
ಗದಗ, 02 ಜುಲೈ (ಹಿ.ಸ.):
ವಚನ ಪಿತಾಮಹ ಎಂದೇ ಪ್ರಖ್ಯಾತರಾದ ಫ. ಗು. ಹಳಕಟ್ಟಿಯವರು ಸಂಶೋಧಕರು, ಸಾಹಿತ್ಯ ಪ್ರಚಾರಕರು ಮತ್ತು ಸಂಪಾದಕರು ಆಗಿ ಕನ್ನಡ ನಾಡಿಗೆ ತಮ್ಮದೇ ಆದ ಅಪೂರ್ವ ಕೊಡುಗೆ ನೀಡಿದ್ದಾರೆ. ಇವರ ಪೂರ್ಣ ಹೆಸರು ಫಕೀರಪ್ಪ ಗುರುಬಸಪ್ಪ ಹಳಕಟ್ಟಿ.
ಫ.ಗು.ಹಳಕಟ್ಟಿಯವರು 2ನೇ ಜುಲೈ 1880ರಂದು ಧಾರವಾಡದಲ್ಲಿ ಜನಿಸಿದರು. ಇವರ ತಂದೆ ಗುರುಬಸಪ್ಪ ಹಳಕಟ್ಟಿ. ತಾಯಿ ದಾನಾದೇವಿ. ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ಇವರ ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ ಸಾಹಿತಿಗಳಾಗಿ ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ ವಾಗ್ಭೂಷಣದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿಯೇ ಬಂದಿತ್ತು.
ಫ.ಗು. ಹಳಕಟ್ಟಿಯವರು ತಮ್ಮ ಹುಟ್ಟೂರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ 1896ರಲ್ಲಿ ಮೆಟ್ರಿಕ್ ಮುಗಿಸಿದರು. ನಂತರ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಮುಂಬಯಿಗೆ ತೆರಳಿ ಅಲ್ಲಿನ ಸೇಂಟ್ ಝೇವಿಯರ್ ಕಾಲೇಜು ಸೇರಿದರು.
ಅಲ್ಲಿ ಕನ್ನಡ ಪುರೋಹಿತ ಆಲೂರು ವೆಂಕಟರಾಯರು ಇವರ ಸಹಪಾಠಿಗಳಾಗಿದ್ದರು. ಆ ಸಂದರ್ಭದಲ್ಲಿ ಮಾತೃಭೂಮಿ , ಮಾತೃ ಭಾಷೆಗಳ ಸ್ಥಿತಿಗತಿ, ಉದ್ಧಾರ ಮಾರ್ಗಗಳನ್ನು ಕುರಿತು ಚರ್ಚಿಸುತ್ತಿದ್ದರು. ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದುಗೂಡಬೇಕೆಂದು ಹಂಬಲಿಸುತ್ತಿದ್ದರು.
ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕ್ರತಿಗಾಗಿ ದುಡಿಯಲು ವಿದ್ಯಾರ್ಥಿ ದಿಸೆಯಲ್ಲೇ ದೃಢಸಂಕಲ್ಪ ಮಾಡಿದರು.
1901ರಲ್ಲಿ ಸೈನ್ಸ್ ಪದವಿ ಪಡೆದ ಹಳಕಟ್ಟಿಯವರು 1904ರಲ್ಲಿ ಕಾನೂನು ಪದವೀಧರರಾಗಿ ಬೆಳಗಾವಿಯಲ್ಲಿ ವಕೀಲಿವೃತ್ತಿ ಪ್ರಾರಂಭಿಸಿದರು. ಕೆಲವು ತಿಂಗಳುಗಳಲ್ಲೇ ಕಾರಣಾಂತರಗಳಿಂದ ಬೆಳಗಾವಿಯಿಂದ ವಿಜಯಪುರಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ನಂತರ ವಿಜಯಪುರವನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರು.
ವಿಜಯಪುರದಲ್ಲಿ ಶ್ರೇಷ್ಟ ನ್ಯಾಯವಾದಿಗಳೆಂದು ಹೆಸರು ಗಳಿಸಿದರು. ಪಕ್ಷಗಾರರ ಸಂಖ್ಯೆ ದಿನೇ ದಿನೇ ಬೆಳೆಯತೊಡಗಿತ್ತು. ನ್ಯಾಯಾರ್ಥಿಗಳು ಸಂತೋಷದಿಂದ ಕೊಟ್ಟದ್ದೇ ಇವರ ಸಂಭಾವನೆಯಾಗಿತ್ತು. ಆಗ ವಚನ ಸಾಹಿತ್ಯದಹಸ್ತ ಪ್ರತಿಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆದು ಆ ಒಲವು ಅವರ ನಿಲುವಾಯಿತು. ಇಪ್ಪತ್ತು ವರ್ಷದ ಕಾಯ್ದೆ ಅನುಭವಗಳನ್ನು ಗಮನಿಸಿ ಫ.ಗು. ಹಳಕಟ್ಟಿ ಅವರನ್ನು ಅಂದಿನ ಆಂಗ್ಲ ಸರ್ಕಾರ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಗರ್ನಮೆಂಟ್ ಪ್ಲೀಡರ್ ಎಂದು ನಿಯಮಿಸಿತು. ಆದರೆ ವಚನ ಸಾಹಿತ್ಯದ ಮಾಂತ್ರಿಕ ಶಕ್ತಿಗೆ ಮರುಳಾದ ವಕೀಲರು ಈ ಯಾಂತ್ರಿಕ ವೃತ್ತಿಯಿಂದ ನಿವೃತ್ತಿಯಾದರು.
ಸಾಹಿತ್ಯ ಸೇವೆ:
ವಚನ ಸಿರಿಯ ಸೊಲ್ಲು ನಾಡಿನಲ್ಲೆಲ್ಲ ಚೆಲ್ಲುವರಿಯುವುದರ ಕುರಿತು ಫ.ಗು.ಹಳಕಟ್ಟಿಯವರು ಹಂಬಲಿಸಿದರು.ವಚನ ಸಾಹಿತ್ಯದ ಪ್ರಕಟಣೆಗಳ ಮಾರಾಟದಿಂದ ಬಂದ ಮತ್ತು ಸಮಾಜದಿಂದ ಸಂದ ಧನವನ್ನೆಲ್ಲ ಉಳಿದ ವಚನ ಸಾಹಿತ್ಯದ ಬೆಳಕಿಗಾಗಿ ಬಳಸಿದರು. ಇದ್ದ ಮನೆಯನ್ನು ಮಾರಿ ಗೆದ್ದಲು ಹಿಡಿದ ತಾಳೆಗರಿಗಳನ್ನು ಮುದ್ರಿಸುವುದಕ್ಕಾಗಿ ಹಣ ಹಾಕಿ “ ಹಿತಚಿಂತಕ “ ಮುದ್ರಣಾಲಯವನ್ನು 1925 ರಲ್ಲಿ ಸ್ಥಾಪಿಸಿ ನಾಡು ನುಡಿಯ ಹಿತಚಿಂತಕರಾದರು.
ಹಳಕಟ್ಟಿಯವರು ತಾಳೆಯೋಲೆಗಳನ್ನು ಸಂಗ್ರಹಿಸುವುದಕ್ಕೆ ಮೊದಲು ಕವಿ ಚರಿತೆಕಾರರು ಗುರುತಿಸಿದ್ದು ಕೇವಲ 50 ವಚನಕಾರರನ್ನು ಮಾತ್ರ. ತಮ್ಮ ಸಂಶೋಧನೆಯ ಮೂಲಕ 250 ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಹಳಕಟ್ಟಿಯವರಿಗ ಸಲ್ಲುತ್ತದೆ.
1923 ರಲ್ಲಿ ವಚನಶಾಸ್ತ್ರ ಸರ ಭಾಗ 1 ಪ್ರಕಟವಾಯಿತು. ಕರ್ನಾಟಕದ ಇತಿಹಾಸದಲ್ಲಿಯೇ ಸಂಶೋಧನೆ ಪ್ರಕಟಿಸಲು ಒಂದು ಮುದ್ರಣಾಲಯ ಹಾಕಿದ ಉದಾಹರಣೆ ಇಲ್ಲ. ಅಂತಹ ಮುಂದಾಲೋಚನೆ, ತೀಕ್ಷ÷್ಣ ಬುದ್ಧಿ, ಚಿಂತನೆ ಹಳಕಟ್ಟಿಯವರದಾಗಿತ್ತು. ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ ವಚನ ಸಾಹಿತ್ಯ ಸಾರವಂತೂ ಅಪೂರ್ವ ವಚನಗಳುಳ್ಳ ಒಂದು ಅದ್ಭುತ ಕೃತಿ. ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ ಮುಂತಾದವುಗಳು ಇವರ ಪ್ರಮುಖ ಕೃತಿಗಳಾಗಿವೆ.
ಪತ್ರಿಕೋದ್ಯಮ
ಪತ್ರಿಕೋದ್ಯಮದಲ್ಲೂ ಬಹಳ ಆಸಕ್ತಿ ಹೊಂದಿದ್ದ ಹಳಕಟ್ಟಿಯವರು 1926ರಲ್ಲಿ ಸಂಶೋಧನೆಗಾಗಿ ಮೀಸಲಾದ ಶಿವಾನುಭವ ಪತ್ರಿಕೆ ಪ್ರಾರಂಭಿಸಿದರು. ಇದನ್ನು ಸತತವಾಗಿ ನಡೆಸಿಕೊಂಡು ಬಂದ ಇವರು 1951ರಲ್ಲಿ ಇದರ ಬೆಳ್ಳಿಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಹಾಗೆಯೇ 1927ರಲ್ಲಿ ನವ ಕರ್ನಾಟಕ ಎಂಬ ವಾರಪತ್ರಿಕೆಯನ್ನೂ ಸಹ ಆರಂಭಿಸಿದ್ದರು. ಈ ಎರಡೂ ಪತ್ರಿಕೆಗಳ ಸಂಪಾದಕ ಮತ್ತು ಪ್ರಕಾಶಕ ಹಾಗೂ ಮುದ್ರಕರಾಗಿ ಹಳಕಟ್ಟಿಯವರ ಪತ್ರಿಕಾರಂಗದ ಸಾಧನೆ ಕೂಡ ಗುರುತರವಾದದ್ದಾಗಿದೆ.
ಸಂಸ್ಥೆಗಳ ಸ್ಥಾಪನೆ
ಹಳಕಟ್ಟಿಯವರು 1910ರಲ್ಲಿ ವಿಜಯಪುರ ಲಿಂಗಾಯತ ಶಿಕ್ಷಣ ಸಂಸ್ತೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯಿಂದ 1914 ರಲ್ಲಿ ಸಿದ್ದೇಶ್ವರ ಪ್ರೌಢಶಾಲೆ ಸ್ಥಾಪನೆಯಾಯಿತು. ವಚನವಾಗ್ಮಯದ ಸಮಗ್ರ ಸಂಶೋಧನೆ, ಧರ್ಮ ಸಾಹಿತ್ಯ ಸಂಸ್ಕೃತಿಗಳ ಚಿಂತನೆ, ಸಾರ್ವಜನಿಕ ಕಾರ್ಯಗಳ ನಿರ್ವಹಣೆಗಳ ಕಡೆಗೆ ಸಂಪೂರ್ಣ ಗಮನ ಹರಿಸಿದ ಫ.ಗು. ಹಳಕಟ್ಟಿಯವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
1912ರಲ್ಲಿ ಶ್ರೀ ಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕನ್ನು ಸ್ಥಾಪಿಸಿದ್ದರಲ್ಲದೆ ಸಮಾಜದ ಏಳ್ಗೆಗಾಗಿ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿದರು. ಒಕ್ಕಲುತನ ಸಹಕಾರಿ ಸಂಘ, ಹತ್ತಿ ಮಾರಾಠಗಾರರ ಸಂಘ , ನೇಕಾರ ಸಹಕಾರಿ ಸಂಘ ಮುಂತಾದವುಗಳು ಪ್ರಮುಖವಾಗಿವೆ. ಜಿಲ್ಲೆಯ ಬರಗಾಲದ ಬವಣೆಯನ್ನು ತಪ್ಪಿಸುವುದಕ್ಕಾಗಿ ವಿಲ್ಸನ್ ಆಂಟಿ ಫ್ಯಾಮಿನ ಇನ್ ಸ್ಟಿಟ್ಯೂಟ್ ನ್ನು ಸ್ಥಾಪಿಸಿ ಗೌರವ ಕಾರ್ಯದರ್ಶಿಗಳಾಗಿ ( 9-10-1933 ರಿಂದ 7-10-1951 ರವರಿಗೆ) 18 ವರ್ಷಗಳವರೆಗೆ ಕಾರ್ಯ ಮಾಡಿದರು.
ಭೂ ಸವಕಳಿಯನ್ನು ತಡೆಯುವ ಡೊಂಕು ಒಡ್ಡುಗಳ ರಚನೆಯ ಯೋಜನೆ ಅವರ ಕಾಲದಲ್ಲಿಯೇ ಪ್ರಾರಂಭಿಸಲ್ಪಟ್ಟಿತ್ತು. ಅವರು ನಗರ ಪಾಲಿಕೆಯ ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷರಾದ ಕಾಲಕ್ಕೆ ಭೂತನಾಳ ಕೆರೆಯಿಂದ ನಗರಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಕಾರ್ಯಗತಗೊಳಿಸಿದರು. ಅವರ ಸಮಾಜ ಸೇವೆಯನ್ನು ಮನಗಂಡು ಸಮಾಜವು ಅವರಿಗೆ ಧಾರವಾಡದಲ್ಲಿ ಜರುಗಿದ ಹನ್ನೊಂದನೇಯ ವೀರಶೈವ ಮಹಾಸಭೆಯ ಅಧ್ಯಕ್ಷ ಸ್ಥಾನವನ್ನಿತ್ತು ಗೌರವಿಸಿತು. ಅವರ ಅಂದಿನ ವಿಚಾರಗಳು ಇಂದೂ ಕೂಡ ಉಪಯುಕ್ತವಾಗಿವೆ.
ವಚನ ಪಿತಾಮಹ
ಹಳಕಟ್ಟಿಯವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಇಂಡಿಯನ್ ಆಂಟಿಕ್ವರಿ ಎಂಬ ಪತ್ರಿಕೆಗೆ ಕಳುಹಿಸಿದರು. ಡಾ. ಜೆ.ಎನ್.ಫಾರಕ್ವಹಾರ ಎಂಬುವರು ಸಂಕಲಿಸಿ 1922 ರ ಜನೆವರಿ ಸಂಚಿಕೆಯಲ್ಲಿ ಪ್ರಕಟಿಸಿದರು. ವಚನ ಸಾಹಿತ್ಯದ ಪ್ರಸಾರ ಕಾರ್ಯವನ್ನು ಕೈಗೊಂಡ ಅವರು ವಚನ ಪಿತಾಮಹ ಎಂದೆಸಿಕೊಂಡರು.
ಇಂಥ ಪ್ರಚಂಡ ಸಾಧಕ ಹಳಕಟ್ಟಿಯವರು 29.6.1964ರಂದು ನಿಧನ ಹೊಂದಿದರು. ಇವರು ಮಾಡಿದ ಸೇವೆ, ಸಾಧನೆ, ತ್ಯಾಗ, ಕಟ್ಟಿ ಬೆಳೆಸಿದ ಸಂಸ್ಥೆಗಳು ಎಲ್ಲಕ್ಕಿಂತ ಮಿಗಿಲಾಗಿ ವಚನ ಸಾಹಿತ್ಯ ಕ್ಷೇತ್ರ ಇವರ ಹೆಸರನ್ನು ಅಜರಾಮರಗೊಳಿಸಿವೆ. ಅವರ ಜೀವನ ಹಾಗೂ ಸಾಧನೆಗಳನ್ನು ನೋಡಿದರೆ ಅವರು ಅದ್ಭುತ ಚೈತನ್ಯದ ಶಕ್ತಿಯಾಗಿದ್ದರು. ಅವರ ಮಾರ್ಗದರ್ಶನ ಇಂದಿನ ಸಾಹಿತಿಗಳಿಗೆ ದಾರಿದೀಪವಾಗಲಿ.
ಲೇಖಕರು:
ವಾರ್ತಾ ಇಲಾಖೆ ಅಧಿಕಾರಿಗಳಾದ ಶ್ರೀಮತಿ ಅಂಜನಾ ರಾಘವೇಂದ್ರ ಕುಬೇರ.
---------------
ಹಿಂದೂಸ್ತಾನ್ ಸಮಾಚಾರ್ / lalita MP