

ಬಳ್ಳಾರಿ, 21 ಜುಲೈ (ಹಿ.ಸ.)
ಆ್ಯಂಕರ್ : ಪ್ರಾಣಿಜನ್ಯ ರೋಗಗಳ ತಡೆಗೆ ಜಾಗೃತಿ ಅಗತ್ಯವಾಗಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳ (ಝೂನೋಟಿಕ್ ಕಾಯಿಲೆಗಳು) ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಜಿಲ್ಲಾ ಸರ್ವೇಕ್ಷಣಾ ಘಟಕದ ಸಾಂಕ್ರಾಮಿಕ ರೋಗ ತಜ್ಞೆ ಡಾ. ವಿಶಾಲಾಕ್ಷಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ, ಪಶುಸಂಗೋಪನೆ ಇಲಾಖೆ ಹಾಗೂ ಚೈತನ್ಯ ಪದವಿಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ವಿಶ್ವ ಝೂನೋಸಿಸ್ ಜಾಗೃತಿ ದಿನ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೇಬೀಸ್, ಬರ್ಡ್ಫ್ಲಯ, ಬ್ರುಸೆಲ್ಲೋಸಿಸ್, ಲೆಪ್ಟೋಸ್ಪೆರೋಸಿಸ್ ಮುಂತಾದ ಕಾಯಿಲೆಗಳು ಹರಡದಂತೆ ತಡೆಯಲು ಸ್ವಚ್ಛತೆ, ಸುರಕ್ಷಿತ ಆಹಾರ ಪದ್ಧತಿ ಹಾಗೂ ಸಾಕುಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ಹಾಕುವುದು ಅತ್ಯಗತ್ಯ. ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯವನ್ನು ಸಮನ್ವಯಗೊಳಿಸುವ ‘ಒನ್ ಹೆಲ್ತ್' ಪರಿಕಲ್ಪನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.
ದೇವಿನಗರ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಧಾರಾಣಿ ಅವರು ಮಾತನಾಡಿ, ಪ್ರಾಣಿಗಳನ್ನು ಮುಟ್ಟಿದ ನಂತರ ಸೋಪಿನಿಂದ ಕೈ ತೊಳೆಯುವುದು, ಮಾಂಸ, ಹಾಲು ಹಾಗೂ ಮೊಟ್ಟೆಗಳನ್ನು ಸರಿಯಾಗಿ ಬೇಯಿಸಿ ಸೇವಿಸುವುದು ಮುಖ್ಯ. ಒಂದು ವೇಳೆ ಯಾವುದೇ ಪ್ರಾಣಿ ಕಚ್ಚಿದರೆ, ಕಚ್ಚಿದ ಗಾಯವನ್ನು ತಕ್ಷಣವೇ ಹರಿಯುವ ನೀರು ಮತ್ತು ಸೋಪಿನಿಂದ 15 ರಿಂದ 20 ನಿಮಿಷಗಳ ಕಾಲ ಸ್ವಚ್ಛಗೊಳಿಸಬೇಕು. ಇದರಿಂದ ರೇಬೀಸ್ ವೈರಾಣು ನಿಷ್ಕಿçಯಗೊಳ್ಳುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಾಣಿ ಕಚ್ಚಿದ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ಚಿಕಿತ್ಸೆ ಪಡೆಯುವಂತೆ ತಮ್ಮ ತಮ್ಮ ವಾರ್ಡ್ ಹಾಗೂ ಗ್ರಾಮಗಳಲ್ಲಿ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಹರಿಕೃಷ್ಣ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಸದಾಶಿವ, ಸಹಾಯಕ ನಿರ್ದೇಶಕ ಡಾ. ಶ್ರೀನಿವಾಸ್, ವೈದ್ಯಾಧಿಕಾರಿ ಡಾ. ವಿಭಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ಮುಖ್ಯ ಅತಿಥಿಗಳಾದ ಕಲ್ಪನಾ, ವೆಂಕಟರಮಣರೆಡ್ಡಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಜಡಗನ್ನವರ, ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ ಸೇರಿದಂತೆ ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್