
ವಿಜಯಪುರ, 26 ಜುಲೈ (ಹಿ.ಸ.)
ಆ್ಯಂಕರ್ : ಹಸಿರು ವಿಜಯಪುರ, ಶುದ್ಧಗಾಳಿಯ ವಿಜಯಪುರ ಎಂಬ ಹೆಗ್ಗಳಿಕೆಯನ್ನು ಜಿಲ್ಲೆಗೆ ತಂದುಕೊಟ್ಟಿರುವುದು ಕೋಟಿ ವೃಕ್ಷ ಅಭಿಯಾನ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಯುವ ಮನಸುಗಳೊಂದಿಗೆ ನಡೆದ ಕೋಟಿ ವೃಕ್ಷ ಅಭಿಯಾನ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ವಿಜಯಪುರ ಜಿಲ್ಲೆ ಎಂದರೆ ಬರ, ತೀವ್ರ ಬಿಸಿಲು ಹಾಗೂ ಹಸಿರಿನ ಕೊರತೆಯ ಚಿತ್ರಣವೇ ಜನರಲ್ಲಿ ಮೂಡುತ್ತಿತ್ತು. ಜಿಲ್ಲೆಯ ಅರಣ್ಯ ಪ್ರದೇಶ ಕೇವಲ ಶೇ.0.17ರಷ್ಟು ಮಾತ್ರ ಇದ್ದು, ಇದು ರಾಷ್ಟ್ರೀಯ ಸರಾಸರಿಗಿಂತಲೂ ಅತ್ಯಂತ ಕಡಿಮೆ ಪ್ರಮಾಣವಾಗಿತ್ತು. ಈ ಪರಿಸ್ಥಿತಿಯನ್ನು ಬದಲಾಯಿಸುವ ದೃಢ ಸಂಕಲ್ಪದೊಂದಿಗೆ ಕೋಟಿ ವೃಕ್ಷ ಅಭಿಯಾನವನ್ನು ಆರಂಭಿಸಲಾಯಿತು ಎಂದು ತಿಳಿಸಿದರು.
ಶಾಲೆ-ಕಾಲೇಜುಗಳ ಆವರಣ, ಮಮದಾಪುರ ಕೆರೆ, ಭೂತನಾಳ ಕೆರೆ, ರುದ್ರಭೂಮಿಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಮಹತ್ವ ನೀಡಲಾಯಿತು. ಇದರ ಫಲವಾಗಿ ಇಂದು ವಿಜಯಪುರ ಜಿಲ್ಲೆಯಲ್ಲಿ 1.5 ಕೋಟಿಗೂ ಅಧಿಕ ಮರಗಿಡಗಳು ಬೆಳೆದು ಹಸಿರು ಪರಿಸರ ನಿರ್ಮಾಣಕ್ಕೆ ಕಾರಣವಾಗಿವೆ. ಜೊತೆಗೆ ಜಿಲ್ಲೆಯ ಅರಣ್ಯ ಪ್ರದೇಶವೂ ಶೇ.2ರ ಸಮೀಪಕ್ಕೆ ಏರಿಕೆಯಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಈ ಸಾಧನೆ ಸರ್ಕಾರದ ಪ್ರಯತ್ನ ಮಾತ್ರವಲ್ಲ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ವಿವಿಧ ಸಂಘ-ಸಂಸ್ಥೆಗಳು, ಪರಿಸರವಾದಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕೈಜೋಡಿಸಿದ ಪರಿಣಾಮ ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಕೋಟಿ ವೃಕ್ಷ ಅಭಿಯಾನ ಇಲ್ಲಿಗೆ ನಿಲ್ಲಬಾರದು. ಈಗ ಪಂಚಕೋಟಿ ವೃಕ್ಷ ಅಭಿಯಾನದತ್ತ ಹೆಜ್ಜೆ ಇಡಬೇಕಿದ್ದು, ಈ ಹಸಿರು ಕ್ರಾಂತಿಯ ನೇತೃತ್ವವನ್ನು ಯುವಕರು ಹಾಗೂ ವಿದ್ಯಾರ್ಥಿಗಳು ವಹಿಸಿಕೊಳ್ಳಬೇಕು.
ಮುಂದಿನ ಪೀಳಿಗೆಗೆ ಇನ್ನಷ್ಟು ಹಸಿರು, ಆರೋಗ್ಯವಂತ ಹಾಗೂ ಪರಿಸರ ಸ್ನೇಹಿ ವಿಜಯಪುರವನ್ನು ಕಟ್ಟಿಕೊಡುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಕರೆ ನೀಡಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು ಅದನ್ನು ಪೋಷಿಸುವ ಮೂಲಕ ಹಸಿರು ವಿಜಯಪುರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande