'ಓ ಬೆಳಕೆ ಬಾ ಬೆಳಕೆ' ಮೂಲಕ ಮನಗೆದ್ದ ಡಾಲಿ ಧನಂಜಯ
‘ಮದರ್ ಪ್ರಾಮಿಸ್’ ಚಿತ್ರದ ಭಾವನಾತ್ಮಕ ಪ್ರಾರ್ಥನಾ ಗೀತೆ ಬಿಡುಗಡೆ
ಡಾಲಿ ಧನಂಜಯ


ಬೆಂಗಳೂರು, 02 ಜುಲೈ (ಹಿ.ಸ.):

ಆ್ಯಂಕರ್:ಡಾಲಿ ಧನಂಜಯ ಅಭಿನಯ ಹಾಗೂ ನಿರ್ಮಾಣದ ಬಹುನಿರೀಕ್ಷಿತ ‘ಮದರ್‌ ಪ್ರಾಮಿಸ್‌’ ಚಿತ್ರದ ಮತ್ತೊಂದು ವಿಶೇಷ ಹಾಡು ಬಿಡುಗಡೆಯಾಗಿದ್ದು, ‘ಓ ಬೆಳಕೆ ಬಾ ಬೆಳಕೆ’ ಎಂಬ ಮಕ್ಕಳ ಪ್ರಾರ್ಥನಾ ಗೀತೆ ಸಿನಿಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಈ ಹಾಡಿನ ವಿಶೇಷವೆಂದರೆ, ಇದರ ಸಾಹಿತ್ಯವನ್ನು ಸ್ವತಃ ಡಾಲಿ ಧನಂಜಯ ಅವರೇ ರಚಿಸಿದ್ದು, ಇದು ಅವರು ಮೊದಲ ಬಾರಿಗೆ ಬರೆದಿರುವ ಮಕ್ಕಳ ಪ್ರಾರ್ಥನಾ ಗೀತೆಯಾಗಿದೆ.

ಈ ಹಿಂದೆ ಪ್ರೇಮಗೀತೆಗಳು ಹಾಗೂ ಹಳ್ಳಿ ಸೊಗಡಿನ ಹಾಡುಗಳ ಮೂಲಕ ಗುರುತಿಸಿಕೊಂಡಿದ್ದ ಡಾಲಿ ಧನಂಜಯ, ಇದೀಗ ಮಕ್ಕಳ ಭಾವನೆಗಳಿಗೆ ಸ್ಪಂದಿಸುವ ಪ್ರಾರ್ಥನಾ ಗೀತೆಯನ್ನು ರಚಿಸುವ ಮೂಲಕ ಹೊಸ ಪ್ರಯೋಗ ಮಾಡಿದ್ದಾರೆ. ಹಾಡಿನ ಸಾಹಿತ್ಯ ಮತ್ತು ಭಾವನಾತ್ಮಕ ನಿರೂಪಣೆ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದೆ.

ಈ ಹಾಡಿನ ಚಿತ್ರೀಕರಣವನ್ನು ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ನಡೆಸಲಾಗಿದೆ. ಮಠದ ಶಾಲೆ, ಅಡುಗೆಮನೆ ಹಾಗೂ ವಿವಿಧ ಸ್ಥಳಗಳಲ್ಲಿ ಮಕ್ಕಳೊಂದಿಗೆ ಇಡೀ ಚಿತ್ರತಂಡ ಒಂದು ದಿನ ಕಾಲ ಕಳೆಯುತ್ತಾ ಸಹಜ ವಾತಾವರಣದಲ್ಲಿ ಹಾಡನ್ನು ಚಿತ್ರಿಸಿದೆ. ಮಕ್ಕಳ ಜೊತೆ ಬೆರೆತು ಚಿತ್ರೀಕರಿಸಿದ ದೃಶ್ಯಗಳು ಹಾಡಿನ ಭಾವನಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಸತತವಾಗಿ ವಾಣಿಜ್ಯ ಹಾಗೂ ರೊಮ್ಯಾಂಟಿಕ್ ಹಾಡುಗಳ ನಡುವೆ ಇಂತಹ ಪ್ರಾರ್ಥನಾ ಗೀತೆ ಬಿಡುಗಡೆಯಾಗಿರುವುದು ಕನ್ನಡ ಚಿತ್ರರಂಗದಲ್ಲಿ ವಿಶೇಷ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ಮದರ್‌ ಪ್ರಾಮಿಸ್‌’ ಚಿತ್ರವನ್ನು ಡಾಲಿ ಪಿಕ್ಚರ್ಸ್ ಸಹಯೋಗದಲ್ಲಿ ಡಾಲಿ ಧನಂಜಯ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಿಸಿದ್ದು, ಈ ಚಿತ್ರದ ಮೂಲಕ ಅವರು ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ನಿರ್ದೇಶಕ ಪೂರ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಭಾವನಾತ್ಮಕತೆ, ಹಾಸ್ಯ ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಕಥೆಯನ್ನು ಪ್ರೇಕ್ಷಕರ ಮುಂದೆ ತರಲಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರೊಂದಿಗೆ ನಾಗಭೂಷಣ್, ವಿನಯ ಪ್ರಸಾದ್, ಗೀತಾ, ಗುರುದತ್ ಸೇರಿದಂತೆ ಹಲವು ಹೊಸ ಕಲಾವಿದರು ಅಭಿನಯಿಸಿದ್ದಾರೆ.

‘ಡೇರ್ ಡೆವಿಲ್ ಮುಸ್ತಾಫ’ ಚಿತ್ರದ ನಿರ್ದೇಶಕ ಶಶಾಂಕ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು, ರಾಹುಲ್ ರಾಯ್ ಅವರ ಛಾಯಾಗ್ರಹಣ ಹಾಗೂ ನವನೀತ್ ಶ್ಯಾಮ್ ಅವರ ಸಂಗೀತ ಚಿತ್ರಕ್ಕಿದೆ.

ಈಗಾಗಲೇ ವಿಭಿನ್ನ ಪ್ರಚಾರ, ಕುತೂಹಲಕಾರಿ ಕಂಟೆಂಟ್ ಹಾಗೂ ಒಂದರ ಹಿಂದೆ ಒಂದರಂತೆ ಬಿಡುಗಡೆಯಾಗುತ್ತಿರುವ ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿರುವ ‘ಮದರ್‌ ಪ್ರಾಮಿಸ್‌’ ಚಿತ್ರವು ಜುಲೈ 10ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande