
ಬೆಂಗಳೂರು, 21 ಜುಲೈ (ಹಿ.ಸ.):
ಆ್ಯಂಕರ್
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಧೀನದಲ್ಲಿರುವ 270 ಎಕರೆ ಜಮೀನಿನ ಪೈಕಿ ದಲಿತ ಸಮುದಾಯಕ್ಕೆ ಸೇರಿದ 150 ಎಕರೆ ಭೂಮಿ ಅಕ್ರಮ ವರ್ಗಾವಣೆ ಆರೋಪದ ಕುರಿತು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಲು ಕಂದಾಯ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆದೇಶಿಸಿದ್ದಾರೆ.
ವಿಧಾನಸೌಧದಲ್ಲಿ ದಲಿತಪರ ಸಂಘಟನೆಗಳ ಮುಖಂಡರ ಸಭೆ ಬಳಿಕ ಅವರು ಈ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. ಬೆಂಗಳೂರು ವಿಭಾಗೀಯ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ನೇತೃತ್ವದಲ್ಲಿ ಈ ತನಿಖೆ ನಡೆಯಲಿದ್ದು, ವರದಿ ಬಂದ ಬಳಿಕ ನೈಜ ಸತ್ಯಾಂಶ ಹೊರಬರಲಿದೆ ಎಂದರು. ಇದೇ ವೇಳೆ, ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವುದಾಗಿ ಹಾಗೂ ಮುಂಬರುವ ನೇಮಕಾತಿಗಳಲ್ಲಿ ಎಸ್ಸಿ-ಎಸ್ಟಿ ಮೀಸಲಾತಿಯನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವುದಾಗಿ ಭರವಸೆ ನೀಡಿದರು.
ಮುಂದುವರಿದು ಮಾತನಾಡಿದ ಡಿಸಿಎಂ, ದಲಿತ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಮೊತ್ತ ಹೆಚ್ಚಳ, ವಿದೇಶಿ ಉನ್ನತ ಶಿಕ್ಷಣಕ್ಕೆ ಪೂರ್ಣ ಬೋಧನಾ ಶುಲ್ಕ ಭರಿಸುವುದು ಮತ್ತು ವಿಶ್ವ ಚಾಂಪಿಯನ್ ಕ್ರೀಡಾಪಟು ನೀಲವ್ವ ಹರಿಜನ ಅವರಿಗೆ ವಸತಿ ನಿವೇಶನ ಮಂಜೂರು ಮಾಡುವ ಕುರಿತು ಭರವಸೆ ನೀಡಿದರು. ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಹಾಗೂ ಎಸ್ಸಿಪಿ-ಟಿಎಸ್ಪಿ ನಿಧಿ ನಿರ್ವಹಣೆ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಪರಾಮರ್ಶೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII