ಕೇಂದ್ರ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ: ಬಿ.ಕೆ. ಹರಿಪ್ರಸಾದ್
ಬೆಂಗಳೂರು, 21 ಜುಲೈ (ಹಿ.ಸ.): ಆ್ಯಂಕರ್: ದೆಹಲಿಯ ಜಂತರ್ ಮಂತರ್‌ನಿಂದ ''ಸಂಸತ್ ಚಲೋ'' ಪ್ರತಿಭಟನೆ ನಡೆಸುತ್ತಾ ಶಾಂತಿಯುತ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರ ಅಮಾನವೀಯ ಪೊಲೀಸ್ ದಾಳಿ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ
BKH file photo


ಬೆಂಗಳೂರು, 21 ಜುಲೈ (ಹಿ.ಸ.):

ಆ್ಯಂಕರ್:

ದೆಹಲಿಯ ಜಂತರ್ ಮಂತರ್‌ನಿಂದ 'ಸಂಸತ್ ಚಲೋ' ಪ್ರತಿಭಟನೆ ನಡೆಸುತ್ತಾ ಶಾಂತಿಯುತ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರ ಅಮಾನವೀಯ ಪೊಲೀಸ್ ದಾಳಿ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಪ್ರಶ್ನೆಪತ್ರಿಕೆಗಳನ್ನು ರಕ್ಷಿಸಲು ವಿಫಲವಾದ ಸರ್ಕಾರ ನ್ಯಾಯ ಕೇಳಿದ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿ ತನ್ನ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಆರೋಪಿಸಿದ್ದಾರೆ. ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವ ನೀಡಿರುವ ಸಂವಿಧಾನಬದ್ಧ ಹಕ್ಕಾಗಿದ್ದು, ತಮ್ಮ ಭವಿಷ್ಯವನ್ನು ನಾಶಮಾಡುತ್ತಿರುವ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತುವುದು ಅಪರಾಧವಲ್ಲ ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳ ಕೈಯಲ್ಲಿ ಪುಸ್ತಕ, ಫಲಕ ಹಾಗೂ ನ್ಯಾಯದ ಬೇಡಿಕೆಗಳಿದ್ದರೆ, ಸರ್ಕಾರದ ಕೈಯಲ್ಲಿ ಲಾಠಿ, ಬ್ಯಾರಿಕೇಡ್ ಮತ್ತು ಬಂಧನಗಳಿದ್ದವು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದ ಸರ್ಕಾರ ಪೊಲೀಸ್ ಬಲದಿಂದ ಅವರ ಧ್ವನಿಯನ್ನು ಹತ್ತಿಕ್ಕಲು ಮುಂದಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.

ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರ ಶಾಂತಿಯುತ ಸತ್ಯಾಗ್ರಹಗಳನ್ನು ಇದೇ ರೀತಿಯಲ್ಲಿ ಲಾಠಿ ಮತ್ತು ಬಂಧನಗಳ ಮೂಲಕ ಹತ್ತಿಕ್ಕಲು ಯತ್ನಿಸಿದ್ದರು. ಆದರೆ ಜನರ ಧ್ವನಿಯನ್ನು ಶಾಶ್ವತವಾಗಿ ಮೌನಗೊಳಿಸಲು ಸಾಧ್ಯವಾಗಿರಲಿಲ್ಲ. ಇಂದು ಅವರ ರಾಜಕೀಯ ವಾರಸುದಾರರು ಅದೇ ರೀತಿಯ ದಮನಕಾರಿ ಕ್ರಮವನ್ನು ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವಿದ್ಯಾರ್ಥಿ–ಯುವಜನರನ್ನು ಸುಳ್ಳು ಭರವಸೆಗಳಿಂದ ಅಧಿಕಾರಕ್ಕೇರಿದವರು ಈಗ ಉದ್ಯೋಗ ಕೇಳಿದರೆ ಬಂಧನ, ಪರೀಕ್ಷೆಯಲ್ಲಿ ನ್ಯಾಯ ಕೇಳಿದರೆ ಲಾಠಿ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರಶ್ನಿಸಿದರೆ ಪೊಲೀಸ್ ದೌರ್ಜನ್ಯ ನಡೆಸುತ್ತಿದ್ದಾರೆ. ಇದೇನಾ ಕೇಂದ್ರ ಸರ್ಕಾರದ ಯುವಜನ ನೀತಿ ಎಂದು ಅವರು ಪ್ರಶ್ನಿಸಿದ್ದಾರೆ.

'ಪರೀಕ್ಷಾ ಪೇ ಚರ್ಚಾ' ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಉಪದೇಶ ನೀಡುವ ಪ್ರಧಾನಮಂತ್ರಿಗಳು ವಿದ್ಯಾರ್ಥಿಗಳ ನೈಜ ಸಮಸ್ಯೆಗಳನ್ನು ಎದುರಿಸುವ ಧೈರ್ಯ ತೋರಿಸುತ್ತಿಲ್ಲ. ವಿದ್ಯಾರ್ಥಿಗಳ ಮೇಲೆ ಬೀಸಿದ ಪ್ರತಿಯೊಂದು ಲಾಠಿಯೂ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಬಿದ್ದ ಏಟು. ಇದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ ಎಂದು ಹೇಳಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಬೇಕು. ಬಂಧಿತ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಈ ಘಟನೆಯ ಕುರಿತು ಕೇಂದ್ರ ಸರ್ಕಾರ ದೇಶದ ಜನರ ಕ್ಷಮೆ ಕೇಳಬೇಕು. ಅಲ್ಲದೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದ್ದಾರೆ.

ಲಾಠಿಯಿಂದ ವಿದ್ಯಾರ್ಥಿಗಳ ದೇಹವನ್ನು ಗಾಯಗೊಳಿಸಬಹುದು. ಆದರೆ ವಿದ್ಯಾರ್ಥಿಗಳ ಪ್ರಶ್ನೆಗಳನ್ನು, ಯುವಜನರ ಆಕ್ರೋಶವನ್ನು ಮತ್ತು ಪ್ರಜಾಪ್ರಭುತ್ವದ ಧ್ವನಿಯನ್ನು ಎಂದಿಗೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande