
ಬೆಂಗಳೂರು, 21 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ 5,862 ಕೆರೆಗಳು ಬರಿದಾಗಿದ್ದು, ಬರದ ಗಂಭೀರತೆಯನ್ನು ಕಾಂಗ್ರೆಸ್ ಸರ್ಕಾರ ಇನ್ನೂ ಅರ್ಥ ಮಾಡಿಕೊಂಡಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ರಾಜ್ಯದ 32,504 ಕೆರೆಗಳ ಪೈಕಿ 5,246 ಕೆರೆಗಳು ಸಂಪೂರ್ಣ ಒಣಗಿದ್ದು, 562 ಕೆರೆಗಳಲ್ಲಿ ಶೇ.10ಕ್ಕಿಂತಲೂ ಕಡಿಮೆ ನೀರು ಮಾತ್ರ ಉಳಿದಿದೆ. ಇದು ಕೇವಲ ಅಂಕಿ-ಅಂಶವಲ್ಲ, ಸರ್ಕಾರದ ಆಡಳಿತ ವೈಫಲ್ಯದ ಪ್ರತಿಬಿಂಬ ಎಂದು ಟೀಕಿಸಿದ್ದಾರೆ.
ಹಾಸನದಲ್ಲಿ 867, ಕೋಲಾರದಲ್ಲಿ 768, ತುಮಕೂರಿನಲ್ಲಿ 696, ರಾಮನಗರದಲ್ಲಿ 602, ಚಿಕ್ಕಮಗಳೂರಿನಲ್ಲಿ 340 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 331 ಕೆರೆಗಳು ಬರಿದಾಗಿವೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸರ್ಕಾರದ ಬಳಿ ಬರ ನಿರ್ವಹಣೆಗೆ ಸ್ಪಷ್ಟ ಕಾರ್ಯಯೋಜನೆ ಇಲ್ಲ ಎಂದು ದೂರಿದ್ದಾರೆ.
ಬೆಳೆಗಳು ಒಣಗುತ್ತಿದ್ದು, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಕೊರತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣಿಸುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
ಮಳೆ ಕೊರತೆಯ ಮುನ್ಸೂಚನೆ ಮೊದಲೇ ಇದ್ದರೂ ಕೆರೆಗಳನ್ನು ತುಂಬಿಸುವ ಯೋಜನೆ, ಬ್ಯಾರೇಜ್‌ಗಳಿಂದ ನೀರು ಹರಿಸುವ ಕ್ರಮ ಹಾಗೂ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ತಕ್ಷಣವೇ ರಾಜ್ಯವ್ಯಾಪಿ 'ಬರ ತುರ್ತು ಕಾರ್ಯಾಚರಣೆ' ಘೋಷಿಸಿ, ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಯುದ್ಧೋಪಾದಿಯಲ್ಲಿ ಜಾರಿಗೊಳಿಸಬೇಕು. ಜೊತೆಗೆ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಇಲ್ಲವಾದರೆ ರೈತರೊಂದಿಗೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.