ಬಾಗಲಕೋಟೆ–ಕುಡಚಿ ರೈಲು ಮಾರ್ಗ ಕಾಮಗಾರಿ ವೇಗದಲ್ಲಿ; 37 ಕಿ.ಮೀ. ಪೂರ್ಣ, ಹಂತ ಹಂತವಾಗಿ ಯೋಜನೆ ಪೂರ್ಣಗೊಳಿಸಲು ಕೇಂದ್ರದ ಭರವಸೆ
ಬಾಗಲಕೋಟೆ, 17 ಜುಲೈ (ಹಿ.ಸ.) ಆ್ಯಂಕರ್ : ಉತ್ತರ ಕರ್ನಾಟಕದ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಬಾಗಲಕೋಟೆ–ಕುಡಚಿ ಹೊಸ ರೈಲು ಮಾರ್ಗ ಯೋಜನೆಯ ಕಾಮಗಾರಿ ಹಂತ ಹಂತವಾಗಿ ಪ್ರಗತಿಯಲ್ಲಿದ್ದು, ಇದುವರೆಗೆ 37 ಕಿಲೋಮೀಟರ್ ರೈಲು ಮಾರ್ಗ ನಿರ್ಮಾಣ ಪೂರ್ಣಗೊಂಡಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾ
ಸೋಮಣ್ಣ


ಬಾಗಲಕೋಟೆ, 17 ಜುಲೈ (ಹಿ.ಸ.)

ಆ್ಯಂಕರ್ : ಉತ್ತರ ಕರ್ನಾಟಕದ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಬಾಗಲಕೋಟೆ–ಕುಡಚಿ ಹೊಸ ರೈಲು ಮಾರ್ಗ ಯೋಜನೆಯ ಕಾಮಗಾರಿ ಹಂತ ಹಂತವಾಗಿ ಪ್ರಗತಿಯಲ್ಲಿದ್ದು, ಇದುವರೆಗೆ 37 ಕಿಲೋಮೀಟರ್ ರೈಲು ಮಾರ್ಗ ನಿರ್ಮಾಣ ಪೂರ್ಣಗೊಂಡಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ರೈಲ್ವೆ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, 142 ಕಿಲೋಮೀಟರ್ ಉದ್ದದ ಈ ಹೊಸ ರೈಲು ಮಾರ್ಗ ಯೋಜನೆಗೆ ಒಟ್ಟು ₹1,378 ಕೋಟಿ ವೆಚ್ಚ ನಿಗದಿಯಾಗಿದ್ದು, 2010–11ನೇ ಸಾಲಿನಲ್ಲಿ ಯೋಜನೆಗೆ ಅನುಮೋದನೆ ದೊರೆತಿತ್ತು. ಯೋಜನೆಯ ವೆಚ್ಚವನ್ನು ರೈಲ್ವೆ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ತಲಾ 50:50 ಅನುಪಾತದಲ್ಲಿ ಭರಿಸುತ್ತಿದ್ದು, ಅಗತ್ಯ ಭೂಮಿಯನ್ನು ರಾಜ್ಯ ಸರ್ಕಾರ ಉಚಿತವಾಗಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಿದೆ.

ಯೋಜನೆಯಡಿ ಮೊದಲ ಹಂತದಲ್ಲಿ ಬಾಗಲಕೋಟೆ–ಖಾಜ್ಜಿಡೋಣಿ ನಡುವಿನ 30 ಕಿಲೋಮೀಟರ್ ಹಾಗೂ ಖಾಜ್ಜಿಡೋಣಿ–ಲೋಕಾಪುರ ನಡುವಿನ 7 ಕಿಲೋಮೀಟರ್ ಸೇರಿ ಒಟ್ಟು 37 ಕಿಲೋಮೀಟರ್ ರೈಲು ಮಾರ್ಗ ನಿರ್ಮಾಣ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.

ಪ್ರಸ್ತುತ ಲೋಕಾಪುರ–ಯಾದವಾಡ ನಡುವಿನ 23 ಕಿಲೋಮೀಟರ್ ಉದ್ದದ ರೈಲು ಮಾರ್ಗ ಕಾಮಗಾರಿ ಭರದಿಂದ ಸಾಗುತ್ತಿದ್ದು, 2027ರ ಮಾರ್ಚ್ ವೇಳೆಗೆ ಈ ವಿಭಾಗವನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಇದರ ನಂತರ ಯಾದವಾಡ–ಜಮಖಂಡಿ ರಸ್ತೆ ನಡುವಿನ 25 ಕಿಲೋಮೀಟರ್ ವಿಭಾಗದ ಕಾಮಗಾರಿಯನ್ನು ಆರಂಭಿಸಿ, 2028ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಉಳಿದ ವಿಭಾಗಗಳ ಕಾಮಗಾರಿಯನ್ನೂ ನಿಗದಿತ ವೇಳಾಪಟ್ಟಿಯಂತೆ ಪೂರ್ಣಗೊಳಿಸಿ, ಸಂಪೂರ್ಣ ಯೋಜನೆಯನ್ನು ಆದಷ್ಟು ಬೇಗ ಜನಸೇವೆಗೆ ಸಮರ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಬಾಗಲಕೋಟೆ–ಕುಡಚಿ ರೈಲು ಮಾರ್ಗ ಪೂರ್ಣಗೊಂಡ ಬಳಿಕ ಬಾಗಲಕೋಟೆ, ಜಮಖಂಡಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ಬೆಳಗಾವಿ ಹಾಗೂ ದಕ್ಷಿಣ ಮಹಾರಾಷ್ಟ್ರದೊಂದಿಗೆ ನೇರ ರೈಲು ಸಂಪರ್ಕ ಲಭ್ಯವಾಗಲಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ಕೈಗಾರಿಕೆ, ಕೃಷಿ ಉತ್ಪನ್ನಗಳ ಸಾಗಣೆ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande