ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಭಿಮಾನಿಗಳು ಮತ್ತು ಬೆಂಬಲಿಗರು ಇನ್ನೂ ಕನಿಷ್ಠ ಹತ್ತು ವರ್ಷಗಳ ಕಾಲ ಸಕ್ರಿಯ ಚುನಾವಣಾ ರಾಜಕೀಯದಲ್ಲಿ ಮುಂದುವರಿಯುವಂತೆ ಮನವಿ ಮಾಡಿದರು. ಆದರೆ, 2028ರ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳುವ ಮೂಲಕ ತಮ್ಮ ಚುನಾವಣಾ ರಾಜಕೀಯ ಜೀವನಕ್ಕೆ ತೆರೆ ಎಳೆಯುವ ನಿರ್ಧಾರವನ್ನು ಘೋಷಿಸಿದರು.
ಈ ಘೋಷಣೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಸೂಚನೆ ಹಾಗೂ ನಾಯಕ ರಾಹುಲ್ ಗಾಂಧಿಯವರ ಸಂದೇಶಕ್ಕೆ ಗೌರವ ಸೂಚಿಸಿ ಅಧಿಕಾರ ತ್ಯಜಿಸಿದ್ದರು. ಎರಡನೇ ಅವಧಿಯ ಮುಖ್ಯಮಂತ್ರಿಯಾಗಿ ತಮ್ಮ ಆಡಳಿತವನ್ನು ಮುಗಿಸಿದ ಅವರು, ಇದೀಗ ಚುನಾವಣಾ ರಾಜಕೀಯಕ್ಕೂ ವಿದಾಯ ಹೇಳಲು ಮುಂದಾಗಿರುವುದು ಹಲವು ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ.
ಸುಮಾರು ಐದು ದಶಕಗಳ ರಾಜಕೀಯ ಪಯಣ ಹೊಂದಿರುವ ಸಿದ್ದರಾಮಯ್ಯ, ಸಾಮಾನ್ಯ ಕಾರ್ಯಕರ್ತನಾಗಿ ಆರಂಭಿಸಿ ರಾಜ್ಯದ ಮುಖ್ಯಮಂತ್ರಿ ಹುದ್ದೆಯವರೆಗೆ ಏರಿದ ಅಪರೂಪದ ನಾಯಕರಲ್ಲಿ ಒಬ್ಬರು. ಮೈಸೂರು ಭಾಗದ ರಾಜಕೀಯ ನೆಲೆಯಲ್ಲೇ ಬೆಳೆದ ಅವರು, ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ನ್ಯಾಯ, ಅಹಿಂದ ರಾಜಕಾರಣ ಮತ್ತು ಹಿಂದುಳಿದವರ ಪ್ರತಿನಿಧಿತ್ವವನ್ನು ತಮ್ಮ ರಾಜಕೀಯದ ಕೇಂದ್ರಬಿಂದುವಾಗಿಸಿಕೊಂಡು ರಾಜ್ಯ ರಾಜಕೀಯದಲ್ಲಿ ವಿಶಿಷ್ಟ ಗುರುತು ಮೂಡಿಸಿದರು.
ಸಿದ್ದರಾಮಯ್ಯ ನಿರ್ಧಾರದ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಮಧು ಬಂಗಾರಪ್ಪ ಸಿದ್ದರಾಮಯ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯಲಿದ್ದು ಅವರ ಮಾರ್ಗದರ್ಶನ ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII