

ಬಳ್ಳಾರಿ, 21 ಜುಲೈ (ಹಿ.ಸ.)
ಆ್ಯಂಕರ್ : ನೀಟ್ ಅವಾಂತರಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹೋರಾಟ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅನಗತ್ಯವಾಗಿ ಲಾಠಿಚಾರ್ಜ್ ಮಾಡಿದ್ದನ್ನು ಎಐಡಿಎಸ್ಓ ಖಂಡಿಸಿ, ಬಳ್ಳಾರಿಯಲ್ಲಿ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಎಐಡಿಎಸ್ಓನ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್ ಅವರು ಪ್ರತಿಭಟನೆಯ ನೇತೃತ್ವವಹಿಸಿ, ನೀಟ್ ಪರೀಕ್ಷೆಯಲ್ಲಿ ಆಗಿರುವ ಅಕ್ರಮಗಳನ್ನು ಖಂಡಿಸಿ, ದೇಶದ ಪರಿಸರ ತಜ್ಞ ಹಾಗೂ ಶಿಕ್ಷಕ ಸೋನಂ ವಾಂಗ್ಚುಕ್ ಅವರು 23 ದಿನಗಳಿಂದ ದೆಹಲಿಯಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಕೇಂದ್ರ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ನೀಟ್ ಪರೀಕ್ಷೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 20 ವಿದ್ಯಾರ್ಥಿಗಳ ಕುಟುಂಬಗಳಿಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಎಐಡಿಎಸ್ಓನ ಜಿಲ್ಲಾ ಖಜಾಂಚಿ ಅನುಪಮಾ ಅವರು, ಭಾರತದ ವಿದ್ಯಾರ್ಥಿ ಸಮುದಾಯವು ಕೆಲವು ತಿಂಗಳುಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ನೀಟ್ನಲ್ಲಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದೆ. ಕೇಂದ್ರ ಸರ್ಕಾರ ದೇಶದ ಯುವ ಸಮೂಹವನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸುತ್ತಿದೆ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್